
ಹಾಸನ: ಮದುವೆ ಸಂಭ್ರಮದ ನಡುವೆ ಜಿಲ್ಲೆಯಲ್ಲಿ ದುರಂತ ಸಂಭವಿಸಿದೆ. ಹಸೆಮಣೆ ಏರಬೇಕಿದ್ದ ವರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದ ಬಳಿ ಇಂದು ಬೆಳಿಗ್ಗೆ ಈ ಭೀಕರ ಅಪಘಾತ ಸಂಭವಿಸಿ ವರ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದ ದರ್ಬಾರ್ ಪೇಟೆ ನಿವಾಸಿ ಮನು. ಎಲ್.ಎನ್. (29) ಅಲಿಯಾಸ್ ಗಿರೀಶ್ ಎಂದು ಗುರುತಿಸಲಾಗಿದೆ.
ಮನು. ಎಲ್.ಎನ್. ಅವರ ವಿವಾಹ ಮೇ 10, 2026ರಂದು ನಿಗದಿಯಾಗಿತ್ತು. ಮದುವೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ, ಪ್ರೀ-ವೆಡ್ಡಿಂಗ್ ಶೂಟ್‌ಗೆ ವಧುವನ್ನು ಕರೆತರಲು ಅವರು ಕಾರಿನಲ್ಲಿ ತೆರಳುತ್ತಿದ್ದರು. ಇದೇ ವೇಳೆ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಭಾರೀ ವೇಗದಲ್ಲಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ಜಜ್ಜಿಹೋಗಿದ್ದು, ಮನು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ದುರ್ಘಟನೆ ಕುಟುಂಬದವರನ್ನು ಹಾಗೂ ಗ್ರಾಮಸ್ಥರನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಕೆಲವೇ ದಿನಗಳಲ್ಲಿ ಮದುವೆ ನಡೆಯಬೇಕಿದ್ದ ಮನೆಯಲ್ಲೀಗ ಸಂತಸದ ಬದಲಿಗೆ ಸೂತಕದ ಛಾಯೆ ಆವರಿಸಿದೆ. ಸಂಬಂಧಿಕರು ಹಾಗೂ ಸ್ನೇಹಿತರು ಈ ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ದುರಂತವು ಮತ್ತೊಮ್ಮೆ ರಸ್ತೆ ಸುರಕ್ಷತೆಯ ಮಹತ್ವವನ್ನು ನೆನಪಿಸುತ್ತಿದ್ದು, ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕೆಂಬ ಸಂದೇಶವನ್ನು ಸಾರುತ್ತಿದೆ