ಬೋರ್‌ವೆಲ್ ಕೊರೆಯುವ ವಾಹನಗಳು ಸಿಗದೇ ರೈತರು ಹತಾಶರಾಗಿ ಆಕಾಶದತ್ತ ಮುಖ ಮಾಡಿದ್ದರೇ ಬೋರ್‌ವೆಲ್ ವಾಹನಗಳಿಗೆ ಶುಕ್ರದೆಸೆ ಆರಂಭವಾಗಿದೆ.
ಶಿವಾನಂದ ಮಹಾಬಲಶೆಟ್ಟಿ
ರಬಕವಿ-ಬನಹಟ್ಟಿ(ಜು.06): ಮಳೆಯಾಗದ ಹಿನ್ನೆಲೆಯಲ್ಲಿ ಅಂತರ್ಜಲಮಟ್ಟ ತೀವ್ರ ಕುಸಿತ ಕಂಡಿದೆ. ಹೀಗಾಗಿ ಜನರು ನೀರಿಗಾಗಿ ಪರದಾಟ ಅನುಭವಿಸುತ್ತಿದ್ದಾರೆ. ಇತ್ತ ಅನ್ನದಾತ ಬೆಳೆದ ಬೆಳೆಗೆ ದುಡ್ಡು ಕೊಟ್ಟು ನೀರು ಹಾಕಿಸುತ್ತಿರುವ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಇಂತಹ ಸಮಯದಲ್ಲೇ ರೈತರು ಬೋರ್‌ವೆಲ್ ಕೊರೆಸಲು ಮುಂದಾಗುತ್ತಿದ್ದಾರೆ. ಆದರೆ, ಬೋರ್‌ವೆಲ್ ಕೊರೆಯುವ ವಾಹನಗಳು ಸಿಗದೇ ರೈತರು ಹತಾಶರಾಗಿ ಆಕಾಶದತ್ತ ಮುಖ ಮಾಡಿದ್ದರೇ ಬೋರ್‌ವೆಲ್ ವಾಹನಗಳಿಗೆ ಶುಕ್ರದೆಸೆ ಆರಂಭವಾಗಿದೆ.
undefined
ಹೌದು, ಮುಂಗಾರು ಕೈ ಕೊಟ್ಟಪರಿಣಾಮ ತಾಲೂಕಿನಾದ್ಯಂತ ವಾಣಿಜ್ಯ ಬೆಳೆ ಕಬ್ಬು ಎಲ್ಲೆಡೆ ಒಣಗುತ್ತಿದ್ದು, ನೀರು ಹರಿಸಲಾಗದೇ ರೈತ ವರ್ಗ ಕೈಚೆಲ್ಲಿ ಮುಗಿಲು ನೋಡುತ್ತ ಕುಳಿತಿದೆ. ರಣ ಬಿಸಿಲಿನಿಂದಾಗಿ ಈ ಬಾರಿ ಮೇಲ್ಮಟ್ಟದ ಜಲ, ಅಂತರ್ಜಲ ಮೂಲಗಳು ಬತ್ತಿದ್ದರಿಂದ ರೈತರು ನೀರು ಪೂರೈಸಲು ಪ್ರಯತ್ನಿಸಿ ವಿಫಲರಾಗುತ್ತಿದ್ದಾರೆ. ರೈತರ ಜಮೀನುಗಳಲ್ಲಿ ಇರುವ ಬಾವಿಗಳು ಸಂಪೂರ್ಣ ಬತ್ತಿ ಹೋಗಿ, ಕೊಳವೆ ಬಾವಿಗಳಲ್ಲೂ ನೀರು ಬಾರದೇ ತಾಲೂಕಿನಲ್ಲಿ ಜಲಕ್ಷಾಮ ಎದುರಾಗಿದೆ. ಕೆಲ ರೈತರು ಶತಾಯಗತಾಯ ಕಬ್ಬಿನ ಬೆಳೆ ಉಳಿಸಿಕೊಳ್ಳಲು ಪಣ ತೊಟ್ಟು ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಮುಂದಾಗಿದ್ದು, ಕೆಲವರಿಗೆ ಗಂಗೆ ಒಲಿದರೆ, ಹಲವರ ಪಾಲಿಗೆ ಮುನಿಸು ತೋರಿದ್ದಾಳೆ.
ಬಾಗಲಕೋಟೆ: ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವ ಪೂಜಾರಿ, ದಂಡಿನ ದುರ್ಗಾದೇವಿ ಜಾತ್ರೆಯಲ್ಲಿ ವಿಶಿಷ್ಟ ಸೇವೆ..!
