ಕಾರಟಗಿ: ನಿರ್ಮಾಣವಾಗದ ಕಟ್ಟಡ, ಮರದ ನೆರಳಿನಲ್ಲಿಯೇ ಮಕ್ಕಳಿಗೆ ಪಾಠ!

By Suvarna News  |  First Published Dec 11, 2019, 7:53 AM IST

2014-15 ಹುಳ್ಕಿಹಾಳ ಪ್ರೌಢಶಾಲೆ ಜಮೀನು ಮಂಜೂರಾದರೂ ಕಟ್ಟಡ ನಿರ್ಮಿಸಿಲ್ಲ| ದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳಿಗೆ ಕೊಠಡಿಗಳೆ ಇಲ್ಲ| ಹೊಸ ಕಟ್ಟಡ ನಿರ್ಮಾಣವಾಗದ ಪರಿಣಾಮ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲೆಯಲ್ಲಿ ಬೋಧಿಸಲಾಗುತ್ತಿದೆ| 


ಕಾರಟಗಿ(ಡಿ.11): ಹುಳ್ಕಿಹಾಳ ಗ್ರಾಮದಲ್ಲಿ ಪ್ರೌಢಶಾಲೆ ನಿರ್ಮಾಣಕ್ಕೆ 2014-15 ರಲ್ಲಿಯೇ 2 ಎಕರೆ ಜಮೀನು ಮಂಜೂರಾಗಿದ್ದರೂ ಈ ವರೆಗೂ ಕಟ್ಟಡ ನಿರ್ಮಾಣವಾಗದೆ ವಿದ್ಯಾರ್ಥಿಗಳು ಮರದ ನೆರಳಿನಲ್ಲಿ ಪಾಠ ಆಲಿಸುತ್ತಿದ್ದಾರೆ.

ಅಂದಿನ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆ (ಆರ್‌ಎಂಎಸ್‌) ನಿರ್ಮಾಣಕ್ಕೆ 2 ಎಕರೆ ಜಮೀನು ಮಂಜೂರು ಮಾಡಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು ಕಡಿತ ವಿಲೇವಾರಿ ಮಾಡದ ಪರಿಣಾಮ ಕಟ್ಟಡ ನಿರ್ಮಾಣಕ್ಕೆ ಹಿನ್ನಡೆಯಾಗಿದೆ. ಗ್ರಾಮಸ್ಥರು ಸಹ ಕಡತ ವಿಲೇವಾರಿಗೆ ಗಂಗಾವತಿ-ಕಾರಟಗಿ ತಹಸೀಲ್ದಾರ್‌, ಕಂದಾಯ, ಭೂ ದಾಖಲೆಗಳ ಕಚೇರಿಗಳಿಗೆ ಅಲೆದು ಚಪ್ಪಲಿ ಸವೆಸಿಕೊಂಡಿದ್ದಾರೆ.

