ಮಹಾಮಾರಿ ಕೊರೋನಾ ವೈರಸ್‌ನಿಂದ ಲಾಕ್‌ಡೌನ್| ಗ್ರಾಪಂನಲ್ಲಿ ಕೆಲಸವಿಲ್ಲದೆ ಅಭಿವೃದ್ಧಿಗಳನ್ನು ಕೈಗೊಳ್ಳಬೇಕಾದ ವಾರ್ಡ್ ಕೆಲಸವು ನಿಂತಿವೆ| ದೃತಿಗೆಡದೆ ತಳ್ಳುಗಾಡಿಯಲ್ಲಿ ದ್ರಾಕ್ಷಿ, ಸಪೋಟ, ಬಾಳೆಹಣ್ಣು ಸೇರಿದಂತೆ ನಾನಾ ಹಣ್ಣುಗಳ ವ್ಯಾಪಾರ ಆರಂಭಿಸಿ ಜೀವನ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ ಸದಸ್ಯೆ ರತ್ನವ್ವ|
ಹನುಮಸಾಗರ(ಏ.30): ಸಮಾಜಸೇವೆ ಮಾಡುವ ಉದ್ದೇಶದಿಂದ ಗ್ರಾಪಂ ಚುನಾವಣೆಯಲ್ಲಿ ಗೆದ್ದು ಬಂದ ಮಹಿಳೆ ಸದ್ಯ ಗ್ರಾಪಂನಲ್ಲಿ ಕೆಲಸವಿಲ್ಲದೆ ನಾನಾ ಹಣ್ಣುಗಳನ್ನು ಮಾರಲು ಮುಂದಾಗಿದ್ದಾರೆ.
ಗ್ರಾಮದ 13ನೇ ವಾರ್ಡ್‌ನ ನಿವಾಸಿ ರತ್ನವ್ವ ಅಡಿವೆಪ್ಪ ಭಜಂತ್ರಿ ಅವರು 12ನೇ ವಾರ್ಡ್‌ನಿಂದ ಮೀಸಲಾತಿ ಕೋಟಾದಡಿಯಲ್ಲಿ ಈ ಹಿಂದೆ ನಡೆದ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವನ್ನು ಸಾಧಿಸಿದ್ದರು. ವಾರ್ಡ್‌ನ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಇದರೊಂದಿಗೆ ತಮ್ಮ ಕುಲಕಸುಬಾದ ಬಿದರಿನ ಪುಟ್ಟಿಯನ್ನು ಹೆಣೆಯುವುದು, ಕಸ ಗುಡಿಸುವ ಸಾಮಗ್ರಿಗಳನ್ನು ಸಿದ್ಧಪಡಿಸುವುದು ಕಾಯಕವನ್ನಾಗಿ ಮಾಡಿಕೊಂಡಿದ್ದರು.
ಕೊಪ್ಪಳದಲ್ಲಿ ಕೊರೋನಾಕ್ಕೆ 19 ಮಂದಿ ಬಲಿಯಾಗಲಿದ್ದಾರೆ: ವೈದ್ಯಾಧಿಕಾರಿ ಹೇಳಿಕೆಗೆ ಆಕ್ರೋಶ
ಕಳೆದ ತಿಂಗಳಿನಿಂದ ಮಹಾಮಾರಿ ಕೊರೋನಾ ವೈರಸ್‌ನಿಂದ ದೇಶವೇ ಲಾಕ್‌ಡೌನ್ ಆದ ಹಿನ್ನೆಲೆ ಗ್ರಾಪಂನಲ್ಲಿ ಕೆಲಸವಿಲ್ಲದೆ ಅಭಿವೃದ್ಧಿಗಳನ್ನು ಕೈಗೊಳ್ಳಬೇಕಾದ ವಾರ್ಡ್ ಕೆಲಸವು ನಿಂತಿವೆ. ಅದಕ್ಕೆ ರತ್ನವ್ವ ದೃತಿಗೆಡದೆ ತಳ್ಳುಗಾಡಿಯಲ್ಲಿ ದ್ರಾಕ್ಷಿ, ಸಪೋಟ, ಬಾಳೆಹಣ್ಣು ಸೇರಿದಂತೆ ನಾನಾ ಹಣ್ಣುಗಳ ವ್ಯಾಪಾರವನ್ನು ಆರಂಭಿಸಿ ಜೀವನ ನಿರ್ವಹಿಸುತ್ತಿದ್ದಾರೆ. ಪತಿ ಅಡಿವೆಪ್ಪ ನಿಧನ ಹೊಂದಿದ್ದರಿಂದ ಮಕ್ಕಳು ತಮ್ಮ ಕುಲಕಸುಬಾದ ಬಾಜಾ ಭಜಂತ್ರಿ ಕೆಲಸ ಮುಂದುವರಿಸಿಕೊಂಡು ಬಂದಿದ್ದಾರೆ.
ಪ್ರತಿ ವರ್ಷ ಏಪ್ರಿಲ್, ಮೇ ತಿಂಗಳಿನಲ್ಲಿ ಮದುವೆ ಸಮಾರಂಭಗಳಲ್ಲಿ ಮಕ್ಕಳು ತಮ್ಮ ಕುಲಕಸುಬವನ್ನು ಮಾಡಿಕೊಂಡು ಕುಟುಂಬದ ಜೀವನವನ್ನು ನಿರ್ವಹಿಸುತ್ತಿದ್ದರು. ಆದರೆ ಈ ಬಾರಿ ಜಾತ್ರೆ, ಅಡ್ಡಪಲ್ಲಕ್ಕಿ ಉತ್ಸವ, ಮದುವೆಗಳು ಸೇರಿದಂತೆ ನಾನಾ ಶುಭ ಕಾರ್ಯಕ್ರಮಗಳು ರದ್ದಾಗಿವೆ. ಈ ಹಿನ್ನೆಲೆ ಗ್ರಾಪಂ ಸದಸ್ಯೆಯಾದರೂ ಧೃತಿಗೆಡದೆ ಹಣ್ಣು ಮಾರಲು ಮುಂದಾಗಿದ್ದಾರೆ.
ಯಾವುದೇ ಸಮಯದಲ್ಲಾದರೂ ಹೊಟ್ಟೆಪಾಡಿಗಾಗಿ ಶ್ರಮಪಟ್ಟು ಕೆಲಸವನ್ನು ನಿರ್ವಹಿಸುವದರಲ್ಲಿ ತಪ್ಪೇನಿಲ್ಲ. ಪ್ರತಿನಿತ್ಯ ಹೊಟ್ಟೆಪಾಡಿಗಾಗಿ ನಾನಾ ವಾರ್ಡ್‌ಗಳಿಗೆ ಹಣ್ಣುಗಳನ್ನು ತಳ್ಳುಗಾಡಿಯಲ್ಲಿ ಹೊತ್ತು ಮಾರುತ್ತಿದ್ದೇನೆ ಎಂದು ಗ್ರಾಪಂ ಸದಸ್ಯೆ ರತ್ನವ್ವ ಅಡಿವೆಪ್ಪ ಭಜಂತ್ರಿ ಅವರು ಹೇಳಿದ್ದಾರೆ.