ಮೂರ್ನಾಲ್ಕು ತಿಂಗಳ ಕಾಯುವಿಕೆ:
ಇನ್ನು ಬೋರ್‌ವೆಲ್ ಕೊರೆಸಲು ಎಲ್ಲೆಡೆಯಿಂದ ಬೇಡಿಕೆ ಹೆಚ್ಚಿದ ಪರಿಣಾಮ ಬೋರ್‌ವೆಲ್ ವಾಹನಗಳೂ ಸಕಾಲಕ್ಕೆ ಲಭ್ಯವಾಗುತ್ತಿಲ್ಲ. ಇನ್ನೂ ಎರಡ್ಮೂರು ತಿಂಗಳು ಪುರುಸೊತ್ತಿಲ್ಲ ಎಂಬ ಉತ್ತರ ಬರುತ್ತಿದೆ. ಬೋರ್‌ವೆಲ್ ಏಜೆನ್ಸಿಗಳವರಿಂದ. ಅಷ್ಟೊಂದು ಪ್ರಮಾಣದಲ್ಲಿ ಬೋರ್‌ವೆಲ್‌ಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ರೈತರು ಮಾತ್ರ ಇತ್ತ ಬೆಳೆಗೆ ನೀರುಣಿಸಲಾಗದೆ ಪರಿತಪಿಸುತ್ತಿದ್ದಾರೆ.
ಭಾರೀ ಬೇಡಿಕೆ:
ಸಾಮಾನ್ಯವಾಗಿ ಬೇಸಿಗೆಯಲ್ಲಿ ಅದರಲ್ಲೂ ಏಪ್ರಿಲ್-ಮೇ ತಿಂಗಳಲ್ಲಿ ಬೋರ್‌ವೆಲ್ ಕೊರೆಸುವವರ ಸಂಖ್ಯೆ ಹೆಚ್ಚಾಗುತ್ತಿತ್ತು. ಮೇ ತಿಂಗಳಾಂತ್ಯದ ನಂತರ ಬೋರ್‌ವೆಲ್ ವಾಹನಗಳು ಸದ್ದು ಮಾಡದೇ ನಿಲ್ಲುತ್ತಿದ್ದವು. ಆದರೆ, ಈ ಬಾರಿ ಮುಂಗಾರು ಶುರುವಾಗಿ ತಿಂಗಳು ಕಳೆದರೂ ಬೋರ್‌ವೆಲ್‌ಗಳ ಅಬ್ಬರ ಕೇಳಿಬರುತ್ತಿದೆ. ಮುಂಗಾರು ಕೈ ಕೊಟ್ಟಿದ್ದರಿಂದ ಕೊಳವೆಬಾವಿ ಕೊರೆಸುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಸದ್ಯ ವಾಹನಗಳು ಸಿಗುವುದೇ ಗಗನ ಕುಸುಮ ಎನ್ನುವಂತಾಗಿದೆ ಈ ಭಾಗದಲ್ಲಿ.
ಬಾಗಲಕೋಟೆ: ಕೃಷ್ಣಾನದಿಯಲ್ಲಿ ಇದೀಗ ಲಕ್ಷ್ಮೀ ಕಟಾಕ್ಷ..!
ಒಟ್ಟಾರೆ ರೈತರ ಪಾಲಿಗೆ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಬೆಳೆದ ಬೆಳೆಗಳಿಗೆ ಸಮರ್ಪಕ ನೀರು ಒದಗಿಸಲಾಗುತ್ತಿಲ್ಲ. ಇತ್ತ ಹೊಸ ಬೋರ್‌ವೆಲ್‌ಗಳನ್ನು ಕೊರೆಸಬೇಕೆಂದರೆ ಹಾಗೂ ರೀ ಬೋರ್ ಮಾಡಿಸಬೇಕೆಂದರೂ ವಾಹನಗಳು ಲಭ್ಯವಾಗದೇ ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ ಕೃಷಿಕರು.
ಬೋರ್ ಹಾಕಿಸಲೂ ಆತಂಕ!
ರೈತರಲ್ಲಿ ಮಳೆಯಾಗದೇ ಇರುವ ಆತಂಕ ಒಂದು ಕಡೆಯಾದರೆ, ಶತಾಯಗತಾಯವಾಗಿ ಬೋರ್‌ವೆಲ್ ವಾಹನವನ್ನು ಕರೆಯಿಸಿ ಬೋರ್ ಹಾಕಿಸಿದರೆ, ನೀರು ಸಿಗುತ್ತದೆಯೋ ಇಲ್ಲವೋ ಎಂಬ ಭಯ ರೈತರಲ್ಲಿ ಕಾಡಲಾರಂಭಿಸಿದೆ. ಯಾಕೆಂದರೆ, ಮಳೆಯಾಗದ ಹಿನ್ನೆಲೆಯಲ್ಲಿ ಇರುವ ಅಂತರ್ಜಲ ಮಟ್ಟಪಾತಾಳ ಕಂಡಿದೆ. ಹೀಗಾಗಿ ಸಾಕಷ್ಟು ದುಡ್ಡು ಕರ್ಚು ಮಾಡಿ ಬೋರ್ ಹಾಕಿಸಿದರೆ ನೀರು ಸಿಗದೇ ಹೋದರೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಇದೇ ಕಾರಣಕ್ಕೂ ರೈತರು ಆತಂಕದ ಮಧ್ಯೆಯೇ ಬೋರ್ ಹಾಕಿಸುತ್ತಿದ್ದಾರೆ.