ಎಸ್ಟಿಗೆ ಸೇರಿಸುವಂತೆ ಆಗ್ರಹ, ಗುಬ್ಬಿ ಪಟ್ಟಣದಲ್ಲಿ ಕಾಡುಗೊಲ್ಲರಿಂದ ಹಕ್ಕೊತ್ತಾಯ ಹೋರಾಟ

By Gowthami K  |  First Published Mar 13, 2023, 9:58 PM IST

ಗುಬ್ಬಿ ಪಟ್ಟಣದಲ್ಲಿ ಕಾಡುಗೊಲ್ಲರಿಂದ ಎಸ್ಟಿಗೆ ಸೇರಿಸುವಂತೆ ಹಕ್ಕೊತ್ತಾಯ ಹೋರಾಟ. ಸಂಸತ್‌ ನಲ್ಲಿ ಧ್ವನಿ ಎತ್ತುವೆ ಎಂದ ಎಂಪಿ ಜಿ.ಎಸ್‌ ಬಸವರಾಜು. ಬಸವರಾಜು ಹೋರಾಟಕ್ಕೆ ನಾನು ಕೈ ಜೋಡಿಸುತ್ತೇನೆಂದ ಶಾಸಕ ಎಸ್.ಆರ್‌ ಶ್ರೀನಿವಾಸ್‌.


ವರದಿ : ಮಹಂತೇಶ್‌ ಕುಮಾರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ 

ತುಮಕೂರು (ಮಾ.13): ರಾಜ್ಯದಲ್ಲಿ ಹಿಂದೂಳಿದ ಜಾತಿಯಲ್ಲಿರುವ ಕಾಡುಗೊಲ್ಲ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಆಗ್ರಹಿಸಿ ಕಾಡುಗೊಲ್ಲ ಸಮುದಾಯದ ಮುಖಂಡರು ಹಾಗೂ ನೂರಾರು ಜನರು ಗುಬ್ಬಿ ಪಟ್ಟಣದಲ್ಲಿ ಹಕ್ಕೊತ್ತಾಯ ಬಹಿರಂಗ ಸಭೆ ನಡೆಸಿದ್ರು. ತುಮಕೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ರಾಮನಗರದ ಸೇರಿದಂತೆ ರಾಜ್ಯದ ಹಲವು ಕಡೆ ಈ ಕಾಡುಗೊಲ್ಲ ಸಮುದಾಯವಿದ್ದು, ಈ ಸಮುದಾಯ ಸಾಮಾಜಿಕ ಸ್ತರದಲ್ಲಿ ಕೆಳಹಂತದಲ್ಲಿದ್ದು, ಶಿಕ್ಷಣದ ಕೊರತೆ ಹಾಗೂ ಆರ್ಥಿಕ ಅಸಬಲತೆ ಕಾರಣದಿಂದ ಈ ಸಮುದಾಯ ಮೌಢ್ಯದಲ್ಲಿ ಮುಳುಗಿದೆ. ಹೀಗಾಗಿ ಈ ಕಾಡುಗೊಲ್ಲ ಜಾತಿಯನ್ನು ಎಸ್ಟಿಗೆ ಸೇರಿಸಿ ಮೀಸಲಾತಿ ಅವಕಾಶ ನೀಡಬೇಕೆಂದು ಈ ಸಭೆಯ ಆಗ್ರಹವಾಗಿತ್ತು.

Tap to resize

Latest Videos

ಗುಬ್ಬಿ ಪಟ್ಟಣದ ಚನ್ನಬಸವೇಶ್ವರ ದೇವಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಸಂಸದ ಜಿ.ಎಸ್‌ ಬಸವರಾಜು ಹಾಗೂ ಶಾಸಕ ಎಸ್.ಆರ್‌ ಶ್ರೀನಿವಾಸ್‌, ಕಾಡುಗೊಲ್ಲರ ರಾಜ್ಯ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು, ಈಗಾಗ್ಲೇ ಸರ್ಕಾರ ಕಾಡುಗೊಲ್ಲರನ್ನು ಪ್ರತ್ಯೇಕ ಜಾತಿಯಂದು ಗುರುತಿಸಿದೆ, ಹಾಗೂ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಕೂಡ ಮಾಡಲಾಗಿದೆ.

