ತೂಗಿರೇ ಹನುಮಾನ್... ತೂಗಿರೇ ವಾಯುಪುತ್ರನ
ಹುಬ್ಬಳ್ಳಿಯಲ್ಲಿ ಅರ್ಥಪೂರ್ಣ ಹನುಮಾನ್ ಜಯಂತಿ ಆಚರಣೆ
ಕೇಶ್ವಾಪೂರದ ನಾಗಶೆಟ್ಟಿಕೊಪ್ಪ ಆಂಜನೇಯ ದೇವಸ್ಥಾನಕ್ಕೆ ವೆ ಹರಿದು ಬಂದ ಭಕ್ತ ಸಾಗರ
ಹುಬ್ಬಳ್ಳಿ, (ಏ.16):: ವಾಣಿಜ್ಯನಗರಿ ಹುಬ್ಬಳ್ಳಿ ಧಾರ್ಮಿಕ ಆಚರಣೆಗೆ ಹೆಸರಾಗಿದೆ. ಹೋಳಿ ಹಬ್ಬವೇ ಬರಲಿ, ಗಣೇಶನ ಚತುರ್ಥಿ ಇರಲಿ, ಯಾವುದೇ ಆಚರಣೆ ಬಂದರೂ ವಿಭಿನ್ನವಾಗಿ, ವಿನೂತನ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡುವುದು ನಮ್ಮ ಹುಬ್ಬಳ್ಳಿ ಜನರ ಸಂಪ್ರದಾಯ, ಈ ಬಾರಿಯ ಹನುಮಾನ್ ಜಯಂತಿಯನ್ನು ಅತ್ಯಂತ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ.
ಹೌದು... ಹನುಮಾನ್ ಜಯಂತಿ ಪ್ರಯುಕ್ತ ಹುಬ್ಬಳ್ಳಿಯ ಕೇಶ್ವಾಪೂರದ ನಾಗಶೆಟ್ಟಿಕೊಪ್ಪ ಆಂಜನೇಯ ದೇವಸ್ಥಾನಕ್ಕೆ ಇಂದು(ಶನಿವಾರ) ಭಕ್ತ ಸಾಗರವೆ ಹರಿದು ಬಂದಿತ್ತು, ಇಡೀ ದೇವಸ್ಥಾನವನ್ನು ವಿವಿಧ ಬಗೆಯ ಪುಸ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯ ಭಕ್ತರು ಸರದಿ ಸಾಲಿನಲ್ಲಿ ನಿಂತು ವಾಯು ಪುತ್ರನ ದರ್ಶನ ಪಡೆದರು. ಇನ್ನು ಬಮ್ಮಾಪೂರ ಓಣಿ ಆಂಜನೇಯ ದೇವಸ್ಥಾನದಲೂ ವಿವಿಧ ದಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೂರಾರು ಮಹಿಳೆಯರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ತೊಟ್ಟಿಲು ತೂಗುವ ಮೂಲಕ ತೂಗಿರೇ ಹನುಮಾನ್... ತೂಗಿರೇ ವಾಯುಪುತ್ರನ.. ಎಂದು ಜೋಗುಳ ಹಾಡುವ ಮೂಲಕ ಸಾಂಪ್ರದಾಯಿಕ ಹನುಮಾನ್ ಜಯಂತಿ ಆಚರಣೆ ಮಾಡಿದ್ದು, ಹುಬ್ಬಳ್ಳಿಯ ಆಚರಣೆಗೆ ಹಿಡಿದ ಕೈಗನ್ನಡಿಯಾಗಿದೆ.
ಇಂದು ಹನುಮ ಜಯಂತಿ; ಮಹತ್ವ, ಆಚರಣೆ ಬಗ್ಗೆ ಇಲ್ಲಿದೆ ಪಂಚಾಂಗ ಫಲ
ಬೆಳ್ಳಂಬೆಳಿಗ್ಗೆ ಹನುಮಂತ ದೇವರಿಗೆ ವಿಶೇಷ ಅಲಂಕಾರಿಕ ಪೂಜೆ ಪುನಸ್ಕಾರ ನೆರವೇರಿಸಿದ ಮಹಿಳೆಯರು ಉಡಿ ತುಂಬಿಕೊಂಡು ಹನುಮಾನ್ ಮೂರ್ತಿಯನ್ನು ತೊಟ್ಟಿಲಿಗೆ ಹಾಕುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ದಗದ ರಸ್ತೆಯ ಒಂಟಿ ಹನುಮಾನ್ ದೇವಸ್ಥಾನದಲ್ಲೂ ಭಕ್ತರ ದಂಡೇ ಸೇರಿತ್ತು, ಸುಡುಬಿಸಲು ಲೆಕ್ಕಿಸದೇ ಮಹಿಳೆಯರು- ಮಕ್ಕಳು ದೂರದಿಂದ ನಡೆದುಕೊಂಡೇ ಬಂದು ದರ್ಶನ ಪಡೆದರು. ಇನ್ನು ಹನುಮಾನ್ ಜಯಂತಿ ಪ್ರಯುಕ್ತ ಸಂಜೆ ನಾಗಶೆಟ್ಟಿಕೊಪ್ಪದಲ್ಲಿ ರಥೋತ್ಸವ ನಡೆಯಲಿದ್ದು, ಸಂಜೆ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿವೆ.
ಇನ್ನೂ ಇತ್ತೀಚೆಗೆ ಮುಸ್ಲಿಂ ವ್ಯಾಪರಿಯ ಕಲ್ಲಂಗಡಿ ಹಣ್ಣಿನ ಅಂಗಡಿ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ನಡೆಸಿದ ದಾಳಿಯಿಂದ ಸುದ್ದಿಯಾಗಿದ್ದ ಧಾರವಾಡದ ನುಗ್ಗಿ ಕೆರೆ ಆಂಜನೇಯ ದೇವಸ್ಥಾನದಲೂ ಹನುಮಾನ್ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು. ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಾಮ ಬಂಟನ ದರ್ಶನಪಡೆದು. ಜೈ ಹನುಮಾನ್ ಎಂದು ಘೋಷಣೆ ಮೊಳಗಿಸಿದ್ರು.