₹20 ಲಕ್ಷ ಸಾಲ ವಾಪಸ್ ಕೊಡದ ಭಕ್ತ; ಮನೆ ಬಾಗಿಲಿಗೆ ಬಂದು ಕುಳಿತ ಶ್ರೀ 1008 ಜಗದ್ಗುರು ಬಸವರಾಜ ಪಟ್ಟದಾರ್ಯ ಸ್ವಾಮೀಜಿ!

Published : Sep 18, 2026, 11:58 AM IST
1008 Basavaraja Pattadarya Swamiji

ಸಾರಾಂಶ

ಬಾಗಲಕೋಟೆಯ ಗುಳೇದಗುಡ್ಡದ ಸ್ವಾಮೀಜಿಯೊಬ್ಬರು ತಮಗೆ ಬರಬೇಕಾದ 20 ಲಕ್ಷ ರೂ. ಸಾಲಕ್ಕಾಗಿ ಬೆಂಗಳೂರಿನಲ್ಲಿ ಸಾಲಗಾರನ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಹಣ ವಾಪಸ್ ನೀಡದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಮರಣಪತ್ರ ಬರೆದಿಟ್ಟು ಅವರು ಈ ಹೋರಾಟಕ್ಕೆ ಇಳಿದಿದ್ದಾರೆ. ಸಾಲಗಾರ ಮನೆಗೆ ಬೀಗ ಜಡಿದು ತಲೆಮರೆಸಿಕೊಂಡಿದ್ದಾನೆ.

ಬೆಂಗಳೂರು (ಸೆ.18): ಕೊಟ್ಟ ಸಾಲವನ್ನು ವಾಪಸ್ ನೀಡದೆ ಸತಾಯಿಸುತ್ತಿರುವ ವ್ಯಕ್ತಿಯೊಬ್ಬನ ವಿರುದ್ಧ ಬಾಗಲಕೋಟೆಯ ಸ್ವಾಮೀಜಿಯೊಬ್ಬರು ನೇರವಾಗಿ ಬೆಂಗಳೂರಿನಲ್ಲಿ ಸಾಲಗಾರನ ಮನೆ ಮುಂದೆಯೇ ಪ್ರತಿಭಟನೆಗೆ ಕುಳಿತಿರುವ ಅಪರೂಪದ ಹಾಗೂ ರೋಚಕ ಘಟನೆ ಬೆಳಕಿಗೆ ಬಂದಿದೆ. ಇದೀಗ ಸಾಲಗಾರನ ಮನೆಯ ಮುಂದೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ಶ್ರೀ 1008 ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾ ಸ್ವಾಮಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಘಟನೆಯ ಹಿನ್ನೆಲೆ ಏನು?

ಗುಳೇದಗುಡ್ಡದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬ್ರಹನ್ಮಠದ ಸ್ವಾಮೀಜಿಯವರ ಬಳಿ ಅದೇ ಊರಿನ ವ್ಯಕ್ತಿಯೊಬ್ಬರು ಹಲವು ವರ್ಷಗಳ ಹಿಂದೆ ಬರೋಬ್ಬರಿ 20 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದುಕೊಂಡಿದ್ದರು. ಸ್ವಾಮೀಜಿಯ ಬಳಿ ಸಾಲ ಪಡೆದಿದ್ದ ಆ ವ್ಯಕ್ತಿ ನಂತರ ಬಾಗಲಕೋಟೆಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿಕೊಂಡಿದ್ದನು. ಆದರೆ, ವರ್ಷಗಳು ಕಳೆದರೂ ತಾನು ಪಡೆದಿದ್ದ ಲಕ್ಷಾಂತರ ರೂ. ಸಾಲವನ್ನು ಮಾತ್ರ ವಾಪಸ್ ನೀಡಿರಲಿಲ್ಲ.

