
ಆರ್.ಸಂತೋಷ್ ಕೋಡಿಹಳ್ಳಿ
ಹಿರಿಯೂರು [ಜ.05]: ನರೇಗಾ ಕನ್ವರ್ಜೆನ್ಸ್ (ಒಗ್ಗೂಡಿಸುವಿಕೆ)ಕಾಮಗಾರಿ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಅನಿಲಮ್ಮ ಎಂಬುವರ ಸದಸ್ಯತ್ವವನ್ನು ರದ್ದುಗೊಳಿಸಿ ಗ್ರಾಮೀಣ ಮತ್ತು ಪಂಚಾಯತ್ ಅಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ತಾಲೂಕಿನಲ್ಲಿ ನೂರಾರು ಕೋಟಿ ರು.ಗಳ ನರೇಗಾ ಕನ್ವರ್ಜೆನ್ಸ್ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾಗಿದ್ದ ಅಕ್ರಮಗಳ ಕುರಿತು ಕನ್ನಡಪ್ರಭ ನಿರಂತರವಾಗಿ ಸರಣಿ ವರದಿ ಪ್ರಕಟಿಸಿ ಸಮಸ್ಯೆಯ ಮೇಲೆ ಬೆಳಕನ್ನು ಚೆಲ್ಲಿತ್ತು. ಈ ವರದಿಗಳು ಮತ್ತು ಸಾಮಾಜಿಕ, ಮಾಹಿತಿ ಹಕ್ಕು ಹೋರಾಟಗಾರರ ಬೆಂಬಿಡದ ಪ್ರಯತ್ನಗಳಿಂದಾಗಿ ಚಿತ್ರದುರ್ಗ ಜಿಪಂ ಇಲಾಖೆಯ ಒಂಬುಡ್ಸ್‌ಮನ್ ಅಧಿಕಾರಿಗಳು ಕಳೆದ ವರ್ಷವೇ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಿದ್ದರು.
ಈ ವರದಿಯನ್ನು ಕೂಲಂಕಶವಾಗಿ ಅಧ್ಯಯನ ಮಾಡಿದ ಜಿಪಂ ಸಿಇಒ ಸತ್ಯಭಾಮ ಸರ್ಕಾರಕ್ಕೆ ವರದಿ ಸಮೇತ ಅಕ್ರಮಗಳ ಕುರಿತು ತನಿಖೆಯ ತೀರ್ಪು ನೀಡುವಂತೆ ಪತ್ರ ಬರೆದಿದ್ದರು. ಸತ್ಯಾಸತ್ಯತೆ ಕುರಿತು ವಿಚಾರಣೆಗೆ ಮುಂದಾದ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಪ್ರಾದೇಶಿಕ ಆಯುಕ್ತರು ವಿವಿಪುರ ಗ್ರಾಪಂ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಅನಿಲಮ್ಮ ಎಂಬುವರಿಗೆ ಹಲವು ನೋಟಿಸ್‌ಗಳನ್ನು ಜಾರಿ ಮಾಡಿ ಪ್ರಕರಣದ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಿದ್ದರು. ಆದರೆ, ಯಾವ ನೋಟಿಸ್‌ಗಳಿಗೂ ಉತ್ತರಿಸದ ಅನಿಲಮ್ಮ ವಿಚಾರಣೆಗೆ ಸತತ ಗೈರು ಹಾಜರಾದ ಹಿನ್ನೆಲೆಯಲ್ಲಿ ಅಂತಿಮವಾಗಿ ಅವರ ಸದಸ್ಯತ್ವ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಕ್ರಮ ಕಾಮಗಾರಿ ವಿವರ:
ವಿವಿಪುರ ಗ್ರಾಪಂ ಸದಸ್ಯೆ ಅನಿಲಮ್ಮ ಎಂಬುವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ರು.9.30 ಲಕ್ಷದ ಕಾಮಗಾರಿಯಲ್ಲಿ ಅಕ್ರಮ ಎಸಗಿರುವುದನ್ನು ಸಾರ್ವಜನಿಕ ದೂರಿನ ಆಧಾರದ ಮೇರೆಗೆ ಚಿತ್ರದುರ್ಗ ಜಿಪಂನ ಒಂಬುಡ್ಸ್‌ಮನ್ ತಂಡ ಪತ್ತೆ ಹಚ್ಚಿ ಕೂಲಂಕಶ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸಿತ್ತು.
