
ವಿಶೇಷ ವರದಿ
ಧಾರವಾಡ: ಗ್ರಾಮ ಪಂಚಾಯಿತಿಗಳಿಗೆ ತೆರಿಗೆ ವಸೂಲಿಯೇ ಸವಾಲಿನ ಕೆಲಸ. ಇನ್ನು, ಸರ್ಕಾರದಿಂದ ಬರುವ ಅನುದಾನವು ಅಷ್ಟಕ್ಕಷ್ಟೇ. ಹೀಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನಕ್ಕಾಗಿ ಗ್ರಾಪಂಗಳು ಪರದಾಡುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಧಾರವಾಡದ ಗ್ರಾಮ ಪಂಚಾಯಿತಿಯೊಂದು ತಾನು ಸಂಗ್ರಹಿಸಿದ ತೆರಿಗೆ ಹಣದಲ್ಲಿ ಗ್ರಾಮದ ಸುರಕ್ಷತೆ ದೃಷ್ಟಿಯಿಂದ ಇಡೀ ಗ್ರಾಮಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿದೆ.
ರಾಷ್ಟ್ರೀಯ ಹೆದ್ದಾರಿ 4ಕ್ಕೆ ಅಂಟಿಕೊಂಡ, ಕೈಗಾರಿಕಾ ಪ್ರದೇಶಕ್ಕೆ ತನ್ನ ಭೂಮಿ ನೀಡಿರುವ ಸಮೀಪದ ಮುಮ್ಮಿಗಟ್ಟಿ ಗ್ರಾಪಂನ ಮುಮ್ಮಿಗಟ್ಟಿ ಸಂಪೂರ್ಣವಾಗಿ ಸಿಸಿ ಕ್ಯಾಮೆರಾ ಅಳವಡಿಸಿಕೊಂಡಿರುವ ಗ್ರಾಮ. ಈ ಗ್ರಾಮದ ಮೂಲಕವೇ ರಾಷ್ಟ್ರೀಯ ಹೆದ್ದಾರಿ ಹೋಗುವುದರಿಂದ ಈಗಾಗಲೇ ಸಾಕಷ್ಟು ಅಪಘಾತಗಳಾಗಿ ಜನರು ಅಸುನೀಗಿದ್ದಾರೆ. ಜೊತೆಗೆ ಸಮೀಪವೇ ಕೈಗಾರಿಕಾ ಪ್ರದೇಶವಿದ್ದು, ನಿತ್ಯ ಅಪರಿಚಿತ ಜನರ ಓಡಾಟ, ಸಂಪರ್ಕ ಜನರೊಂದಿಗೆ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಆಗುತ್ತಿದ್ದ ಕಳ್ಳತನ, ಅಪರಾಧ ಪ್ರಕರಣಗಳು ಹಾಗೂ ಇತರೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಗ್ರಾಪಂ ಸದಸ್ಯರು ಬರೋಬ್ಬರಿ ₹ 7.5 ಲಕ್ಷ ವೆಚ್ಚದಲ್ಲಿ ಸಿಸಿ ಕ್ಯಾಮೆರಾ ಮೂಲಕ ತಮ್ಮೂರು ರಕ್ಷಿಸಿಕೊಳ್ಳುತ್ತಿದ್ದಾರೆ.
ಸುಮಾರು 12 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಿಂದ ₹ 50 ಲಕ್ಷ ತೆರಿಗೆ ಸಂಗ್ರಹಿಸಿದ್ದು, ಗ್ರಾಮದಲ್ಲಿ ಮೂಲಭೂತ ಸೌಕರ್ಯ ನೆರವೇರಿಸಲು ಅನುದಾನ ನೀಡಿಯೂ ₹ 7.5 ಲಕ್ಷ ವೆಚ್ಚದಲ್ಲಿ ಗ್ರಾಮದ 22 ಸ್ಥಳಗಳಲ್ಲಿ ಹೈ ಡೆಫಿನೇಶನ್ ಕ್ಯಾಮೆರಾಗಳನ್ನು ಇತ್ತೀಚೆಗೆ ಅಳವಡಿಸಲಾಗಿದೆ. ಇದರಿಂದ ಗ್ರಾಮದಲ್ಲಿ ಅಹಿತಕರ ಘಟನೆ, ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಗ್ರಾಪಂ ಪಿಡಿಒ ಪರಶುರಾಮ ಕವಲೂರು ಹೇಳುತ್ತಾರೆ.