ಹಣ ಮರಳಿಸುವಂತೆ ಸ್ವಾಮೀಜಿ ಹಲವು ಬಾರಿ ಕೇಳಿಕೊಂಡರೂ ಆ ವ್ಯಕ್ತಿ ಸಬೆಪಬು ಹೇಳುತ್ತಾ ಸಾಗಿದ್ದಾನೆ. ಇದರಿಂದ ನೊಂದ ಸ್ವಾಮೀಜಿ, ಸಾಲ ವಾಪಸ್ ಪಡೆಯಲು ನೇರವಾಗಿ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನ ಲಾಲ್ ಬಾಗ್ ರಸ್ತೆಯ ಬಳಿ ಇರುವ ಸಾಲಗಾರನ ಮನೆಯನ್ನು ಹುಡುಕಿಕೊಂಡು ಹೋದ ಸ್ವಾಮೀಜಿಗೆ ಆಘಾತ ಕಾದಿತ್ತು. ಸ್ವಾಮೀಜಿ ಬರುತ್ತಾರೆಂಬ ವಿಷಯ ತಿಳಿದು ಸಾಲಗಾರ ತನ್ನ ಮನೆಗೆ ಬೀಗ ಹಾಕಿ ತಲೆಮರೆಸಿಕೊಂಡಿದ್ದಾನೆ. ಇದರಿಂದ ಆಕ್ರೋಶಗೊಂಡ ಸ್ವಾಮೀಜಿ, ಬೀಗ ಹಾಕಿರುವ ಮನೆ ಮುಂಭಾಗದಲ್ಲೇ ಧರಣಿ ಕುಳಿತು ಪ್ರತಿಭಟನೆ ಆರಂಭಿಸಿದ್ದಾರೆ. ನಿನ್ನೆಯಿಂದ ಸ್ವಾಮೀಜಿಯವರ ಈ ಪ್ರತಿಭಟನೆ ಮುಂದುವರಿದಿದೆ.

ಮರಣಪತ್ರ ಬರೆದಿಟ್ಟು ಬಂದ ಸ್ವಾಮೀಜಿ!

ಪ್ರತಿಭಟನೆಗೂ ಮುನ್ನ ಸ್ವಾಮೀಜಿಯವರು ತಮ್ಮ ಮಠದಲ್ಲಿ ಮರ್ಮಸ್ಪರ್ಶಿ ಪತ್ರವೊಂದನ್ನು ಬರೆದಿಟ್ಟು ಬಂದಿದ್ದಾರೆ. 'ನಾನು ನೀಡಿದ 20 ಲಕ್ಷ ರೂಪಾಯಿ ಸಾಲವನ್ನು ಆ ವ್ಯಕ್ತಿ ವಾಪಸ್ ನೀಡದೆ ಹೋದರೆ, ನಾನು ಅಲ್ಲೇ ಉಪವಾಸ ಸತ್ಯಾಗ್ರಹ ಮಾಡ್ತೇನೆ. ಒಂದೊಮ್ಮೆ ಈ ಹೋರಾಟದಲ್ಲಿ ನಾನು ನಿಧನರಾದರೆ, ನನ್ನ ಪಾರ್ಥಿವ ಶರೀರವನ್ನು ವಿಜಯಪುರ ಮೆಡಿಕಲ್ ಕಾಲೇಜಿಗೆ ದಾನವಾಗಿ ನೀಡಬೇಕು' ಎಂದು ಆ ಪತ್ರದಲ್ಲಿ ಸ್ವಾಮೀಜಿ ಉಲ್ಲೇಖಿಸಿದ್ದಾರೆ.

ಸಾಲ ಪಡೆದವನು ಹಣ ನೀಡದೆ ವಂಚಿಸಿರುವುದರಿಂದ ಮಠದ ಸ್ವಾಮೀಜಿಯವರೇ ಬೆಂಗಳೂರಿಗೆ ಬಂದು ಮನೆ ಮುಂದೆ ಧರಣಿ ನಡೆಸಿರುವ ಈ ಘಟನೆ ಸದ್ಯ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ.

PREV
Read more Articles on
click me!

Recommended Stories

ಬೆಂಗಳೂರಿನ ಅಕ್ರಮ ಪಿಜಿಗಳಿಗೆ ಹೈಕೋರ್ಟ್ ಶಾಕ್, 81 ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ, ಪೂರ್ವ ಭಾಗದಲ್ಲೇ ಅತೀ ಹೆಚ್ಚು!
ಪ್ರಸಿದ್ಧ ಗಡಾಯಿಕಲ್ಲು ಚಾರಣಿಗರಿಗೆ ಮುಕ್ತ, ದಿನಕ್ಕೆ ಕೇವಲ 500 ಮಂದಿಗೆ ಮಾತ್ರ ಪ್ರವೇಶ, ಈ ನಿಯಮ ನೆಟ್ಟಗೆ ಪಾಲಿಸಿ!