
ಬೆಂಗಳೂರು: ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇವತ್ತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡೆಸಿದ ಸಂಧಾನ ಸಭೆಯಲ್ಲಿ ಹೆಚ್ಚುವರಿ 2 ಸಾವಿರ ರೂಪಾಯಿ ಗೌರವಧನ ನೀಡುವ ಬಗ್ಗೆ ತಿಳಿಸಲಾಗಿತ್ತು. ಬೆನ್ನಲ್ಲೇ ಸಿಎಂ ನಡೆಸಿದ ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಿದ್ದರು. ಇದೀಗ ಮತ್ತೆ ಹೋರಾಟಕ್ಕೆ ತಿರುವು ಸಿಕ್ಕಿದ್ದು, ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ಮುಂದುವರಿದಿದೆ.
ಹೌದು, ಕಳೆದ 12 ದಿನಗಳಿಂದ ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಸಿಕ 15 ಸಾವಿರ ರೂಪಾಯಿ ಗೌರವಧನ ನೀಡಬೇಕು ಎಂಬುದು ಅವರ ಬೇಡಿಕೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜೊತೆ ಸಂಧಾನ ಸಭೆ ನಡೆದಿದ್ದು, ಹೆಚ್ಚುವರಿಯಾಗಿ 2 ಸಾವಿರ ರೂಪಾಯಿ ನೀಡುವ ಪ್ರಸ್ತಾವ ಮುಂದಿಡಲಾಗಿತ್ತು. ಸರ್ಕಾರದ ಸಂಧಾನದ ತೀರ್ಮಾನಗಳಿಗೆ ಆಶಾ ಕಾರ್ಯಕರ್ತೆಯರು ಸಮ್ಮತಿಸದ ಕಾರಣ ಸಭೆ ವಿಫಲವಾಗಿದೆ.
ಆಶಾ ಕಾರ್ಯಕರ್ತೆಯರ ಮನವೊಲಿಸಲು ಮುಖ್ಯಮಂತ್ರಿ ನಡೆಸಿದ ಸಭೆಯಲ್ಲಿ ಗೌರವಧನ ಹೆಚ್ಚಳದ ಕುರಿತು ಚರ್ಚೆ ನಡೆದಿತ್ತು. ಜನವರಿ 1ರಿಂದ ಹೆಚ್ಚುವರಿ 2 ಸಾವಿರ ರೂಪಾಯಿ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಕಾರ್ಯಕರ್ತೆಯರ ಬೇಡಿಕೆಗಳಿಗೆ ಈ ನಿರ್ಧಾರ ಸಮರ್ಪಕ ಪರಿಹಾರವಲ್ಲ ಎಂಬ ಕಾರಣಕ್ಕೆ ಹೋರಾಟ ಮುಂದುವರಿಸಲು ನಿರ್ಧರಿಸಲಾಗಿದೆ. ಸಂಧಾನ ಸಭೆಯ ಬಳಿಕ ಪ್ರತಿಭಟನೆ ಅಂತ್ಯಗೊಳ್ಳಲಿದೆ ಎಂಬ ನಿರೀಕ್ಷೆ ಮೂಡಿತ್ತಾದರೂ ಸಂಘಟನೆಯ ಮುಖಂಡರು ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ಹೋರಾಟದಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ಮುಂದುವರಿಯಲಿದೆ.
ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಹಾಗೂ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಅವರು ಹೋರಾಟ ಮುಂದುವರಿಸುವ ನಿರ್ಧಾರವನ್ನು ತಿಳಿಸಿದ್ದಾರೆ. ಸರ್ಕಾರದ ಸಂಧಾನ ಸಭೆಯ ತೀರ್ಮಾನಗಳಿಗೆ ಆಶಾ ಕಾರ್ಯಕರ್ತೆಯರು ಒಪ್ಪದ ಹಿನ್ನೆಲೆಯಲ್ಲಿ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತೆಯರು ಒಟ್ಟಾಗಿ ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಲಾಗಿದೆ.
ಮುಖ್ಯಮಂತ್ರಿಗಳ ಜೊತೆ ಚರ್ಚೆ ಆಗಿದೆ. ಮುಖ್ಯವಾಗಿ ಭರವಸೆ ಲಿಖಿತವಾಗಿ ಬೇಕು. ಆದರೆ ಸಿಎಂ ನನ್ನ ಮಾತೆ ಲಿಖಿತ ಅಂತ ಹೇಳಿದ್ರು. ಆದರೆ ಲಿಖಿತವಾಗಿ ಬರೂವರೆಗೂ ಈ ಹೋರಾಟ ಮುಂದುವರಿಯಲಿದೆ. ಶಾಲು, ಹೂಗುಚ್ಛ ನಾವು ತಗೊಂಡಿಲ್ಲ. ಸಿಎಂ ಕಚೇರಿಯಲ್ಲಿ ಅವರೇ ಕೊಟ್ರು. ನಾವು ಏನೂ ತಪ್ಪು ಮಾಡಿಲ್ಲ. ಕೆಲವರು ಅಪಪ್ರಚಾರ ಮಾಡ್ತಿದ್ದಾರೆ. ಶಾಲು ಹಾಕಿ ಹೋಗಿರೋದು ನಾವೆಲ್ಲ ಶಾಲು ಹಾಕಿಲ್ಲ. ತಪ್ಪು ಸಂದೇಶ ಹೋಗೋ ಸಾಧ್ಯತೆ ಇದೆ. ಏನಾಗಿದೆ ಅದಕ್ಕೆ ಧನ್ಯವಾದ ಮುಖ್ಯ ಮಂತ್ರಿಗಳಿಗೆ ಸಲ್ಲಿಸಿದ್ದೇವೆ. ಗುಟ್ಟಾಗಿ ಯಾವುದು ಮಾಡೋ ಅವಶ್ಯಕತೆ ಇಲ್ಲ. ನಾವು ತಪ್ಪು ಮಾಡಿದ್ರೆ ನಾಡಿನ ಜನತೆಗೆ ಕ್ಷಮೆ ಕೇಳೋಕೆ ಹಿಂದೆ ಹಾಕಲ್ಲ. ಸರ್ಕಾರದ ನಿಲುವುಗಳು ನಿಮಗೆ ಗೊತ್ತಿದೆ. ನಾವು ಹಿಂದೆ ಮೋಸ ಹೋಗಿದ್ದೇವೆ. ನಮಗೆ ಲಿಖಿತವಾಗಿ ಬೇಕು. ಆದೇಶ ಸ್ಪಷ್ಟವಾಗಿ ಕೊಡುವರೆಗೂ ನಾವು ಹೋರಾಟದಿಂದ ಹಿಂದೆ ಸರಿಯಲ್ಲ ಎಂದಿದ್ದಾರೆ.