ರಾಜ್ಯದಲ್ಲಿ ಅಡಕೆ ಬೆಳೆಗಾರರಿಗೆ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಂಡು ಹಂತ ಹಂತವಾಗಿ ರಾಜ್ಯದಲ್ಲಿ ತಂಬಾಕು, ಗುಟ್ಕಾ ನಿಷೇಧಿಸಲಾಗುವುದು ಎಂದು ಸಿಎಂ ಹೇಳಿದರು.
ದಾವಣಗೆರೆ [ಸೆ.30]: ತಂಬಾಕು ಉತ್ಪನ್ನಗಳಿಗೆ ಹತ್ತಾರು ಸಾವಿರ ಜನರು ಬಲಿಯಾದ ಹಿನ್ನೆಲೆ ರಾಜ್ಯದಲ್ಲಿ ತಂಬಾಕು, ಗುಟ್ಕಾ ಉತ್ಪನ್ನಗಳನ್ನು ಹಂತ ಹಂತವಾಗಿ ನಿಷೇಧಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಬಾರದು. ತಂಬಾಕು ಉತ್ಪನ್ನ, ಗುಟ್ಕಾ ಸೇವನೆಯಿಂದ ಜನ ಸಾಯ ಬಾರದು. ಈ ಎರಡೂ ಅಂಶಗಳನ್ನುಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ ರಾಜ್ಯದಲ್ಲಿ ತಂಬಾಕು ಉತ್ಪನ್ನ, ಗುಟ್ಕಾ ನಿಷೇಧಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದೇ ವೇಳೆ ವಿಆರ್‌ಎಲ್ ಸಮೂಹಗಳ ಅಧ್ಯಕ್ಷ, ಉದ್ಯಮಿ ವಿಜಯ್ ಸಂಕೇಶ್ವರ ಮಾತನಾಡಿ, ದೇಶದಲ್ಲಿ 15 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸ್ತುತ ತಂಬಾಕು ಉತ್ಪನ್ನ, ಗುಟ್ಕಾ ತಯಾರಿಕೆ, ಮಾರಾಟ ನಿಷೇಧಿಸಿದೆ. ಈ ಬಗ್ಗೆ ನಮ್ಮ ರಾಜ್ಯದಲ್ಲೂ ಗುಟ್ಕಾ, ತಂಬಾಕು ಉತ್ಪನ್ನಗಳನ್ನು ಜನರ ಹಿತದೃಷ್ಟಿಯಿಂದ ನಿಷೇಧಿಸಲು ಸಿಎಂ ಯಡಿಯೂರಪ್ಪ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಒರಿಸ್ಸಾದಲ್ಲಿ ಶೇ.92 ರಷ್ಟುತಂಬಾಕು ಮುಕ್ತವಾಗಿದೆ. ವರ್ಷಕ್ಕೆ 10 ಸಾವಿರಕ್ಕೂ ಹೆಚ್ಚು ಜನರು ತಂಬಾಕು ಉತ್ಪನ್ನ, ಗುಟ್ಕಾ ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ. ಗುಟ್ಕಾ ನಿಷೇಧಿಸಿದಾಗ ಅವುಗಳ ಉತ್ಪಾದಕರು ಪಾನ್ ಮಸಾಲಾ ಅಂತಾ ಎರಡು ಪ್ಯಾಕ್ ಮಾಡಿ, ಮಾರಾಟ ಮಾಡುತ್ತಿವೆ. ಗುಟ್ಕಾ, ತಂಬಾಕು ಉತ್ಪನ್ನ ಸೇವನೆಯಿಂದ ಅನೇಕ ಕುಟುಂಬಗಳ ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದೇಶದ ಇತರೆ 17 ರಾಜ್ಯಗಳು ತಂಬಾಕು ಉತ್ಪನ್ನ, ಗುಟ್ಕಾ ನಿಷೇಧಿಸಿರುವಾಗ ನಮ್ಮ ರಾಜ್ಯದಲ್ಲೂ ಈ ಬಗ್ಗೆ ದಿಟ್ಟಕ್ರಮ ಕೈಗೊಳ್ಳಬೇಕಿದೆ. ರಾಜ್ಯ ಕಳೆದ 50 ವರ್ಷಗಳಲ್ಲಿ ಕಂಡ ಸಮರ್ಥ ಮುಖ್ಯಮಂತ್ರಿಯೆಂದರೆ ಯಡಿಯೂರಪ್ಪ. ಬಿಎಸ್‌ವೈಗೆ ನಾನು ನಿವೇದನೆ ಮಾಡಿಕೊಳ್ಳುತ್ತಿದ್ದೇನೆ. ಕಾನೂನಿನ ರಕ್ಷಣೆ ಪಡೆದು, ಅಧಿಕಾರಿಗಳ ಜೊತೆಗೆ ಶಾಮೀಲಾಗಿ ಸುಪಾರಿ ಮತ್ತು ಪಾನ್ ಮಸಾಲ ಅಂತಾ ಮಾರಾಟ ಮಾಡಿ, ಜನರ ಜೀವನ ಹಾಳು ಮಾಡುವುದನ್ನು ಮೊದಲು ತಡೆಯಿರಿ. ಗುಟ್ಕಾ, ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಬಿಎಸ್‌ವೈ ಕ್ರಮ ಕೈಗೊಳ್ಳಲಿ ಎಂದು ತಮ್ಮ ಭಾಷಣ ಮುಗಿಸಿದ ವಿಜಯ ಸಂಕೇಶ್ವರ್ ಈ ಬಗ್ಗೆ ರಂಭಾಪುರಿ ಶ್ರೀಗಳ ಸಮ್ಮುಖ ಬಿಎಸ್‌ವೈಗೆ ಮನವಿ ಅರ್ಪಿಸಿದರು.