
ಬೆಂಗಳೂರು (ನ.27): ‘ಆಶಾ ಕಾರ್ಯಕರ್ತೆಯರಿಗೆ ಲಿಖಿತವಾಗಿ ಭರವಸೆ ಕೊಡಲು ಅವಕಾಶವಿಲ್ಲ, ಸಾಧ್ಯವೂ ಇಲ್ಲ. ಇದರಲ್ಲಿ ರಾಜಕೀಯ ಇರುವುದು ನನಗೆ ಗೊತ್ತಿದೆ. ರೈಟಿಂಗ್‌ನಲ್ಲಿ ಬರೆದುಕೊಡಿ ಅಂತಾ ಕೇಳುತ್ತಿದ್ದಾರೆ. ಆದರೆ, ಯಾವ ಸರ್ಕಾರ ಬರೆದುಕೊಟ್ಟಿದೆ? ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಿದಾಗ ಯಾವಾಗಲಾದರೂ ರೈಟಿಂಗ್‌ನಲ್ಲಿ ಭರವಸೆ ಕೊಟ್ಟಿದ್ದಾರೆಯೇ? ಹಾಗೆಲ್ಲ ಬರೆದು ಕೊಡಲು ಆಗುವುದಿಲ್ಲ. ಬ್ಲ್ಯಾಕ್‌ಮೇಲ್ ಮಾಡಬೇಡಿ. ನಿಮ್ಮ ಬಗ್ಗೆ ನಮಗೆ ಸಹಾನುಭೂತಿ ಇದೆ. ನಮ್ಮ ಮೇಲೆ ವಿಶ್ವಾಸವಿಡಿ ಎಂದು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದೇನೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.
ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಶಾ ಕಾರ್ಯಕರ್ತರು 10 ದಿನದಿಂದ ಮುಷ್ಕರ ನಡೆಸುತ್ತಿದ್ದ ಲಿಖಿತ ಭರವಸೆ ಬೇಕೆಂದು ಕೇಳುತ್ತಿದ್ದಾರೆ. ಈ ಬಗ್ಗೆ ಮೈಸೂರು, ಬೆಂಗಳೂರು ಹಾಗೂ ಕೊಪ್ಪಳದಲ್ಲಿ ಪ್ರತ್ಯೇಕವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್, ‘ಸಿಎಂ ಮಾತಿನ ಮೇಲೆ ನಂಬಿಕೆ ಇಲ್ಲವೆಂದರೆ ನಾನೇನು ಮಾಡಲು ಸಾಧ್ಯ? ನಮ್ಮ ಮಾತಿಗೆ ಗೌರವ ಕೊಡಿ ಅಂತ ತಾಯಂದಿರ ಬಳಿ ವಿನಮ್ರವಾಗಿ ಮನವಿ ಮಾಡುವೆ’ ಎಂದರು.
ಈಗ ಒಬ್ಬರಿಗೆ ಲಿಖಿತ ರೂಪದಲ್ಲಿ ಭರವಸೆ ನೀಡಿದರೆ ಮುಂದೆ ಎಲ್ಲರಿಗೂ ಲಿಖಿತ ಭರವಸೆಯನ್ನೇ ಕೊಡಬೇಕಾಗುತ್ತದೆ. ಇದು ಇಡೀ ರಾಜ್ಯದಲ್ಲಿ ಶುರುವಾಗುತ್ತದೆ. ಸರ್ಕಾರಕ್ಕೂ ಒಂದು ಮಿತಿ ಇದೆ. ಸರ್ಕಾರದ ವಿವಿಧ 17 ಇಲಾಖೆಗಳಲ್ಲಿ ವಿವಿಧ ಬೇಡಿಕೆಗಳಿವೆ. ಎಲ್ಲರಿಗೂ ಲಿಖಿತ ಉತ್ತರ ನೀಡಲು ಸಾಧ್ಯವಿಲ್ಲ. ಕ್ಯಾಬಿನೆಟ್, ಅಸೆಂಬ್ಲಿಯಲ್ಲಿ ಈ ಬಗ್ಗೆ ಚರ್ಚೆ ಮಾಡ್ತೀವಿ. ಅವರು ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡಲು ಸಾಧ್ಯವಿಲ್ಲ. ಯಾರನ್ನೂ ಬ್ಲ್ಯಾಕ್ ಮೇಲ್ ಮಾಡಲು ಆಗಲ್ಲ’ ಎಂದರು.
‘ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿದ್ದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರದ ಮುಂದೆ ಇದನ್ನು ಅವರು ಯಾಕೆ ತರುತ್ತಿಲ್ಲ? ಕೇವಲ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಹೋಗಿ ಬಂದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಏಕೆ ಒತ್ತಡ ಹೇರುತ್ತಿಲ್ಲ? ಈ ವಿಚಾರದಲ್ಲಿ ಅವರ ಜವಾಬ್ದಾರಿ ಕೂಡ ಇದೆ. ಇದರಲ್ಲಿ ರಾಜಕೀಯ ಇರುವುದು ನನಗೆ ಗೊತ್ತಿದೆ. ಆಶಾ ಕಾರ್ಯಕರ್ತೆಯರು ನನ್ನ ಸಂಪರ್ಕದಲ್ಲಿಯೂ ಇದ್ದಾರೆ. ‘ಅವರು ನಿಮ್ಮ ಮೇಲೆ ವಿಶ್ವಾಸವಿದೆ, ಕೆಲಸಕ್ಕೆ ಹೋಗಲು ಸಿದ್ಧವಿದ್ದೇವೆ’ ಎಂದು ಹೇಳುತ್ತಿದ್ದಾರೆ. ಆದರೆ, ಸಂಘಟನೆಯನ್ನು ಭಾಗ ಮಾಡಬಾರದು ಎಂದು ನಾನು ಸುಮ್ನನಿದ್ದೇನೆ’ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲಾಗುವುದು. ಮೊದಲು ಅವರು ಪ್ರತಿಷ್ಠೆ ಬಿಡಬೇಕು. ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಶುಕ್ರವಾರ ಕಾರ್ಯಕರ್ತೆಯರ ಜೊತೆ ಮಾತುಕತೆ ನಡೆಸುತ್ತೇನೆ. ಆದ್ದರಿಂದ ಪ್ರತಿಭಟನೆ ಕೈಬಿಡಬೇಕು ಎಂದು ಅವರು ಮನವಿ ಮಾಡಿದರು.