ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ್ದಾರೆ.
ದಾವಣಗೆರೆ [ಸೆ.30]: ವೀರಶೈವ-ಲಿಂಗಾಯತ ಧರ್ಮದ ದುರುಪಯೋಗಕ್ಕೆ ಕೆಲವರು ಈ ಹಿಂದೆ ಪ್ರಯತ್ನಿಸಿದಾಗ, ವೀರಶೈವ-ಲಿಂಗಾಯತ ಒಂದೇ ಎಂಬ ನನ್ನ ಕೂಗಿಗೆ ಬೆಂಬಲವಾಗಿ ನಿಂತಿದ್ದೇ ಬಿ.ಎಸ್.ಯಡಿಯೂರಪ್ಪ. ಅವರಿಂದಾಗಿಯೇ ವೀರಶೈವ-ಲಿಂಗಾಯತ ಧರ್ಮ ಇಂದು ಒಡೆಯದೇ ಉಳಿದಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಸಮಾಜ ಇಂದು ಒಡೆಯದೇ ಉಳಿದಿದ್ದರೆ ಅದಕ್ಕೆ ಯಡಿಯೂರಪ್ಪ ಕಾರಣ. ಕೆಲವರು ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾಗ ವೀರಶೈವ-ಲಿಂಗಾಯತರ ಪರವಾಗಿ ನಿಂತು, ಶಾಮನೂರು ಶಿವಶಂಕರಪ್ಪ ಅವರ ಮಾತಿಗೆ ನಾನು ಬದ್ಧ. ಅವರು ಹೇಳಿದಂತೇ ನಾವು ನಡೆಯುವುದು ಎಂದು ಯಡಿಯೂರಪ್ಪ ಹೇಳಿದ ಮಾತುಗಳು ನನಗೆ ಧೈರ್ಯ ತಂದಿತು ಎಂದು ಸ್ಮರಿಸಿದರು. ನಗರದ ಹೈಸ್ಕೂಲ್ ಮೈದಾನದಲ್ಲಿ ರಂಭಾಪುರಿ ಶ್ರೀಗಳ 10 ದಿನಗಳ ಶರನ್ನವರಾತ್ರಿ ಧರ್ಮ ಸಮ್ಮೇಳನದಲ್ಲಿ ಕೊಲ್ಲಿಪಾಕಿ ಕ್ಷೇತ್ರದರ್ಶನ ಕೃತಿ ಬಿಡುಗಡೆ ಮಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವೀರಶೈವ ಲಿಂಗಾಯತ ಧರ್ಮ ಒಡೆಯುವ, ಪ್ರತ್ಯೇಕ ಧರ್ಮದ ಹೋರಾಟ ಜೋರಾಗಿತ್ತು. ಆಗ ವೀರಶೈವ-ಲಿಂಗಾಯತ ಒಂದೇ ಎಂಬುದಾಗಿ ಹೇಳಿ, ಅಭಾವೀಮ ನಿಲುವೇ ತಮ್ಮ ನಿಲುವೆಂದ ಯಡಿಯೂರಪ್ಪ ಅವರಿಂದಾಗಿ ವೀರಶೈವ-ಲಿಂಗಾಯತ ಇಬ್ಭಾಗವಾಗದೇ ಉಳಿದಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದಸರಾ ಮಹೋತ್ಸವಕ್ಕೆ 25ರಿಂದ 40 ಲಕ್ಷಕ್ಕೆ ಅನುದಾನ ನೀಡುತ್ತಿರುವ ಸರ್ಕಾರವು ರಂಭಾಪುರಿ ಶ್ರೀಗಳ ಶರನ್ನವ ರಾತ್ರಿ ದಸರಾ ಧರ್ಮ ಸಮ್ಮೇಳನಕ್ಕೂ ಅನುದಾನ ನೀಡಬೇಕು. ವೀರಶೈವ ಲಿಂಗಾಯತ ಸಮಾಜದ ಹಿತದೃಷ್ಟಿಯಿಂದ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಅಭಾವೀಮಗೆ ಸ್ವಂತ ಕಟ್ಟಡ ಹೊಂದಲು ಜಾಗ ಮಂಜೂರು ಮಾಡಬೇಕು. ವೀರಶೈವ ಲಿಂಗಾಯತ ಸೇರಿದಂತೆ ಎಲ್ಲಾ ಜಾತಿ, ಸಮುದಾಯಕ್ಕೂ ಸ್ಪಂದಿಸುವ ಯಡಿಯೂರಪ್ಪಗೆ ದೇವರು ಇನ್ನೂ ಹೆಚ್ಚು ಅಧಿಕಾರ, ಅವಕಾಶ ನೀಡಿ, ಆಶೀರ್ವದಿಸಲಿ ಎಂದು ಶಾಮನೂರು ಶಿವಶಂಕರಪ್ಪ ಹಾರೈಸಿದರು.