ಕೊಡಗಿನ ಚಿನ್ನೇನಹಳ್ಳಿ ಹಾಡಿಯ ಜೇನುಕುರುಬ ಆದಿವಾಸಿ ಕುಟುಂಬಗಳಿಗಿಲ್ಲ ಗೃಹಜ್ಯೋತಿ ಭಾಗ್ಯ!

By Govindaraj SFirst Published Feb 18, 2024, 9:03 PM IST
Highlights

ಕಾಂಗ್ರೆಸ್ ಚುನಾವಣೆ ಸಂದರ್ಭ ಐದು ಉಚಿತ ಯೋಜನೆಗಳನ್ನು ಘೋಷಣೆ ಮಾಡಿತ್ತು. ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಯೋಜನೆಗಳನ್ನು ಜಾರಿಯೂ ಮಾಡಿತು. ಆದರೆ ಕೊಡಗಿನ ಒಂದು ಹಾಡಿಯಲ್ಲಿ ಗೃಹಜ್ಯೋತಿ ಭಾಗ್ಯದ ವಿಷಯವಿರಲಿ, ಗ್ರಾಮ 24 ಕುಟುಂಬಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕವೇ ಇಲ್ಲ ಎಂದರೆ ನೀವು ನಂಬುತ್ತೀರಾ. 
 

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಫೆ.18): ಕಾಂಗ್ರೆಸ್ ಚುನಾವಣೆ ಸಂದರ್ಭ ಐದು ಉಚಿತ ಯೋಜನೆಗಳನ್ನು ಘೋಷಣೆ ಮಾಡಿತ್ತು. ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಯೋಜನೆಗಳನ್ನು ಜಾರಿಯೂ ಮಾಡಿತು. ಆದರೆ ಕೊಡಗಿನ ಒಂದು ಹಾಡಿಯಲ್ಲಿ ಗೃಹಜ್ಯೋತಿ ಭಾಗ್ಯದ ವಿಷಯವಿರಲಿ, ಗ್ರಾಮ 24 ಕುಟುಂಬಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕವೇ ಇಲ್ಲ ಎಂದರೆ ನೀವು ನಂಬುತ್ತೀರಾ. ಇದನ್ನು ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಆದರೆ ಇಂದಿಗೂ ಈ ಗ್ರಾಮದ 24 ಆದಿವಾಸಿ ಜೇನುಕುರುಬ ಕುಟುಂಬಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ ಎನ್ನುವುದು ಮಾತ್ರ ಸತ್ಯ. ಹೌದು ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಚಿನ್ನೇನಹಳ್ಳಿ ಹಾಡಿಯಲ್ಲಿ ಒಟ್ಟು 30 ಕುಟುಂಬಗಳಿದ್ದು, ಅವುಗಳ ಪೈಕಿ 24 ಕುಟುಂಬಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕವೇ ಇಲ್ಲ. 

ತಲತಲಾಂತರಗಳಿಂದ ಇಲ್ಲಿ ಹುಟ್ಟಿ ಬದುಕು ದೂಡುತ್ತಿರುವ ಜೇನುಕುರುಬ ಆದಿವಾಸಿ ಸಮುದಾಯದ ಈ ಕುಟುಂಬಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ವಿದ್ಯುತ್ ಸಂಪರ್ಕವೇ ಇಲ್ಲದಿದ್ದ ಮೇಲೆ ಇನ್ನು ಸರ್ಕಾರದ ಈ ಗೃಹಜ್ಯೋತಿ ಯೋಜನೆಯಾದರೂ ದೊರೆಯುವುದು ಹೇಗೆ. ಹೀಗಾಗಿ ಈ ಕುಟುಂಬಗಳು ಗೃಹಜ್ಯೋತಿ ಯೋಜನೆಯಿಂದ ವಂಚಿತರಾಗುವ ಜೊತೆಗೆ ಕತ್ತಲಲ್ಲಿ ಬದುಕು ದೂಡುತ್ತಿದ್ದಾರೆ. ಗ್ರಾಮದಲ್ಲಿ ಶಾಲೆಗಳಿಗೆ ಹೋಗುವ ಹತ್ತಾರು ವಿದ್ಯಾರ್ಥಿಗಳಿದ್ದಾರೆ. ವಿದ್ಯುತ್ ಬೆಳಕಿಲ್ಲದ ಕಾರಣ ವಿದ್ಯಾರ್ಥಿಗಳು ಸೀಮೆ ಎಣ್ಣೆ ದೀಪದ ಬೆಳಕಿನಲ್ಲಿ ಕುಳಿತು ಕಲಿಯುತ್ತಿದ್ದಾರೆ. ಆದರೆ ನ್ಯಾಯಬೆಲೆ ಅಂಗಡಿಯಿಂದ ಸೀಮೆ ಎಣ್ಣೆಯನ್ನೂ ವಿತರಿಸುವುದಿಲ್ಲ. 

