ಗೌರಿ ಹಬ್ಬಕ್ಕೆ ಪಟಾಕಿ ಹೊಡೆದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ: ಹಾಲಸಮುದ್ರ ಗ್ರಾಮದಲ್ಲಿ ರಣರಂಗ! ನಡೆದಿದ್ದೇನು?

Kannadaprabha News   | Kannada Prabha
Published : Nov 27, 2026, 08:42 AM IST
Halasamudra village clash

ಸಾರಾಂಶ

ಕಾರಟಗಿಯ ಹಾಲಸಮುದ್ರದಲ್ಲಿ ಗೌರಿ ಹಬ್ಬದ ವೇಳೆ ಪಟಾಕಿ ಸಿಡಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮನೆಗಳ ಮೇಲೂ ದಾಳಿ ನಡೆದಿದ್ದು, ಪೊಲೀಸರು 17 ಜನರನ್ನು ವಶಕ್ಕೆ ಪಡೆದು, ಎರಡೂ ಕಡೆಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ.

ಕಾರಟಗಿ (ನ.27): ತಾಲೂಕಿನ ಬೂದುಗುಂಪಾ ಗ್ರಾಪಂ ವ್ಯಾಪ್ತಿಯ ಹಾಲಸಮುದ್ರ ಗ್ರಾಮ(Halasamudra village)ದಲ್ಲಿ ಗೌರಿ ಹಬ್ಬ(Gauri Habba)ದ ನಿಮಿತ್ತ ಪಟಾಕಿ ಸಿಡಿಸಿದ ವಿಚಾರವಾಗಿ ಉಂಟಾದ ಮಾತಿನ ನಡೆದು ಎರಡು ಗುಂಪುಗಳ ನಡುವೆ ಘರ್ಷಣೆಯಾದ ನಡೆದ ಘಟನೆ ಬುಧವಾರ ರಾತ್ರಿ ನಡೆದಿದ್ದು ಘಟನೆ ಸಂಬಂಧ 17 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೊಡೆದಾಟದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಓರ್ವನ ತಲೆಗೆ ತೀವ್ರ ಪೆಟ್ಟಾಗಿದೆ. ರಕ್ತಸ್ರಾವದ ಕಾರಣಕ್ಕೆ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಲಾಟೆ ನಿಯಂತ್ರಣಕ್ಕೆ ತೆರಳಿದ ಪೊಲೀಸ್ ಪೇದೆಗಳಿಗೂ ಗಾಯಗಳಾಗಿವೆ.

ಹಾಲಸಮುದ್ರ ಗ್ರಾಮದಲ್ಲಿ ಘಟನೆ ಗುಂಪು ಘರ್ಷಣೆಗೆ ಕಾರಣವೇನು?

ಗ್ರಾಮದಲ್ಲಿ ಸಂಜೆಯವರೆಗೂ ಸಂಭ್ರಮದಿಂದಲೇ ಮಹಿಳೆಯರು ಗೌರಿ ಹಬ್ಬ ಅಚರಣೆ ಮಾಡಿದ್ದಾರೆ. ರಾತ್ರಿ ಕೆಲ ಮಹಿಳೆಯರು ಆರತಿ ತಟ್ಟೆ ಹಿಡಿದು ರಸ್ತೆಯಲ್ಲಿ ಹೊರಟಿದ್ದಾಗ ಒಂದು ಗುಂಪಿಗೆ ಸೇರಿದ ಯುವಕರು ಪಟಾಕಿ ಹಚ್ಚಿದ್ದಾರೆ. ಆಗ ಎರಡು ಗುಂಪುಗಳ ನಡುವೆ ಮೊದಲು ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಗಲಾಟೆ, ಮಾರಾಮಾರಿ ಘರ್ಷಣೆಗೆ ತಿರುಗಿದೆ.

ಈ ವೇಳೆ ಗುಂಪೊಂದು ಉದ್ರಿಕ್ತಗೊಂದು ಮನೆಗಳಿಗೆ ನುಗ್ಗಿ ದಾಂದಲೆ ನಡೆಸಿದೆ. ಕೆಲವರು ಕಾರದ ಪುಡಿ ಎರಚಿದ್ದಾರೆ. ಗುಂಪುಗೂಡಿ ಮನೆಗಳಿಗೆ ಮೇಲೆ ದಾಳಿ ನಡೆಸಿ, ಬಾತ್‌ರೂಮ್ ಬಾಗಿಲು, ಕಿಟಕಿಗಳ ಗಾಜುಗಳನ್ನು ಒಡೆದು ಹಾನಿ ಮಾಡಿದ್ದಾರೆ ಎನ್ನಲಾಗಿದೆ. ಗಲಾಟೆಯನ್ನು ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಮಾಡುತ್ತಿದ್ದವರ ಮೇಲೆಯೂ ಕಲ್ಲು ತೂರಾಟ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಕಾರಟಗಿ ಪೊಲೀಸ್ ಠಾಣೆಯಲ್ಲಿ ಒಂದು ಗುಂಪಿನವರು ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗ್ರಾಮದಲ್ಲಿ 3 ಡಿಆರ್ ವ್ಯಾನ್, ಒಬ್ಬ ಪಿಐ, ಗಂಗಾವತಿ ಮತ್ತು ಕನಕಗಿರಿ ಪಿಎಸ್‌ಐಗಳು ಬಿಡಾರ ಹೂಡಿದ್ದಾರೆ.

