
ತುಮಕೂರು/ಗುಬ್ಬಿ; ಅರಣ್ಯ ಇಲಾಖೆಯಿಂದ ಮಂಜೂರಾಗಿದ್ದ ಕಾಮಗಾರಿಗೆ ಶೇಕಡಾ 30 ರಷ್ಟು ಲಂಚದ ಕಮಿಷನ್ ಬೇಡಿಕೆಯಿಟ್ಟು, ಗುತ್ತಿಗೆದಾರನಿಂದ ಹಣ ಪಡೆಯುತ್ತಿದ್ದ ಗುಬ್ಬಿಯ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ (RFO) ಹಾಗೂ ಅವರ ಕೆಳಹಂತದ ಸಿಬ್ಬಂದಿ ಲೋಕಾಯುಕ್ತ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಗುಬ್ಬಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ಕೆ.ಎಸ್ ಮತ್ತು ಅವರ ಸೂಚನೆಯಂತೆ ಹಣ ಸ್ವೀಕರಿಸುತ್ತಿದ್ದ ಹೊರಗುತ್ತಿಗೆ ಆಧಾರದ ಕ್ಯಾಂಪ್ ವಾಚರ್ ಶೌಕತ್ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳಾಗಿದ್ದಾರೆ.
ಮಂಡ್ಯ ಮೂಲದ ಶಿವರಾಜು ಎಂಬುವವರು ಅರಣ್ಯ ಹಾಗೂ ಸಿವಿಲ್ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತುಮಕೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಸಿ.ಸಿ.ಟಿ (CCT) ಅಗೆಯುವಿಕೆ, ಬದುಗಳ ಮೇಲೆ ಅಗೇವಾ ಸಸ್ಯಗಳನ್ನು ನೆಡುವ ಹಾಗೂ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿಯಮಾನುಸಾರ ಟೆಂಡರ್ ಪಡೆದಿದ್ದರು. ಸರ್ಕಾರದಿಂದ ಕಾರ್ಯಾದೇಶ (Work Order) ಸಿಕ್ಕ ನಂತರ, ಗುತ್ತಿಗೆದಾರ ಶಿವರಾಜು ಕಾಮಗಾರಿ ಪ್ರಾರಂಭಿಸಲು ಸ್ಥಳಕ್ಕೆ ತೆರಳಿದ್ದರು. ಆದರೆ, ಗುಬ್ಬಿ RFO ಸತೀಶ್ ಚಂದ್ರ ಕೆ.ಎಸ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳದಂತೆ ಅಡ್ಡಿಪಡಿಸಿ ತಡೆದು ನಿಲ್ಲಿಸಿದ್ದರು. ಮಂಜೂರಾದ ಒಟ್ಟು ಕಾಮಗಾರಿ ಮೊತ್ತದ ಶೇಕಡಾ 30 ರಷ್ಟು ಹಣವನ್ನು ತಮಗೆ ಲಂಚವಾಗಿ ನೀಡಬೇಕು, ಅಂದರೆ ಒಟ್ಟು 5 ಲಕ್ಷ ರೂಪಾಯಿ ಲಂಚ ಕೊಟ್ಟರೆ ಮಾತ್ರ ಕೆಲಸ ಪ್ರಾರಂಭಿಸಲು ಬಿಡುವುದಾಗಿ ಬೆದರಿಕೆ ಒಡ್ಡಿದ್ದರು.
ಅಧಿಕಾರಿಯ ಕಿರುಕುಳಕ್ಕೆ ಬೇಸತ್ತ ಗುತ್ತಿಗೆದಾರ ಶಿವರಾಜು, ಕಾಮಗಾರಿ ಆರಂಭಿಸುವ ಉದ್ದೇಶದಿಂದ ಆರಂಭದಲ್ಲಿ 50,000 ರೂಪಾಯಿಗಳನ್ನು RFO ಸತೀಶ್ ಚಂದ್ರ ಅವರಿಗೆ ನೀಡಿದ್ದರು. ಆದಾಗ್ಯೂ, ಉಳಿದ 3,50,000 ರೂಪಾಯಿ ಲಂಚದ ಹಣಕ್ಕಾಗಿ ಸತೀಶ್ ಚಂದ್ರ ನಿರಂತರವಾಗಿ ಪೀಡಿಸಲು ಪ್ರಾರಂಭಿಸಿದ್ದರು. ಲಂಚ ನೀಡಲು ಇಷ್ಟವಿಲ್ಲದ ಗುತ್ತಿಗೆದಾರ ಶಿವರಾಜು, ಈ ಕುರಿತು ಸಮಗ್ರ ಸಾಕ್ಷ್ಯಾಧಾರಗಳೊಂದಿಗೆ ತುಮಕೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಪಕ್ಕಾ ಯೋಜನೆಯೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದರು. ಯೋಜನೆಯಂತೆ, ಇಂದು ಮಧ್ಯಾಹ್ನ ಗುತ್ತಿಗೆದಾರ ಶಿವರಾಜು ಅವರು ಗುಬ್ಬಿಯ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಚೇರಿಗೆ ತೆರಳಿ, ಮುಂಗಡವಾಗಿ 2 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದರು. RFO ಸತೀಶ್ ಚಂದ್ರ ಅವರ ಸೂಚನೆಯಂತೆ, ಕ್ಯಾಂಪ್ ವಾಚರ್ ಶೌಕತ್ ದೂರುದಾರರಿಂದ 2 ಲಕ್ಷ ರೂಪಾಯಿ ಹಣವನ್ನು ಸ್ವೀಕರಿಸುತ್ತಿದ್ದಂತೆಯೇ ದಾಳಿ ನಡೆಸಿದ ಲೋಕಾಯುಕ್ತ ತಂಡ, ಹಣದೊಂದಿಗೆ ಇಬ್ಬರನ್ನೂ ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದುಕೊಂಡಿದೆ.
ದೂರುದಾರರಿಂದ ಪಡೆದಿದ್ದ 2 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು, RFO ಸತೀಶ್ ಚಂದ್ರ ಹಾಗೂ ಕ್ಯಾಂಪ್ ವಾಚರ್ ಶೌಕತ್‌ನನ್ನು ಬಂಧಿಸಿದ್ದಾರೆ. ಕಚೇರಿಯಲ್ಲಿ ಇತರೆ ಕಡತಗಳು ಹಾಗೂ ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.