
ಬೆಂಗಳೂರು: ಬೆಂಗಳೂರಿನ 'ದಿ ಆರ್ಟ್ ಆಫ್ ಲಿವಿಂಗ್' ಅಂತಾರಾಷ್ಟ್ರೀಯ ಕೇಂದ್ರವು ಜಾಗತಿಕ ಶಾಂತಿ ಸಂದೇಶ ಹಾಗೂ ಮಹಿಳಾ ಸಬಲೀಕರಣದ ಮಹತ್ವದ ಸಮಾಗಮಕ್ಕೆ ಸಾಕ್ಷಿಯಾಯಿತು. ಅಹಿಂಸಾ ವಿಶ್ವ ಭಾರತಿ ಸಂಸ್ಥೆಯು ಗುರುದೇವ ಶ್ರೀ ಶ್ರೀ ರವಿಶಂಕರ್ ಅವರಿಗೆ ಪ್ರತಿಷ್ಠಿತ ‘ಗ್ಲೋಬಲ್ ಪೀಸ್ ಅವಾರ್ಡ್’ ಪ್ರದಾನ ಮಾಡಿ ಗೌರವಿಸಿದರೆ, ಮತ್ತೊಂದೆಡೆ ಸ್ವಕೃತ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ‘ಶಕ್ತಿ ಸಂಗಮ 2026’ ಕಾರ್ಯಕ್ರಮದಲ್ಲಿ 350ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಪಾಲ್ಗೊಂಡರು.
ಅಹಿಂಸಾ ವಿಶ್ವ ಭಾರತಿ ಸಂಸ್ಥೆಯ 20ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರಿಗೆ ‘ಗ್ಲೋಬಲ್ ಪೀಸ್ ಅವಾರ್ಡ್’ (ವಿಶ್ವ ಶಾಂತಿ ಪ್ರಶಸ್ತಿ) ನೀಡಿ ಸನ್ಮಾನಿಸಲಾಯಿತು.
ಕರ್ನಾಟಕದ ರಾಜ್ಯಪಾಲರಾದ ಡಾ.ಸುಧಾ ಯಾದವ್ ಹಾಗೂ ಅಹಿಂಸಾ ವಿಶ್ವ ಭಾರತಿಯ ಸಂಸ್ಥಾಪಕರಾದ ಜೈನಾಚಾರ್ಯ ಡಾ. ಲೋಕೇಶ್ ಮುನಿ ಅವರ ಉಪಸ್ಥಿತಿಯಲ್ಲಿ ಗೌರವ ಪ್ರದಾನ ಮಾಡಲಾಯಿತು. ವಿಶ್ವಾದ್ಯಂತ ಶಾಂತಿ ಸ್ಥಾಪನೆ, ಸಂವಾದದ ಮೂಲಕ ಸಂಘರ್ಷಗಳನ್ನು ಬಗೆಹರಿಸುವುದು, ಅಹಿಂಸೆಯನ್ನು ಉತ್ತೇಜಿಸುವುದು ಹಾಗೂ ಆಧ್ಯಾತ್ಮಿಕತೆ ಮತ್ತು ಧ್ಯಾನದ ಮೂಲಕ ಕೋಟ್ಯಂತರ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಗುರುದೇವರು ಸಲ್ಲಿಸುತ್ತಿರುವ ಅವಿರತ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಇದೇ ವೇಳೆ ರಾಜ್ಯಪಾಲರಾದ ಡಾ.ಸುಧಾ ಯಾದವ್ ಅವರು ಗುರುದೇವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಇದೇ ಆವರಣದಲ್ಲಿ ಸ್ವಕೃತ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ‘ಶಕ್ತಿ ಸಂಗಮ 2026’ ಮಹಿಳಾ ಉದ್ಯಮಿಗಳ ಮಹತ್ವದ ಸಮಾಗಮಕ್ಕೆ ವೇದಿಕೆಯಾಯಿತು. 100ಕ್ಕೂ ಹೆಚ್ಚು ಮಹಿಳಾ ನೇತೃತ್ವದ ಉದ್ಯಮಗಳ ಭಾಗವಹಿಸುವಿಕೆಯೊಂದಿಗೆ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣ, ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಿತು.