Latest Videos

undefined

ಶಿಕ್ಷಣ ಇಲಾಖೆ ಹೆಸರಿಗೆ ಮುಟೇಷನ್‌ ಮತ್ತು ಪಹಣಿ ಕೂಡ ನೀಡಲಾಗಿದೆ. ಜಾಗದ ಸರ್ವೇ ಮಾಡಿ ಹದ್ದು-ಬಸ್ತು ಮಾಡಿ ಕೊಡುವಂತೆ ತಹಸೀಲ್ದಾರ್‌, ಸರ್ವೇ ಅಧಿಕಾರಿಗಳಿಗೆ ಆದೇಶಿಸಿದ್ದರೂ ಸರ್ವೇ ಮಾಡಿಲ್ಲ. ಹೀಗಾಗಿ 2016ರಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ ಬಂದಿರುವ . 80 ಲಕ್ಷ ಅನುದಾನವೂ ಮರಳಿ ಹೋಗುವ ಆತಂಕ ಎದುರಾಗಿದೆ. ಒಟ್ಟು 4 ಎಕರೆ ಜಮೀನಿನಲ್ಲಿ ಎರಡು ಎಕರೆ ಶಾಲೆಗೆ ಮೀಸಲಿಟ್ಟಿದ್ದು ಉಳಿದ ಭಾಗದಲ್ಲಿ ಆಡಳಿತರೂಢ ಪಕ್ಷದ ಕಾರ್ಯಕರ್ತರೊಬ್ಬರು ಕೃಷಿ ನಡೆಸುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜಕೀಯ ಒತ್ತಡಕ್ಕೆ ಮಣಿದು ಕಾರಟಗಿ ತಹಸೀಲ್ದಾರ್‌, ಕಚೇರಿ ಸಿಬ್ಬಂದಿ ಕಡತ ವಿಲೇವಾರಿ ಮಾಡುತ್ತಿಲ್ಲ ಎಂದು ಶಿಕ್ಷಣ ಪ್ರೇಮಿಗಳು ಆರೋಪಿಸಿದ್ದಾರೆ. ಸಮಸ್ಯೆ ಗಂಭೀರತೆ ಕುರಿತು ಶಾಲಾ ಎಸ್‌ಡಿಎಂಸಿ ಬಿಇಒ, ತಹಸೀಲ್ದಾರ್‌ ಕಚೇರಿ, ಸಹಾಯಕ ಆಯುಕ್ತರಿಗೆ ಪತ್ರ ವ್ಯವಹಾರದ ಮೂಲಕ ಗಮನಕ್ಕೆ ತಂದಿದ್ದರು ಪ್ರತಿಫಲ ದೊರೆತ್ತಿಲ್ಲ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌. ವಿಶ್ವನಾಥ ರೆಡ್ಡಿ ಖುದ್ದಾಗಿ ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು ಶಾಲೆಗೆ ನೀಡಿದ ಜಮೀನನ್ನು ಹದ್ದು ಬಸ್ತು ಮಾಡುವಂತೆ ಭೂ ದಾಖಲೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಕೊಠಡಿಗಳು ಇಲ್ಲ:

ಹೊಸ ಕಟ್ಟಡ ನಿರ್ಮಾಣವಾಗದ ಪರಿಣಾಮ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲೆಯಲ್ಲಿ ಬೋಧಿಸಲಾಗುತ್ತಿದೆ. ಇಲ್ಲಿ 11 ಕೊಠಡಿಗಳು ಮಾತ್ರವಿದ್ದು 5 ಕೊಠಡಿಗಳು ಮಳೆ ಬಂದರೆ ಸೋರುತ್ತಿವೆ. 1 ರಿಂದ 8ನೇ ತರಗತಿ 263, 9-10ನೇ ತರಗತಿ 66 ವಿದ್ಯಾರ್ಥಿಗಳು ಇದ್ದಾರೆ. ಕೊಠಡಿಗಳ ಕೊರತೆ ಇರುವುದರಿಂದ ಮರದ ಕೆಳಗೆ ಹಾಗೂ ಚಾಮುಂಡೇಶ್ವರಿ ಯುವಕ ಸಂಘದ ಕೊಠಡಿಯಲ್ಲಿ ಪಾಠ ಆಲಿಸುವಂತೆ ಆಗಿದೆ.

ಶಿಕ್ಷಕರ ಕೊರತೆ:

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಕರ ಸಮಸ್ಯೆಯಿದ್ದು, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ವಿಷಯಕ್ಕೆ ಶಿಕ್ಷಕರಿದ್ದಾರೆ. ಕನ್ನಡ ಭಾಷೆ ಬೋಧನೆಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಪ್ರಾಥಮಿಕ ಶಾಲೆಯ ಹಿಂದಿ ಶಿಕ್ಷಕರೆ ಪ್ರೌಢಶಾಲೆಗೂ ಪಾಠ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕಲಿಕೆ ಹಿನ್ನಡೆಯಾಗುತ್ತಿದೆ. ಶೀಘ್ರ ಶಾಲಾ ಕಟ್ಟಡ ನಿರ್ಮಿಸುವ ಜತೆಗೆ ಅಗತ್ಯ ಶಿಕ್ಷಕರನ್ನು ನಿಯೋಜಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಹೊಂದಾಣಿಕೆಯಿಲ್ಲ

