ಕೊಪ್ಪಳ: ಬಾರದ ಗೌರವಧನ, ಕುಟುಂಬ ನಿರ್ವಹಣೆಗೆ ಅತಿಥಿ ಶಿಕ್ಷಕರ ಪರದಾಟ

By Suvarna NewsFirst Published Dec 11, 2019, 8:08 AM IST
Highlights

ಅತಿಥಿ ಶಿಕ್ಷಕರಿಗೆ 5 ತಿಂಗಳಿನಿಂದ ಗೌರವಧನ ಬಾರದಿದ್ದರಿಂದ ಕುಟುಂಬ ನಿರ್ವಹಣೆ ಕಷ್ಟ| ಗೌರವಧನ ಎಂದು ಬರುತ್ತದೆ ಎಂದು ಜಾತಕ ಪಕ್ಷಿಗಳಂತೆ ಕಾಯುವ ಸ್ಥಿತಿ ಅತಿಥಿ ಶಿಕ್ಷಕರಿಗೆ ಬಂದೋದಗಿದೆ| ಪ್ರೌಢ ಶಾಲೆಗಳಲ್ಲಿ 159, ಪ್ರಾಥಮಿಕ ಶಾಲೆಗಳಲ್ಲಿ 936 ಜನರು ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ| 

ಹನುಮಸಾಗರ(ಡಿ.11): ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸಲು ಕೊಪ್ಪಳ ಜಿಲ್ಲಾದ್ಯಂತ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಕಳೆದ ಐದು ತಿಂಗಳಿನಿಂದ ಗೌರವಧನ ಬಾರದೆ ಕುಟುಂಬ ನಿರ್ವಹಣೆಗೆ ಅತಿಥಿ ಶಿಕ್ಷಕರು ಪರದಾಡುವಂತಾಗಿದೆ.

ಸರ್ಕಾರಿ ಹುದ್ದೆಯಲಿದ್ದು ತಿಂಗಳಿಗೆ 25 ಸಾವಿರಕ್ಕಿಂತ ಹೆಚ್ಚು ವೇತನ ಪಡೆಯುತ್ತಿದರೂ ನಿಗದಿತ ಸಮಯಕ್ಕೆ ಸರಿಯಾಗಿ ಸಂಬಳ ಬರದಿದ್ದರೆ ಪರಿತಪಿಸುವವರು ಬಹಳಷ್ಟು ಜನರಿದ್ದಾರೆ. ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೀಡುವ ಅಲ್ಪಸ್ವಲ್ಪ ಗೌರವಧನ ನಂಬಿಕೊಂಡು ಜೀವನ ನಡೆಸುತ್ತಿರುವ ಅತಿಥಿ ಶಿಕ್ಷಕರಿಗೆ 5 ತಿಂಗಳಿನಿಂದ ಗೌರವಧನ ಬಾರದಿದ್ದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಗೌರವಧನ ಎಂದು ಬರುತ್ತದೆ ಎಂದು ಜಾತಕ ಪಕ್ಷಿಗಳಂತೆ ಕಾಯುವ ಸ್ಥಿತಿ ಅತಿಥಿ ಶಿಕ್ಷಕರಿಗೆ ಬಂದೋದಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲೆಯಲ್ಲಿ 155 ಸರ್ಕಾರಿ ಪ್ರೌಢಶಾಲೆ ಮತ್ತು 256 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಈ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆ ನೀಗಿಸಲು ಈ ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಪ್ರೌಢ ಶಾಲೆಗಳಲ್ಲಿ 159, ಪ್ರಾಥಮಿಕ ಶಾಲೆಗಳಲ್ಲಿ 936 ಜನರು ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುವವವರಿಗೆ . 7500, ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ . 8500 ಗೌರವಧನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ನಿಗದಿ ಮಾಡಿದೆ. ಆದರೆ, ಕಳೆದ 5 ತಿಂಗಳಿನಿಂದ ಗೌರವ ಧನ ನೀಡಿಲ್ಲ.

ಐದು ತಿಂಗಳಿಂದ ಗೌರವ ಧನ ಬಂದಿಲ್ಲ. ಈ ಬಗ್ಗೆ ಕೇಳಲು ಮೇಲಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ನಮ್ಮ ಕಷ್ಟಯಾರ ಮುಂದೆ ಹೇಳಬೇಕು. ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಸಾಲ ಮಾಡಿ ಕುಟುಂಬ ನಡೆಸುತ್ತಿದ್ದು, ಸಾಲದ ಬಡ್ಡಿ ಕಟ್ಟಲು ಸಹ ಹಣವಿಲ್ಲ. ಕೂಡಲೇ ಮೇಲಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಹೆಸರು ಹೇಳಲು ಇಚ್ಚಿಸದ ಅತಿಥಿ ಶಿಕ್ಷಕರೊಬ್ಬರು ಹೇಳಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿದ ಕೊಪ್ಪಳ ಪ್ರಭಾರಿ ಡಿಡಿಪಿಐ ಬಸವರಾಜಸ್ವಾಮಿ ಅವರು, ಅತಿಥಿ ಶಿಕ್ಷಕರ ಗೌರವಧನ ಬಿಡುಗಡೆ ಕುರಿತು ಶಿಕ್ಷಣ ಇಲಾಖೆಯ ಮೇಲಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಸದ್ಯದಲ್ಲೇ ಅತಿಥಿ ಶಿಕ್ಷಕರ ಗೌರವಧನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
 

click me!