ಸಂಸದ ಡಿ.ಕೆ.ಸುರೇಶ್ ಆಡಿದ ಮಾತಿನಲ್ಲಿ ತಪ್ಪೇನಿದೆ?: ಶಾಸಕ ಎಚ್.ಸಿ.ಬಾಲಕೃಷ್ಣ

ಬಹುತೇಕ ಸಮಯ ಬೆಂಕಿಯ ಬೆಳಕಿನಲ್ಲಿ ನಮ್ಮ ಮಕ್ಕಳು ಓದು ಬರಹ ಮಾಡಬೇಕಾಗಿದೆ. ಹೀಗಾಗಿ ಅನಿವಾರ್ಯವಾಗಿ ಒಂದು ಲೀಟರ್ ಸೀಮೆಎಣ್ಣೆಗೆ 300 ರೂಪಾಯಿ ಕೊಟ್ಟು ತರುತ್ತಿದ್ದೇವೆ ಎನ್ನುತ್ತಿದ್ದಾರೆ ನಿವಾಸಿ ಸುಂದರಿ ಮತ್ತು ನಾಗಮ್ಮ. ಅಷ್ಟಕ್ಕೂ ಹಾಡಿಯಲ್ಲಿರುವ 30 ಕುಟುಂಬಗಳೆಲ್ಲವೂ ಆದಿವಾಸಿ ಜೇನುಕುರುಬ ಕುಟುಂಬಗಳಾಗಿದ್ದು, ಐಟಿಡಿಪಿ ಇಲಾಖೆಯಿಂದ 2010 -11 ನೇ ಸಾಲಿನಲ್ಲಿ ಎಲ್ಲರಿಗೂ ಮನೆ ನಿರ್ಮಿಸಿ ಕೊಡಲಾಗಿದೆ. ಆದರೆ ಮನೆಗಳಿಗೆ ಕೊಡಬೇಕಾಗಿರುವ ಹಕ್ಕುಪತ್ರ ಅಥವಾ ಯಾವುದೇ ದಾಖಲೆಗಳನ್ನು ಐಟಿಡಿಪಿ ಇಲಾಖೆ ಕೊಟ್ಟಿಲ್ಲ. ಮತ್ತಷ್ಟು ಕುಟುಂಬಗಳು ಇಂದಿಗೂ ಮತದಾರರ ಗುರುತ್ತಿನ ಚೀಟಿ, ಆಧಾರ್ ಕಾರ್ಡ್ ಯಾವುದನ್ನು ಮಾಡಿಸಿಕೊಳ್ಳಲು ಆಗಿಲ್ಲ. 

ಇದರಿಂದಾಗ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಸಾಧ್ಯವೇ ಆಗಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಇತ್ತೀಚೆಗೆ ಆಧಾರ್ ಗುರುತ್ತಿನ ಚೀಟಿಯನ್ನು ಮಾಡಿಕೊಳ್ಳಲಾಗಿದೆ. ಅದನ್ನು ನೀಡಿ ಮನೆಗೆ ವಿದ್ಯುತ್ ಸಂಪರ್ಕ ಪಡೆಯುವುದಕ್ಕೆ ಹಲವು ಬಾರಿ ಕೆಇಬಿ ಕಚೇರಿಗೆ ಮತ್ತು ಗ್ರಾಮ ಪಂಚಾಯಿತಿಗೂ ಮನವಿ ಮಾಡಿದ್ದೇವೆ. ಆದರೆ ಇದುವರೆಗೆ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ ಎಂದು ಗ್ರಾಮ ಮಹಿಳೆಯರು ಆರೋಪಿಸಿದ್ದಾರೆ. ನಮಗೆ ಮನೆಗಳನ್ನು ನಿರ್ಮಿಸಿಕೊಟ್ಟು 12 ವರ್ಷಗಳಾಗಿವೆ ಇದುವರೆಗೆ ನಮ್ಮ ಮನೆಗಳಿಗಾಗಲಿ ಅಥವಾ ಜಮೀನುಗಳಿಗಾಗಲಿ ಹಕ್ಕುಪತ್ರಗಳನ್ನು ಕೊಟ್ಟಿಲ್ಲ. ಇದರಿಂದಾಗಿ ನಾವು ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಗುತ್ತಿಲ್ಲ. 

ಕೊಟ್ಟ ಮಾತಿನಂತೆ ನಡೆಯುವ ಕಾಂಗ್ರೆಸ್ ಸರ್ಕಾರ: ಶಾಸಕ ಎಸ್.ಎನ್.ನಾರಾಯಣಸ್ವಾಮಿ

ಮನೆಗಳನ್ನು ಮಾಡಿಕೊಟ್ಟ ನಮ್ಮ ಐಟಿಡಿಪಿ ಇಲಾಖೆಯೇ ನಮಗೆ ವಿದ್ಯುತ್ ಸಂಪರ್ಕ ಮಾಡಿಸಿಕೊಡಬೇಕಾಗಿತ್ತು. ಆದರೆ ಅದ್ಯಾವ ಕೆಲಸವನ್ನು ಇಲಾಖೆ ಮಾಡಿಲ್ಲ ಎಂದು ಗ್ರಾಮ ನಿವಾಸಿ ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಐಟಿಡಿಪಿ ಇಲಾಖೆ ಅಧಿಕಾರಿಯವರನ್ನು ಕೇಳಿದರೆ ಮನೆ ನಿರ್ಮಿಸಿಕೊಡುವುದು ಅಷ್ಟೇ ನಮ್ಮ ಜವಾಬ್ದಾರಿ. ವಿದ್ಯುತ್ ಸಂಪರ್ಕವನ್ನು ಅವರೇ ಪಡೆದುಕೊಳ್ಳಬೇಕು ಎನ್ನುತ್ತಾರೆ. ಒಟ್ಟಿನಲ್ಲಿ ಸರ್ಕಾರವೇನೋ ಬಡವರಿಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಕೊಡುವುದಾಗಿ ಗೃಹಜ್ಯೋತಿ ಯೋಜನೆಯನ್ನು ಜಾರಿ ಮಾಡಿದೆ. ಆದರೆ ಈ ಆದಿವಾಸಿ ಜೇನುಕುರುಬ ಕುಟುಂಬಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕವೇ ಇಲ್ಲದೆ ಇರುವುದು ವಿಷರ್ಯಾಸ.

click me!