ಕಾರ್ಯಕ್ರಮದಲ್ಲಿ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರೊಂದಿಗೆ ಆರ್ಟ್ ಆಫ್ ಲಿವಿಂಗ್‌ನ ಮಹಿಳಾ ಕಲ್ಯಾಣ ಮತ್ತು ಮಕ್ಕಳ ಆರೈಕೆ ಕಾರ್ಯಕ್ರಮಗಳ ಅಧ್ಯಕ್ಷರಾದ ಭಾನುಮತಿ ನರಸಿಂಹನ್, ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಐಎಎಸ್ (ನಿವೃತ್ತ), ಸಾಮಾಜಿಕ ಉದ್ಯಮಿ, ಶಿಕ್ಷಣ ತಜ್ಞೆ ಹಾಗೂ ಸಮಾಜ ಸೇವಕಿ ಡಾ. ತೇಜಸ್ವಿನಿ ಅನಂತ್ ಕುಮಾರ್, ಕನ್ನಡ ಚಲನಚಿತ್ರ ನಟಿ ಸಿಂಧು ಶ್ರೀನಿವಾಸ್ ಮೂರ್ತಿ, ವೈದ್ಯರು, ಔದ್ಯೋಗಿಕ ಆರ್ಯೋಗ್ಯ ತಜ್ಞರು ಹಾಗೂ ಅಲೋವೇಡಾ ವೆಲ್‌ನೆಸ್ ಪ್ರಾಡಕ್ಟ್ಸ್ ಮತ್ತು ವೈರಾನ್ ವೆಲ್‌ನೆಸ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅಜಯ್ ಪಟವರ್ಧನ್ ಹಾಗೂ ಸ್ವಕೃತ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷರಾದ ಮಾಣಿಕ್ ಪಟವರ್ಧನ್ ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಗುರುದೇವರು, “ಯಾವುದೇ ಕಾರ್ಯ ಯಶಸ್ವಿಯಾಗಲು ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿ ಎಂಬ ಮೂರು ಶಕ್ತಿಗಳು ಒಂದಾಗಬೇಕು” ಎಂದು ಹೇಳಿದರು. ಇಂತಹ ಪ್ರಯತ್ನಗಳು ಕೇವಲ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ ಗ್ರಾಮೀಣ ಭಾರತಕ್ಕೂ ತಲುಪಬೇಕು. ಗ್ರಾಮೀಣ ಮಹಿಳೆಯರನ್ನು ತಲುಪಿ, ಅವರಲ್ಲಿರುವ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಗುರುತಿಸಿ, ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸೂಕ್ತ ವೇದಿಕೆಗಳನ್ನು ಕಲ್ಪಿಸುವಂತೆ ಪ್ರೋತ್ಸಾಹಿಸಿದರು.
ಆಧ್ಯಾತ್ಮಿಕತೆ ಮತ್ತು ಮಹಿಳಾ ಸಬಲೀಕರಣದ ಮಹತ್ವವನ್ನು ವಿವರಿಸಿದ ಭಾನುಮತಿ ನರಸಿಂಹನ್ ಅವರು, “ನಮ್ಮೊಳಗಿರುವ ಶಕ್ತಿಯನ್ನು ನಾವು ಗುರುತಿಸಿಕೊಂಡಾಗ, ಅದನ್ನು ಸಮಾಜದೊಂದಿಗೆ ಹಂಚಿಕೊಳ್ಳಲು ಮತ್ತು ಸಮಾಜಕ್ಕೆ ಸಕಾರಾತ್ಮಕವಾಗಿ ಕೊಡುಗೆ ನೀಡಲು ಸಾಧ್ಯವಾಗುತ್ತದೆ,” ಎಂದರು. ಹಂಚಿಕೆ ಮತ್ತು ಕಾಳಜಿಯ ಮೌಲ್ಯಗಳನ್ನು ಗುರುದೇವರು ನಮ್ಮಲ್ಲಿ ಬೆಳೆಸಿದ್ದು, ಈ ಮೌಲ್ಯಗಳು ಮಹಿಳೆಯರು ನಾಯಕತ್ವದ ಜವಾಬ್ದಾರಿಗಳನ್ನು ವಹಿಸಿಕೊಂಡು ಸಾಮಾಜಿಕ ಬದಲಾವಣೆಗೆ ಕಾರಣರಾಗಲು ಪ್ರೇರಣೆ ನೀಡಿವೆ ಎಂದರು.
ಮಹಿಳೆಯರು ಪರಸ್ಪರ ಬೆಂಬಲವಾಗಿ ನಿಲ್ಲಬೇಕಾದ ಅಗತ್ಯವನ್ನು ಒತ್ತಿಹೇಳಿದ ಕೆ.ರತ್ನಪ್ರಭಾ, “ಪ್ರತಿಯೊಬ್ಬ ಮಹಿಳೆಯೂ ಮತ್ತೊಬ್ಬ ಮಹಿಳೆಗೆ ಬೆಂಬಲವಾಗಿ ನಿಲ್ಲಬೇಕು. ನೀವು ಯಶಸ್ಸು ಸಾಧಿಸಿದಾಗ, ಇನ್ನೂ ಆ ಹಂತವನ್ನು ತಲುಪದವರತ್ತ ಕೈ ಚಾಚಿ. ಅವರ ಕೈ ಹಿಡಿದು ಮುನ್ನಡೆಯಲು ನೆರವಾಗಿ. ಇದೇ ‘ನಾವೆಲ್ಲರೂ ಒಟ್ಟಾಗಿ ಬೆಳೆಯೋಣ’ ಎಂಬ ಆಶಯದ ಹಿಂದಿರುವ ಸ್ಫೂರ್ತಿ” ಎಂದು ಹೇಳಿದರು.