ತ್ರಿವರ್ಣ ಧ್ವಜ ಅಭಿಯಾನದ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಇಂದು ಸಾವಿರಾರು ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ನಗರದಾದ್ಯಂತ ಮೆರವಣಿಗೆ ನಡೆಯಿತು.
ಕಾರವಾರ (ಆ.13): 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ, ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನದ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಇಂದು ಸಾವಿರಾರು ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ನಗರದಾದ್ಯಂತ ಮೆರವಣಿಗೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕಿ ರೂಪಾಲಿ ನಾಯ್ಕ್, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ್ ನಾಯ್ಕ್, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ್ ಹಾಗೂ ಇತರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ಬಳಿಕ ಮಾಧ್ಯಮದ ಜತೆ ಮಾತನಾಡಿದ ಸಚಿವರು, ದೇಶದ ಹಾಗೂ ಪ್ರತಿಯೊಂದು ಮನೆಗಳಲ್ಲೂ ಇಂದು ತ್ರಿವರ್ಣ ಧ್ವಜ ಹಾರಾಡ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಉತ್ತರಕನ್ನಡ ಜಿಲ್ಲೆ ಮಹತ್ತರ ಕೊಡುಗೆ ನೀಡಿದೆ. ಜಿಲ್ಲೆಯ ಎರಡೂವರೆ ಲಕ್ಷ ಜನರು ದೇಶ ಮೊದಲು ಎಂದು ರಾಷ್ಟ್ರಧ್ವಜ ಹಾರಿಸಿ ಸಂಭ್ರಮಿಸುತ್ತಿದ್ದಾರೆ. ಇದಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾವು ಆಭಾರಿಯಾಗಿದ್ದೇವೆ ಎಂದು ಹೇಳಿದರು.
ಬಳಿಕ ಪರೇಶ್ ಮೇಸ್ತಾ ಪ್ರಕರಣದ ಎ1 ಆರೋಪಿಗೆ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಹುದ್ದೆ ನೀಡಿದ್ದ ಹಿನ್ನೆಲೆ ಸ್ಪಷ್ಟನೆ ನೀಡಿದ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ವಕ್ಫ್ ಮಂಡಳಿ ಚುನಾವಣಾ ಪ್ರಕ್ರಿಯೆ ನಡೆಯುವ ವ್ಯವಸ್ಥೆ. ವಕ್ಫ್ ಮಂಡಳಿಗೆ ನಮ್ಮಕಡೆಯಿಂದ ಶೇ.50 ಜನ ವಿರೋಧ ಪಕ್ಷದಿಂದ ಶೇ.50 ಜನ ಕೊಡಬೇಕು ಎಂಬ ತೀರ್ಮಾನ ಆಗಿತ್ತು. ನಾವು ಕೊಟ್ಟ ಪಟ್ಟಿಯಲ್ಲಿ ಯಾವುದೇ ಗೊಂದಲವಿರಲಿಲ್ಲ. ಆದ್ರೆ, ವಿರೋಧ ಪಕ್ಷದವರು ಕೊಟ್ಟ ಪಟ್ಟಿಯಲ್ಲಿ ಆಜಾದ್ ಅಣ್ಣಿಗೇರಿ ಹೆಸರು ಅಡಕವಾಗಿತ್ತು. ಇದು ಸರಿಯಲ್ಲ ಎಂದು ನಾನು ಹೇಳಿದಾಗ ಈ ಪಟ್ಟಿಯನ್ನು ರದ್ದು ಮಾಡಿದ್ದಾರೆ. ನಮಗೆ ಬಹುಮತ ಇಲ್ಲದ ಕ್ಷೇತ್ರವಾಗಿದ್ರಿಂದ ರಾಜಿ ಸಂಧಾನ ವಿಚಾರ ಸಂಬಂಧಿಸಿ ವಿರೋಧ ಪಕ್ಷದವರು ಪಟ್ಟಿ ನೀಡಬಹುದು.
ಆದರೆ, ಮಾಹಿತಿ ದೊರಕಿದ ಕೂಡಲೇ ಸರಕಾರ ಪಟ್ಟಿಯನ್ನು ರದ್ದುಗೊಳಿಸಿದೆ ಎಂದು ಹೇಳಿದರು. ಮೇಸ್ತಾ ಪ್ರಕರಣದ ಆರೋಪಿಗೆ ಸ್ಥಾನ ನೀಡುವ ಮೂಲಕ ಬಿಜೆಪಿ ರಾಜಕೀಯ ಮಾಡಿದೆ ಎಂದು ಸಿದ್ಧರಾಮಯ್ಯ ಆರೋಪಕ್ಕೆ ಪ್ರತಿಕ್ರಯಿಸಿದ ಅವರು, ಸಿದ್ಧರಾಮಯ್ಯನವರ ಪಕ್ಷದವರೇ ಪಟ್ಟಿ ನೀಡಿರುವುದಾಗಿ ಮಾಹಿತಿಯಿದೆ. ಆದರೆ, ಅವರ ಪಕ್ಷದವರಲ್ಲ ಎಂದು ಅವರೇ ಹೇಳಬೇಕಾಗಿದೆ ಎಂದು ವ್ಯಂಗ್ಯವಾಡಿದರು. ಇನ್ನು ಬಿಜೆಪಿಯ ಮೇಲೆ ಪ್ರಿಯಾಂಕ್ ಖರ್ಗೆ ಲಂಚದ ಆರೋಪ ಮಾಡಿರುವ ವಿಚಾರ ಬಗ್ಗೆ ಮಾತನಾಡಿದ ಸಚಿವರು, ಇಂತಹ ಹೇಳಿಕೆಗೆ ಪ್ರತಿಕ್ರಿಯೆ ನೀಡುವಂತಹ ಸಣ್ಣ ಮಟ್ಟಕ್ಕೆ ಯಾವ ರಾಜಕಾರಣಿಯೂ ಇಳೀಬಾರ್ದು. ಅವರು ಹೇಳಿದ ಮಾತುಗಳು ಸಾರ್ವಜನಿಕ ಜೀವನಕ್ಕೆ ಗೌರವ ತರುವುದಿಲ್ಲ ಎಂದು ತಿರುಗೇಟು ನೀಡಿದರು.