ನಾವು ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಸುಮಾರು ಒಂದು ತಿಂಗಳವರೆಗೆ ಬ್ಯಾಕ್ ಅಪ್ ಇಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಎಲ್ಲವನ್ನು ಗ್ರಾಮ ಪಂಚಾಯಿತಿ ಕಚೇರಿಯಿಂದಲೇ ನಿರ್ವಹಿಸಲಾಗುತ್ತಿದೆ. ಅಲ್ಲದೇ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಉಳಿದ ಸದಸ್ಯರೆಲ್ಲರೂ ಸೇರಿ ಸಭೆ ನಡೆಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮೊದಲಿಗೆ ಎಲ್ಲರೂ ಗ್ರಾಮದಲ್ಲಿ ಸಂಚರಿಸಿ ಎಲ್ಲೆಲ್ಲಿ ಕ್ಯಾಮೆರಾಗಳ ಅವಶ್ಯಕತೆ ಇದೆ ಎನ್ನುವುದು ನಿರ್ಧರಿಸಲಾಯಿತು. ಬಳಿಕ ಸಮೀಪದ ಗರಗ ಪೊಲೀಸ್ ಠಾಣೆಗೂ ಮಾಹಿತಿ ನೀಡಿ, ಪೊಲೀಸರ ಕೆಲವು ಸಲಹೆಗಳನ್ನು ಪಡೆದುಕೊಂಡು ಇಡೀ ಗ್ರಾಮ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಇಡಲಾಗಿದೆ.
ಇದನ್ನೂ ಓದಿ: ಪಶ್ಚಿಮ ಘಟ್ಟದ ಎದೆ ಬಗೆದ ಸತ್ಯ: ಅಧ್ಯಯನ ವರದಿ ಬಿಚ್ಚಿಟ್ಟ ಮಹಾ ಅಪಾಯ, ಶೇ. 60.7ರಷ್ಟು ಭೂಕುಸಿತ!
ಇನ್ನು, ಗ್ರಾಮದ ಪಕ್ಕದಲ್ಲಿಯೇ ಸಾಕಷ್ಟು ಕೈಗಾರಿಕೆಗಳಿದ್ದು, ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಬಂದಿರುವ ಜನರು ಗ್ರಾಮದಲ್ಲಿ ನೆಲೆಸಿದ್ದಾರೆ. ಅವರ ಮೇಲೆ ಕಣ್ಣಿಡುವುದಲ್ಲದೇ, ಗ್ರಾಮದಲ್ಲಿ ಯುವತಿಯರನ್ನು ಚುಡಾಯಿಸುವುದು, ಮನೆಗಳ್ಳತನ, ಎಲ್ಲೆಂದರಲ್ಲಿ ಮದ್ಯಪಾನ, ಗಲಾಟೆಗಳನ್ನು ನಿಯಂತ್ರಿಸಲು ಈ ಕ್ಯಾಮೆರಾಗಳು ಸಹಾಯಕವಾಗಿವೆ. ಇದಕ್ಕೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತಗಳು ಹಿಟ್ ಆ್ಯಂಡ್ ರನ್ ಪ್ರಕರಣಗಳಿದ್ದು ಅವುಗಳು ಸಹ ಪತ್ತೆಯಾಗಲು ಸಹಾಯಕವಾಗಿದೆ ಎಂದು ಕವಲೂರು ತಿಳಿಸಿದರು.
ನಗರ ಪ್ರದೇಶದಲ್ಲಿನ ಅನೇಕ ಪ್ರಮುಖ ಬಡಾವಣೆಗಳಲ್ಲಿ ಇನ್ನೂ ಸಿಸಿ ಕ್ಯಾಮೆರಾಗಳು ಇರದಿರುವ ಸಂದರ್ಭದಲ್ಲಿ ತಮ್ಮೂರಿನ ರಕ್ಷಣೆಗೋಸ್ಕರ ಇಡೀ ಊರಿಗೆ ಕ್ಯಾಮೆರಾಗಳನ್ನು ಅಳವಡಿಸಿ ಮುಮ್ಮಿಗಟ್ಟಿ ಗ್ರಾಪಂ ಮಾದರಿಯಾಗಿದೆ.
ಇದನ್ನೂ ಓದಿ: ಹೊಲದಲ್ಲಿನ ಮೆಣಸಿನಕಾಯಿ ಬೆಳೆ ರಕ್ಷಣೆಗೆ ಹೈಟೆಕ್ ಭದ್ರತಾ ಕ್ರಮ ತೆಗೆದುಕೊಂಡ ಧಾರವಾಡದ ರೈತ