ತನಿಖೆಯಲ್ಲಿ ಬಯಲಾದ ಅಕ್ರಮ:
2018-19ನೇ ಸಾಲಿನಲ್ಲಿ ನರೇಗಾ ಕನ್ವರ್ಜೆನ್ಸ್ ಯೋಜನೆಯಡಿ ವಿವಿಪುರ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಪುರ ಗ್ರಾಮದ ಜೈರಾಂ ಠಾಕೂರ್ ಜಮೀನಿನಿಂದ ವಜ್ರ ಸಿದ್ದಪ್ಪನ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ(ರು.9.50 ಲಕ್ಷ)ಅನುಷ್ಠಾನಗೊಳಿಸಿ ಬಿಲ್ ಪಾವತಿ ಮಾಡಲಾಗಿತ್ತು. ಆದರೆ, ಈ ಕಾಮಗಾರಿ ಕಳಪೆಯಾಗಿದೆ ಎಂದು ಬಳ್ಳಾರಿ ಜಿಲ್ಲೆಯ ರಾಗಿಮುಸಲವಾಡ ಗ್ರಾಮದ ಆರ್‌ಟಿಐ ಕಾರ್ಯಕರ್ತ ಎಸ್.ಆರ್.ಚಿಕ್ಕನಗೌಡ ಎಂಬುವರು ಒಂಬುಡ್ಸ್‌ಮನ್‌ಗೆ ದೂರು ನೀಡಿದ್ದರು. ದೂರಿನಲ್ಲಿ ಈ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸಿ ಅನುಮೋದನೆ ಪಡೆದಿರುವುದಿಲ್ಲ, ಕಾಮಗಾರಿಯು ಅರಣ್ಯ ವ್ಯಾಪ್ತಿಗೂ ಸೇರಿರುವುದರಿಂದ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಾಗಿತ್ತು ಅದನ್ನೂ ಪಡೆದಿಲ್ಲ ಎಂಬ ಅಂಶಗಳನ್ನು ಪ್ರಸ್ತಾಪಿಸಿ ತನಿಖೆಗೆ ಒತ್ತಾಯಿಸಲಾಗಿತ್ತು. ಅದರಂತೆ ಒಂಬುಡ್ಸ್‌ಮನ್ ಟೀಂ ಗ್ರಾಮದ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಿತ್ತು. ಈ ವರದಿಯನ್ನು ಸಿಇಓ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರು.
ನೋಟಿಸ್, ವಿಚಾರಣೆ, ಆದೇಶ:
ಈ ಸಂಬಂಧ ಪಂಚಾಯತ್‌ರಾಜ್ ಇಲಾಖೆಯ ಪ್ರಾದೇಶಿಕ ಆಯುಕ್ತರು ವಿಚಾರಣ ಕೈಗೆತ್ತಿಕೊಂಡು 17-7-2019ರಂದು ಪ್ರಕರಣದ ಆರೋಪಿ ವಿವಿಪುರ ಗ್ರಾಪಂ ಸದಸ್ಯೆ ಅನಿಲಮ್ಮ ಎಂಬುವರಿಗೆ ಶೋ ಕಾಸ್ ನೋಟಿಸ್ ನೀಡಿದ್ದರು. ಆದರೆ, ಆ ಪತ್ರಕ್ಕೆ ಅನಿಲಮ್ಮ ಯಾವುದೇ ಉತ್ತರ ನೀಡಿರಲಿಲ್ಲ. ತದನಂತರ 18-10-2018ರಂದು ಮತ್ತೊಂದು ನೋಟಿಸ್ ನೀಡಿ ವಿಚಾರಣೆಗೆ ಖುದ್ದು ಹಾಜರಾಗುವಂತೆ ತಿಳಿಸಿದರೂ ಅನಿಲಮ್ಮ ಸೊಪ್ಪ ಹಾಕಿರಲಿಲ್ಲ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಹಿನ್ನೆಲೆಯಲ್ಲಿ ಒಂಬುಡ್ಸ್‌ಮನ್ ತನಿಖೆ, ವರದಿಯ ವಿಶ್ಲೇಷಣೆಯನ್ನೇ ಕೂಲಂಕುಶವಾಗಿ ಪರಿಶೀಲಿಸಿ ಅಕ್ರಮ ನಡೆದಿರುವುದು ಸಾಬೀತಾಗಿದೆ ಹಾಗೂ ಅಕ್ರಮವಾಗಿ ನಡೆಸಿರುವ ಕಾಮಗಾರಿಯಲ್ಲೂ ಖುದ್ದು ಅನಿಲಮ್ಮ ಭಾಗಿಯಾಗಿದ್ದಾರೆ ಎಂಬ ನಿರ್ಣಯಕ್ಕೆ ಬಂದ ಪ್ರಾದೇಶಿಕ ಆಯುಕ್ತರು ಪಂಚಾಯತ್ ರಾಜ್ ಅಧಿನಿಯಮ 1993ರ 43(ಎ)ರ ಅನ್ವಯ ಅನಿಲಮ್ಮ ಅವರ ಸದಸ್ಯತ್ವ ರದ್ದು ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪ ನಿರ್ದೇಶಕ, ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ ಡಿ.ಓ.ರಮೇಶ್ ದಿನಾಂಕ 4-1-2020ರಂದು ಆದೇಶ ಹೊರಡಿಸಿ ಅನಿಲಮ್ಮ ಅವರ ಸದಸ್ಯತ್ವವನ್ನು ರದ್ದುಪಡಿಸಿದ್ದಾರೆ.
ಈ ಪ್ರಕರಣವನ್ನು ಕರ್ನಾಟಕ ಭ್ರಷ್ಟಾಚಾರ ವಿರೋಧಿ ವೇದಿಕೆಯು ಕೈಗೆತ್ತಿಕೊಂಡಿತ್ತು. ಅಕ್ರಮಗಳ ಹೂರಣವನ್ನು ಕನ್ನಡಪ್ರಭ ಸರಣಿ ವರದಿಗಳ ಮೂಲಕ ಬಯಲಿಗೆಳೆದು ನಮ್ಮ ವೇದಿಕೆಯ ನೈತಿಕ ಬೆಂಬಲಕ್ಕೆ ನಿಂತಿತ್ತು. ಈಗ ಅದೆಲ್ಲದರ ಫಲವಾಗಿ ಮಹತ್ವದ ಆದೇಶ ಹೊರಬಿದ್ದಿದೆ.
-ವಿವಿಪುರ ಉಮೇಶ್, ಕರ್ನಾಟಕ ಭ್ರಷ್ಟಾಚಾರ ವಿರೋಧಿ ವೇದಿಕೆಯ ರಾಜ್ಯಾಧ್ಯಕ್ಷ.