
ಮೈಸೂರು (ಜು.26): ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತ ಮೈಸೂರನ್ನ ಅಭಿವೃದ್ಧಿ ಮಾಡಿದ್ದು ಸಿದ್ದರಾಮಯ್ಯ ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿರುಗೇಟು ಕೊಟ್ಟಿದ್ದಾರೆ. ಇದು ದುರಹಂಕಾರದ ಪರಮಾವಧಿ. ಸಿದ್ದರಾಮಯ್ಯ ಯಾವಾಗಲೂ ನಾನೇ ನಾನೇ ಅಂತಾರೆ. ದೇವರಾಜ ಅರಸುಗಿಂತಾ ನಾನೇ ಒಳ್ಳೆ ಆಡಳಿತ ಕೊಟ್ಟಿದ್ದು ಅಂತಾರೆ.ನಾನೇ ನಾನೇ ಎನ್ನುವ ಅಹಂ, ದುರಹಂಕಾರ ಸಿದ್ದರಾಮಯ್ಯ ಕುಟುಂಬದಲ್ಲಿ ವಂಶವಾಹಿ ರೀತಿ ಹರಿದು ಬಂದಿದೆ ಎಂದು ಹೇಳಿದ್ದಾರೆ
ಸಿದ್ದರಾಮಯ್ಯ ಹಾಗೂ ಅವರ ಮಗ ಮನುಷ್ಯ ದ್ವೇಷಿಗಳ ಥರ ಮಾತಾಡುತ್ತಿದ್ದಾರೆ. ನಮ್ಮ ಕಡೆ ಈ ರೀತಿ ಮಾತಾಡುವವರಿಗೆ ಎಚ್ಎಂ ಎನ್ನುತ್ತಾರೆ. ಎಚ್ಎಂ ಅಂದರೆ ಹುಚ್ಚು ಮುಂಡೇದು ಅಂತ. ಯತೀಂದ್ರ ಸಿದ್ದರಾಮಯ್ಯ ಇನ್ನೂ ಬೆಳೆಯುವ ಹುಡುಗ. ಈಗಲೇ ಈ ಥರದ ದುರಹಂಕಾರದ ಮಾತು ಸರಿಯಲ್ಲ. ನಾಲ್ವಡಿ ಆಡಳಿತ ಇರಲಿ. ದೇವರಾಜ್ ಅರಸು, ಎಸ್.ಎಂ ಕೃಷ್ಣ ಆಡಳಿತಕ್ಕೂ ಸಿದ್ದರಾಮಯ್ಯ ಆಡಳಿತ ಸಮವಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಈ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು ಅನ್ನೋದನ್ನ ಮೊದಲು ಹೇಳಲಿ. ಮಹಾರಾಜರು ಅವರ ಅಪ್ಪನ ಮನೆಯಿಂದ ಹಣ ತಂದು ಅಭಿವೃದ್ಧಿ ಮಾಡಿದ್ದಾರ ಎಂದು ಹಿಂದೆ ಸಿದ್ದರಾಮಯ್ಯ ಈ ಹಿಂದೆ ಕೇಳಿದ್ದರು. ಸಿದ್ದರಾಮಯ್ಯ ಏನೂ ಈಗ ಅವರ ಅಪ್ಪನ ಮನೆಯಿಂದ ಹಣ ತಂದು ಅಭಿವೃದ್ಧಿ ಮಾಡುತ್ತಿದ್ದಾರಾ? ಸಿದ್ದರಾಮಯ್ಯರ ಮಗ ಈ ದೌಲತ್ ಗಿರಿ ಮೊದಲು ಬಿಡಲಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಗೆ ಹೋಲಿಕೆ ಮಾಡುವ ಯಾವ ರಾಜಕಾರಣಿ ಈ ದೇಶದಲ್ಲೇ ಇಲ್ಲ ಎಂದಿದ್ದಾರೆ.
ಯತೀಂದ್ರ ಹೇಳಿಕೆಗೆ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಡಿಸಿಎಂ ಈಶ್ವರಪ್ಪ, 'ಪ್ರಪಂಚದಲ್ಲಿ ಎಲ್ಲ ರಾಜ್ಯದ ನಾಯಕರು ಏನೇನು ಕೊಡುಗೆ ಕೊಟ್ಟಿದ್ದಾರಲ್ಲ, ಅದಕ್ಕಿಂತ ಹೆಚ್ಚು ಕೊಡುಗೆ ಸಿದ್ದರಾಮಯ್ಯ ಕೊಟ್ಟಿದ್ದಾರೆ. ದೇಶದಲ್ಲಿ ಪ್ರಂಪಂಚಕ್ಕೆ ಹೆಚ್ಚು ಕೊಡುಗೆ ಕೊಟ್ಟಿದ್ದು ಸಿದ್ದರಾಮಯ್ಯ ಎಂದು ವ್ಯಂಗ್ಯವಾಡಿದ್ದಾರೆ.
ಯತೀಂದ್ರಗೆ ನಾನು ಹೇಳಲು ಇಷ್ಟಪಡೋದು ಏನೆಂದರೆ, ಪ್ರಪಂಚಕ್ಕೆ ಹೆಚ್ಚು ಕೊಡುಗೆ ಕೊಟ್ಟಿದ್ದು ಸಿದ್ದರಾಮಯ್ಯ. ಯತೀಂದ್ರ ಕಾಂತರಾಜ್ ರಿಪೊರ್ಟ್ ಬಗ್ಗೆ ಹೇಳಲಿ ನೊಡೋಣ. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ ಅವರ ಹೆಸರು ಹೇಳುವ ಯೋಗ್ಯತೆ ಆದರೂ ಅವರಿಗೆ ಇದ್ಯಾ? ಆಧುನಿಕ ಭಗೀರಥ ಅವರು ಅಂತವರ ಬಗ್ಗೆ ಹೋಲಿಕೆ ಮಾಡುತ್ತೀರಲ್ಲ. ಒಂದಿಷ್ಟು ದಿನ ದೇವರಾಜ್ ಅರಸು ಅವರೊಂದಿಗೆ ಹೋಲಿಕೆ ಮಾಡಿಕೊಂಡರು. ಅವರ ಬಾಲಂಗೋಚಿ ಆಂಜನೇಯ ಹೇಳಿದ್ರು ದೇವರಾಜ್ ಅರಸರಿಗಿಂತಲೂ ಜಾಸ್ತಿ ಸಿದ್ದರಾಮಯ್ಯ ಅಂತಾ. ಇವತ್ತು ಯಂತೀಂದ್ರ ಈ ರೀತಿ ಹೇಳ್ತಾನೆ. ಅದರಲ್ಲಿ ಅರ್ಥವೇ ಇಲ್ಲ ಎಂದ ಮಾಜಿ ಡಿಸಿಎಂ ಈಶ್ವರಪ್ಪ ಕಿಡಿಕಾರಿದ್ದಾರೆ.