ಹೀಗಾಗಿ ಕಾಡುಗೊಲ್ಲರು ಸಾಮಾಜದಲ್ಲಿ ಮೇಲುಸ್ತರಕ್ಕೆ ಬರಲು ಅವರಿಗೆ ಮೀಸಲಾತಿ ಅವಕಾಶವಿದೆ, ಹೀಗಾಗಿ ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಮಾತನಾಡಿದ ಸಂಸದ ಜಿ.ಎಸ್‌ ಬಸವರಾಜು ಈಗಾಗ್ಲೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದೆ. ನಾನು ಸಂಸತ್‌ ನ ಶೂನ್ಯ ವೇಳೆಯಲ್ಲಿ ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಬೇಕೆಂದು ಮಾತನಾಡಿದ್ದೇನೆ. ಮುಂದಿನ ವಾರ ಸಂಸತ್‌ ಅಧಿವೇಶನದಲ್ಲಿ ನಾನು ಸೇರಿದಂತೆ ಕಾಡುಗೊಲ್ಲರು ಹೆಚ್ಚಿರುವ ಕ್ಷೇತ್ರದ ಸಂಸದರೆಲ್ಲಾ ಸೇರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡುತ್ತೇವೆಂದು ಹೇಳಿದ್ರು.

National Creche Scheme: ಉದ್ಯೋಗಸ್ಥ ತಾಯಂದಿರಿಗೆ ನೆರವಾಗ್ತಿದೆ ಈ ಯೋಜನೆ

ಬಳಿಕ ಮಾತನಾಡಿದ ಗುಬ್ಬಿ ಪಟ್ಟಣದ ಶಾಸಕ ಎಸ್. ಆರ್‌ ಶ್ರೀನಿವಾಸ್‌, ಸಂಸದರು ಪ್ರಯತ್ನ ಮಾಡಿರುವುದು ಶ್ಲಾಘನೀಯ, ಅವರು ಸಂಸತ್‌ ನಲ್ಲಿ ಪ್ರತಿಭಟನೆ ಶುರು ಮಾಡಿದ್ರೆ ನಾವಿಲ್ಲಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕ್ತಿವಿ, ಈ ಮೂಲಕ ಕಾಡುಗೊಲ್ಲರ ಹೋರಾಟಕ್ಕೆ ಬಲ ನೀಡುತ್ತೇವೆ. ಈ ಮೂಲಕ ಸಂಸದರ ಪ್ರಯತ್ನಕ್ಕೆ ನಾನು ಕೂಡ ಕೈ ಜೋಡಿಸುತ್ತೇನೆಂದು ಹೇಳಿದ್ರು, ಸದಾ ಹಾವು ಮುಂಗುಸಿಯಂತಾಡುವ ಸಂಸದ ಜಿ.ಎಸ್.‌ ಬಸವರಾಜು ಹಾಗೂ ಶಾಸಕ ಎಸ್.ಆರ್‌ ಶ್ರೀನಿವಾಸ್‌ ಕಾಡುಗೊಲ್ಲರ ಹೋರಾಟದಲ್ಲಿ ಮಾತ್ರ ದ್ವೇಷ ಮರೆತು ಒಟ್ಟಾಗಿ ಹೋರಾಟ ಮಾಡುವ ಮಾತನಾಡಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

ಎಸ್ಟಿ ಮೀಸಲಾತಿ ವಿಚಾರ: ಆ ಸಮುದಾಯಕ್ಕೆ ನ್ಯಾಯ ಕೊಡಲು ಹಾವಿನ ಹುತ್ತಕ್ಕೆ ಕೈಹಾಕಲು ನಾನು ಸಿದ್ಧ: ಸಿಎಂ

ಕಾರ್ಯಕ್ರಮ ಮುಗಿದ ಬಳಿಕ ಕಾಡುಗೊಲ್ಲ ಸಮುದಾಯದ ಮುಖಂಡರು, ಹಾಗೂ ನೂರಾರು ಜನರು ಗುಬ್ಬಿ ಚನ್ನಬಸವೇಶ್ವರ ದೇವಸ್ಥಾನದಿಂದ ತಹಶೀಲ್ದಾರ್‌ ಕಚೇರಿವರೆಗೂ ಮೆರವಣಿಗೆ ನಡೆಸಿದ್ರು. ಕಾಡುಗೊಲ್ಲ ಸಮುದಾಯದ ದೇವರುಗಳ ಉತ್ಸವ ಹಾಗೂ ಹಾಡು ನೃತ್ಯದ ಮೂಲಕ ಮೆರವಣಿಗೆ ನಡೆಸಿದ್ದು, ವಿಶೇಷವಾಗಿತ್ತು. ತಹಶೀಲ್ದಾರ್‌ ಕಚೇರಿಯಲ್ಲಿ ಎಸ್ಟಿ ಸೇರ್ಪಡೆ ಹಕ್ಕೊತ್ತಾಯದ ಮನವಿಯನ್ನು ಸಲ್ಲಿಸಲಾಯ್ತು. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ರಾಜ್ಯಮಟ್ಟದಲ್ಲಿ ಹೋರಾಟ ಮಾಡುವ ಎಚ್ಚರಿಕೆಯನ್ನು ಮುಖಂಡರು ನೀಡಿದರು.

click me!