ಸರ್ವೇ ನಂ. 34ರ ಒಟ್ಟು 11.07 ಎಕರೆ ವಿಸ್ತೀರ್ಣದ ಪೈಕಿ ಆರ್‌ಎಂಎಸ್‌ ಪ್ರೌಢಶಾಲೆ ನಿರ್ಮಾಣಕ್ಕೆ 2 ಎಕರೆ ಸರ್ಕಾರಿ ಭೂಮಿ ಮಂಜೂರು ಮಾಡಬಹುದು. ಜಮೀನಿನ ಕ್ಷೇತ್ರಕ್ಕೂ ಮತ್ತು ಆಕಾರಬಂದ ಕ್ಷೇತ್ರಕ್ಕೂ ಹೊಂದಾಣಿಕೆಯಿದೆ. ಮಂಜೂರು ಮಾಡಲು ಯೋಗ್ಯವಿದೆ ಎಂದು 2016ರಲ್ಲಿ ಗಂಗಾವತಿ ತಹಸೀಲ್ದಾರ್‌ ಗೆ ಕಾರಟಗಿ ಕಂದಾಯ ನಿರೀಕ್ಷಕರಿಗೆ ವರದಿ ಸಲ್ಲಿಸಿದ್ದಾರೆ. ಆದರೆ, ಸದ್ಯ ಸರ್ವೇ ಅಧಿಕಾರಿಗಳು ಜಮೀನಿನ ಕ್ಷೇತ್ರಕ್ಕೂ ಮತ್ತು ಆಕಾರ ಬಂದ ಕ್ಷೇತ್ರಕ್ಕೂ ಹೊಂದಾಣಿಕೆಯಾಗುತ್ತಿಲ್ಲ ಎನ್ನುತ್ತಿದೆ. ಸರ್ವೇ ಮಾಡಿ ಹದ್ದು ಬಸ್ತು ಮಾಡಿಕೊಡಲು ಸಾಧ್ಯವಿಲ್ಲ ಎನ್ನುವ ವಿಚಾರವನ್ನು ಕಂದಾಯ ಅಧಿಕಾರಿಗಳು ಮುಂದಿಟ್ಟುಕೊಂಡು ಕಡತಕ್ಕೆ ಕೆಂಪು ಪಟ್ಟಿಹಾಕಿದ್ದಾರೆ.

ಶಾಲೆಗೆ ಮಂಜೂರಾದ ಜಮೀನಿನ ಮುಟೇಷನ್‌ ಹಾಗೂ ಪಾಣಿ ಕೂಡ ಬಂದಿದೆ. ಪಹಣಿಗೂ ಆಕಾರ ಬಂದಗೂ ಹೊಂದಾಣಿಕೆಯಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.ಸಮಸ್ಯೆ ಶೀಘ್ರ ಬಗೆಹರಿದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಅನುಕೂಲವಾಗುತ್ತದೆ ಎಂದು ಕೋಮಲಾಪುರ ಗ್ರಾಮಸ್ಥ ಅಮರೇಶಪ್ಪ ಅವರು ಹೇಳಿದ್ದಾರೆ. 

ಸಮಸ್ಯೆ ಕುರಿತು ಖುದ್ದಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು ಗ್ರಾಮಕ್ಕೆ ತೆರಳಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಶಾಲೆಗೆ ಮಂಜೂರಾದ ಭೂಮಿ ಸಮಸ್ಯೆ ನಿವಾರಿಸಲಾಗುವುದು ಜಿಪಂ ಅಧ್ಯಕ್ಷ ಕೊಪ್ಪಳ ಎಚ್‌. ವಿಶ್ವನಾಥ ರೆಡ್ಡಿ ಅವರು ತಿಳಿಸಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿದ ಹುಳ್ಕಿಹಾಳ ಎಸ್‌ಡಿಎಂಸಿ ಅಧ್ಯಕ್ಷ ದುರುಗಪ್ಪ ಭಾವಿಕಟ್ಟಿ ಅವರು, ಈಗಾಗಲೇ ಶಾಲಾ ಕಟ್ಟಡಕ್ಕೆ ಅನುದಾನ ಬಂದಿದ್ದು ಮರಳಿ ಹೋಗುವ ಮೊದಲೆ ಜಮೀನಿನ ಸಮಸ್ಯೆ ನಿವಾರಣೆ ಆಗಲಿ. ಮಕ್ಕಳ ಭವಿಷ್ಯದ ದೃಷ್ಟಿಯಿಂದಾದರೂ ಅಧಿಕಾರಿಗಳು ಜಮೀನನ್ನು ಹದ್ದು ಬಸ್ತು ಮಾಡಲು ಮುಂದಾಗಬೇಕು ಎಂದು ತಿಳಿಸಿದ್ದಾರೆ. ( ಸಾಂದರ್ಭಿಕ ಚಿತ್ರ)
 

click me!