ಕಲ್ಯಾಣ ನಾಡಿನಲ್ಲಿ ಕಣ್ಮನ ಸೆಳೆಯುತಿದೆ ಬೃಹತ್ ರಾಷ್ಟ್ರ ಧ್ವಜ, ರೈತನ ರಾಷ್ಟ್ರಭಕ್ತಿಗೆ ಸಾರ್ವಜನಿಕರ ಸಲಾಂ..!
ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಮತ್ತೆ ಪ್ರಾರಂಭಿಸಿರುವ ಬಗ್ಗೆ ಮಾತನಾಡಿದ ಸಚಿವ ಕೋಟಾ, ಚುನಾವಣಾ ಪ್ರಣಾಳಿಕೆಯಲ್ಲಿಯೂ ನಾವು ಲೋಕಾಯುಕ್ತ ಅಸ್ಥಿತ್ವಕ್ಕೆ ತರುವುದಾಗಿ ಹೇಳಿದ್ದೆವು. ಬೇರೆ ಬೇರೆ ಕಾರಣಗಳಿಂದ ಎಸಿಬಿ ರದ್ದು ಮಾಡುವ ಹಾಗೂ ಈ ಕುರಿತ ತನಿಖೆ ಹೈ ಕೋರ್ಟ್‌ನಲ್ಲಿ ಬಾಕಿಯಿತ್ತು. ಈ ಕಾರಣದಿಂದ ಯಾವುದೇ ನಿರ್ಧಾರ ನಾವು ಮಾಡಿರಲಿಲ್ಲ. ಪ್ರಸ್ತುತ ರಾಜ್ಯದ ಉಚ್ಛ ನ್ಯಾಯಾಲಯ ಎಸಿಬಿ ರದ್ದು ಪಡಿಸಿ ಲೋಕಾಯುಕ್ತ ಬಲಪಡಿಸಲು ಸೂಚಿಸಿದೆ. ಈ ಹಿನ್ನೆಲೆ ಎಸಿಬಿ ರದ್ದು ಮಾಡಿ ಲೋಕಾಯುಕ್ತ ಬಲಪಡಿಸುತ್ತೇವೆ ಎಂದರು.
ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರಧಾನಿ ಮೋದಿ ತಾಯಿ ಬೆಂಬಲ: ಮಕ್ಕಳಿಗೆ ರಾಷ್ಟ್ರಧ್ವಜ ಹಂಚಿದ ಶತಾಯುಷಿ
ಇನ್ನು ಧ್ಚಜ ನಿರ್ಮಾಣಕ್ಕೆ ಖಾದಿ ಉದ್ಯಮಕ್ಕೆ ಬಿಜೆಪಿ ಬೆಂಬಲ ನೀಡಿಲ್ಲ ಎಂದು ಸಿದ್ಧರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಖಾದಿ ಉದ್ಯಮದಲ್ಲಿ ಎಷ್ಟು ದೊರೆಯುತ್ತದೆ ಅಷ್ಟನ್ನೂ ಪಡೆದುಕೊಂಡಿದ್ದೇವೆ. ಸಿದ್ಧರಾಮಯ್ಯನವರು ಟೀಕೆ ಮಾಡೋವಾಗ ಯೋಚನೆ ಮಾಡಿ ಮಾಡಬೇಕು ಎಂದ ಅವರು, ರಾಷ್ಟ್ರಧ್ವಜಕ್ಕಿಂತ ಬಿಜೆಪಿಗೆ ಭಗವಾಧ್ಚಜದ ಮೇಲೆ ಪ್ರೀತಿ ಎಂದು ಸಿದ್ಧರಾಮಯ್ಯ ಹೇಳಿಕೆಗೆ ಕೋಟಾ ತಿರುಗೇಟು ನೀಡಿದ್ದಾರೆ. ಸಿದ್ಧರಾಮಯ್ಯನವರ ಮಾನಸಿಕತೆ ಇದ್ದವರೇ ತಿರಂಗ ಧ್ಚಜ ಹಾರಿಸ್ತೇವೆ ಎಂದು ನಮ್ಮ ಸಂಘದ ಕಡೆ ಬಂದಿದ್ದಾರೆ. ಅಂತವರಿಗೆ ಸಿಹಿ ಕೊಟ್ಟು ಸ್ವಾಗತ ಮಾಡಿದ್ದೇವೆ, ಆದ್ರೆ, ಅವರು ವಾಪಾಸ್ ಹೋಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.