ಹಾಲಸಮುದ್ರ ಗ್ರಾಮಕ್ಕೆ ಎಸ್ಪಿ ಭೇಟಿ:

ಹಾಲಸಮುದ್ರದಲ್ಲಿ ತಡರಾತ್ರಿ ನಡೆದ ಘಟನೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಗುರುವಾರ ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಬಳಿಕ ಘಟನೆ ಸ್ಥಳವಾದ ವಾಲ್ಮೀಕಿ ದೇವಸ್ಥಾನ, ಬಸವೇಶ್ವರ ಪುತ್ಥಳಿ ಸ್ಥಾಪನೆ ಮಾಡುವ ಸ್ಥಳವನ್ನು ಅವರು ಪರಿಶೀಲಿಸಿದರು. ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್ ಮತ್ತು ಪಿಐ ಸುಧೀರ್ ಬೆಂಕಿ ಸ್ಥಳದಲ್ಲಿ ಇದ್ದು ಘಟನೆಯ ವಿವರವನ್ನು ನೀಡಿದರು.

65 ಜನರ ವಿರುದ್ಧ ಜಾತಿ ನಿಂದನೆ ಪ್ರಕರಣ:

ಘಟನೆಗೆ ಸಂಬಂಧಿಸಿದಂತೆ ಚೆನ್ನಬಸಪ್ಪ ಅಂಜನಪ್ಪ ಸಿದ್ದಾಪುರ ಎನ್ನುವವರು ನೀಡಿದ ದೂರಿನ ಹಿನ್ನೆಲೆಯಲ್ಲ್ಲಿ ಕಾರಟಗಿ ಠಾಣೆಯಲ್ಲಿ ಒಟ್ಟು 65 ಜನರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಗುರುವಾರ ಸಂಜೆಯವರೆಗೂ ಸುಮಾರು 17 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಚೆನ್ನಮ್ಮ ಹೆಸರು ಬಳಕೆ ಸಲ್ಲ:

ಘಟನೆ ಹಿನ್ನೆಲೆಯಲ್ಲಿ ಆರೋಪಿ ಯುವಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಹಿನ್ನೆಲೆಯಲ್ಲಿ ತಾಲೂಕಿನ ವಾಲ್ಮೀಕಿ ಸಮಾಜದ ಅಧ್ಯಕ್ಷ ಬೂದಿಗಿರಿಯಪ್ಪ ಮತ್ತು ಕಾರ್ಯದರ್ಶಿ ಸೋಮನಾಥ ಹೆಬ್ಬಡದ ಈ ಕೃತ್ಯ ಖಂಡಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವೀರರಾಣಿ ಕಿತ್ತೂರು ಚೆನ್ನಮ್ಮ ರಾಣಿಯ ಮೂರ್ತಿ ಮೇಲೆ ದಾಳಿ ಎನ್ನುವುದು ಸುಳ್ಳು ಸುದ್ದಿ. ದೌರ್ಜನ್ಯ ಮತ್ತು ಕೊಲೆ ಯತ್ನವನ್ನು ಮರೆಮಾಚಲು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಅಂಥವರ ವಿರುದ್ಧ ಕ್ರಮಕ್ಕೆ ಸಮಾಜ ಒತ್ತಾಯಿಸಿತು.

ಹಾಲಸಮುದ್ರ ಗ್ರಾಮದಲ್ಲಿ ಗೌರಿಹುಣ್ಣಿಮೆ ದಿನ ನಾಯಕ ಸಮಾಜದವರು ಪ್ರತಿ ವರ್ಷದಂತೆ ಈಶ್ವರ ದೇವಸ್ಥಾನದಲ್ಲಿ ಗೌರಿ ಪ್ರತಿಷ್ಠಾಪಿಸುತ್ತಾರೆ. ಆದರೆ, ಇದನ್ನು ವಿರೋಧಿಸಿ ಕೆಲವರು ಗೌರಿ ಮೂರ್ತಿಯನ್ನು ತೆರವುಗೊಳಿಸಿ ಪಕ್ಕದ ಆಂಜನೇಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದರು. ಇದನ್ನು ಸಹಿಸದೆ ಕೆಲ ಗುಂಪು ಕಾರಪುಡಿ, ಕಟ್ಟಿಗೆ ಬಡಿಗೆಗಳಿಂದ ಗುಂಪುಕಟ್ಟಿಕೊಂಡು ವಾಲ್ಮೀಕಿ ಸಮಾಜದವರ ಮೇಲೆ ದಾಳಿ ನಡೆಸಿದ್ದಾರೆ ಎಂದರು.

ಪ್ರತಿ ದೂರು:

ಮತ್ತೊಂದೆಡೆ ಗ್ರಾಮದ ಪಾರ್ವತಮ್ಮ ಅಮರೇಶಪ್ಪ 65 ಜನರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ದೂರು ಪಡೆದ ಕಾರಟಗಿ ಪೊಲೀಸರು 65 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇನ್ನು ಯಾರನ್ನು ಬಂಧಿಸಿಲ್ಲ ಎಂದು ತಿಳಿದು ಬಂದಿದೆ.

PREV
Read more Articles on
click me!

Recommended Stories

ಬಿ.ಎಸ್. ಯಡಿಯೂರಪ್ಪ ಮೊಮ್ಮಗ ಭಗತ್‌-ಖುಷಿ ಅದ್ಧೂರಿ ನಿಶ್ಚಿತಾರ್ಥ: ಫೋಟೋ ಹಂಚಿಕೊಂಡ ಸಂಸದ ಬಿ.ವೈ. ರಾಘವೇಂದ್ರ
ಇದೇ ಮೊದಲ ಬಾರಿಗೆ ಕೆಎಎಸ್ ಪರೀಕ್ಷೆಯ 11 ದಿನದಲ್ಲೇ ರಿಸಲ್ಟ್‌, ಎಲ್ಲರ ಅಂಕ ಬಹಿರಂಗ! ಪಾರದರ್ಶಕತೆಯತ್ತ ಮಹತ್ವದ ಹೆಜ್ಜೆ