ರೈತನಿಂದ ಲಂಚ ಪಡೆಯುತ್ತಿದ್ದಾಗಲೇ ಅಧಿಕಾರಿ ಎಸಿಬಿ ಬಲೆಗೆ

By Kannadaprabha NewsFirst Published Feb 9, 2020, 10:24 AM IST
Highlights

ಆರ್‌ಟಿಸಿ ಒಟ್ಟುಗೂಡಿಸುವ ಕೆಲಸಕ್ಕಾಗಿ ರೈತರೊಬ್ಬರಿಂದ 12 ಸಾವಿರ ರು. ಲಂಚ ಪಡೆಯುತ್ತಿದ್ದ ವೇಳೆ ತಾಲೂಕು ಕಚೇರಿಯ ಶಿರಸ್ತೇದಾರ್‌ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಮಂಡ್ಯ(ಫೆ.09): ಆರ್‌ಟಿಸಿ ಒಟ್ಟುಗೂಡಿಸುವ ಕೆಲಸಕ್ಕಾಗಿ ರೈತರೊಬ್ಬರಿಂದ 12 ಸಾವಿರ ರು. ಲಂಚ ಪಡೆಯುತ್ತಿದ್ದ ವೇಳೆ ತಾಲೂಕು ಕಚೇರಿಯ ಶಿರಸ್ತೇದಾರ್‌ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಕೆ.ಆರ್‌.ಪೇಟೆ ಪಟ್ಟಣದ ತಾಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಕೆಲಸ ಮಾಡುವ ಶಿರಸ್ತೇದಾರ್‌ ಮಹದೇವೇಗೌಡ ಲಂಚ ಸ್ವೀಕರಿಸುವ ವೇಳೆ ಸಿಕ್ಕಿ ಬಿದ್ದವರು. ಆಲಂಬಾಡಿಕಾವಲು ಗ್ರಾಮದ ರೈತ ಎಂ.ಮೋಹನ್‌ ತಮ್ಮ ಜಮೀನಿನ ಆರ್‌ಟಿಸಿ ಒಟ್ಟುಗೂಡಿಸಿಕೊಡುವ ಹಾಗೂ ಆಕಾರ್‌ ಬಂಧಿ ತಯಾರಿ ಸಲುವಾಗಿ 2019ನೇ ಸೆ.16ರಂದು ಭೂಮಿ ಶಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕಾಗಿ 25 ಸಾವಿರ ರು.ಗಳ ಲಂಚ ನೀಡಬೇಕು ಎಂದು ಶಿರಸ್ತೇದಾರ್‌ ಮಹದೇವೇಗೌಡ ಬೇಡಿಕೆ ಇಟ್ಟಿದ್ದರು. ಅಲ್ಲದೇ 5 ತಿಂಗಳಿನಿಂದ ಕೆಲಸ ಮಾಡಿಕೊಡಲು ಸತಾಯಿಸುತ್ತಿದ್ದರು.

ಮತ್ತೊಬ್ಬನ ಜೊತೆ ಪ್ರೇಯಸಿ ಎಂಗೇಜ್ಡ್ : ಡೆತ್ ನೋಟ್ ಬರೆದಿಟ್ಟು ಪ್ರಿಯಕರ ಸೂಸೈಡ್

ಇದರಿಂದ ಬೇಸತ್ತ ರೈತ ಮೋಹನ್‌ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳಿಗೆ ದೂರು ನೀಡಿದ್ದರು. ರೈತ ಮೋಹನ್‌ 12 ಸಾವಿರ ಹಣವನ್ನು ನೀಡುವುದಾಗಿ ಮಹದೇವೇಗೌಡರಿಗೆ ಹೇಳಿದ್ದಾರೆ. ಹಣ ಪಡೆಯುವ ವೇಳೆ ಅಧಿಕಾರಿಗಳು ದಾಳಿ ಮಾಡಿ ಶಿರಸ್ತೇದಾರ್‌ನನ್ನು ಬಂಧಿಸಿದ್ದಾರೆ.

ದಾಳಿ ವೇಳೆ ಎಸಿಬಿ ಅಧಿಕಾರಿಗಳಾದ ಎಸ್‌ಪಿ ಜೆ.ರಶ್ಮಿ, ಡಿಎಸ್‌ಪಿ ಮಂಜುನಾಥ್‌, ಇನ್ಸ್‌ಪೆಕ್ಟರ್‌ ಸತೀಶ್‌, ರವಿಶಂಕರ್‌, ಸಿಬ್ಬಂದಿ ವೆಂಕಟೇಶ್‌, ಮಹಾದೇವ್‌, ಪಾಪಣ್ಣ, ಕುಮಾರ್‌ ಇದ್ದರು

click me!