Covid 19 Crisis Bengaluru: ಕೋವಿಡ್‌ ನಿಯಮ ಗಾಳಿಗೆ: ನಿತ್ಯ ₹2ಲಕ್ಷ ದಂಡ ಸಂಗ್ರಹ!

By Kannadaprabha News  |  First Published Feb 11, 2022, 9:08 AM IST

*ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರ ಪಾಲನೆ ಮಾಯ
*40 ದಿನದಲ್ಲಿ ₹.81 ಲಕ್ಷ ದಂಡ ವಸೂಲಿ
*ಜನಸಂದಣಿ ಪ್ರದೇಶಗಳಲ್ಲಿ ಮಾರ್ಷಲ್‌ಗಳ ಕಟ್ಟುನಿಟ್ಟಿನ ಕಾರಾರ‍ಯಚರಣೆ


ಬೆಂಗಳೂರು (ಫೆ. 11): ಕೊರೋನಾ ಮೂರನೇ ಅಲೆ (Covid 19 3rd Wave) ಕಂಡರೂ ರಾಜಧಾನಿ ಜನ ಮಾಸ್ಕ್‌, ಸಾಮಾಜಿಕ ಅಂತರದ ಜವಾಬ್ದಾರಿಯನ್ನು ಅರಿತಂತೆ ಕಾಣುತ್ತಿಲ್ಲ. ಕೋವಿಡ್‌ ನಿಯಮ ಪಾಲಿಸದೆ ಇವತ್ತಿಗೂ ನಿತ್ಯ ಸರಾಸರಿ ಎರಡು ಲಕ್ಷ ರು. ದಂಡ ಕಟ್ಟುತ್ತಿದ್ದಾರೆ. ಬಿಬಿಎಂಪಿ (BBMP) ವ್ಯಾಪ್ತಿಯ ಮಹದೇವಪುರ, ಬೊಮ್ಮನಹಳ್ಳಿ, ದಕ್ಷಿಣ ವಲಯ ಸೇರಿದಂತೆ ಎಂಟು ವಲಯಗಳಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿದವರಿಂದ ನಿತ್ಯ ಸರಾಸರಿ 2 ಲಕ್ಷ ರು.ನಂತೆ ಕಳೆದ 40 ದಿನಗಳಲ್ಲಿ ಬರೋಬ್ಬರಿ 81.32 ಲಕ್ಷ ರು.ಗಳನ್ನು ಬಿಬಿಎಂಪಿ ಮಾರ್ಷಲ್‌ಗಳು ವಸೂಲು ಮಾಡಿದ್ದಾರೆ.

ಮೂರನೇ ಅಲೆಯ ಆರಂಭದಲ್ಲಿ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದವರ ವಿರುದ್ಧ ದಂಡ ವಿಧಿಸುವ ಸಂಖ್ಯೆ ಹೆಚ್ಚಿಸಲು ಬಿಬಿಎಂಪಿ ಮಾರ್ಷಲ್‌ಗಳಿಗೆ ಸೂಚನೆ ನೀಡಿತ್ತು. ಇದೀಗ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ನಿತ್ಯ 2ರಿಂದ 3 ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಜೊತೆಗೆ ಬಹುತೇಕ ಸೋಂಕಿತರಲ್ಲಿ ಯಾವುದೇ ಗಂಭೀರ ಪರಿಣಾಮ ಕಂಡು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಕೋವಿಡ್‌ ನಿಯಮ ಪಾಲಿಸದವರಿಂದ ದಂಡ ವಸೂಲು ಮಾಡುವ ಸಂಖ್ಯೆ ಕಡಿಮೆಯಾಗಿದೆ.

Latest Videos

ಇದನ್ನೂ ಓದಿ: Covid Vaccine: ಸರ್ಕಾರದ ಮಾನದಂಡ ಗೊಂದಲ: ಅನೇಕ ಮಕ್ಕಳಿಗೆ ಲಸಿಕೆಯೇ ಸಿಗ್ತಿಲ್ಲ

ಹೀಗಿದ್ದರೂ ಜನಸಂದಣಿ ಪ್ರದೇಶಗಳು, ಮಾರ್ಕೆಟ್‌ಗಳು, ಸಿಗ್ನಲ್‌ಗಳು, ಮಾಲ್‌, ಥಿಯೇಟರ್‌, ಬಸ್‌ ನಿಲ್ದಾಣ, ರೈಲು ನಿಲ್ದಾಣ, ವೃತ್ತಗಳು ಸೇರಿದಂತೆ ಹಲವೆಡೆ ಮಾರ್ಷಲ್‌ಗಳು ದಂಡ ವಸೂಲಿ ಪ್ರಕ್ರಿಯೆ ನಿಲ್ಲಿಸಿಲ್ಲ. ಈಗಲೂ ಕೋವಿಡ್‌ ನಮ್ಮ ಮಧ್ಯೆಯೇ ಇದ್ದು, ಕೋವಿಡ್‌ ನಿಯಮಗಳನ್ನು ಪಾಲಿಸಲೇಬೇಕು. ಇಲ್ಲದಿದ್ದರೆ ಸೋಂಕಿಗೆ ತುತ್ತಾಗಬೇಕಾಗುತ್ತದೆ. ಕೋವಿಡ್‌ ಸಂಪೂರ್ಣವಾಗಿ ಹೋಗುವವರೆಗೂ ಕೋವಿಡ್‌ ಮಾರ್ಗಸೂಚಿ ಅನುಸರಿಸುವುದು ಒಳ್ಳೆಯದು ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

27 ತಂಡ ಕಾರ್ಯ ನಿರ್ವಹಣೆ: ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾರ್ಷಲ್‌ಗಳ ವಿಶೇಷ ತಂಡ ಇಂದಿರಾ ಕ್ಯಾಂಟೀನ್‌ ಕಾರ್ಯದಲ್ಲಿ ನಿರತವಾಗಿದೆ. ಈ ತಂಡದಲ್ಲಿ 256 ಮಾರ್ಷಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯ ಸೇರಿದಂತೆ ಇನ್ನಿತರ ಕಾರ್ಯಗಳಲ್ಲಿ 262 ವಾರ್ಡ್‌ ಮಾರ್ಷಲ್‌ಗಳು ಕೆಲಸ ಮಾಡುತ್ತಿದ್ದಾರೆ. 

ಇದನ್ನೂ ಓದಿ: Covid 3rd Wave : ಕೊರೋನಾದಿಂದ ಗುಣಮುಖರಾದ್ರೂ ಕೆಮ್ಮು, ಗಂಟಲು ಕಿರಿಕಿರಿ ತಪ್ಪಿಲ್ಲ..!

66 ಮಾರ್ಷಲ್‌ಗಳನ್ನು ಕೋವಿಡ್‌ ನಿಯಮ ಉಲ್ಲಂಘಿಸುವವರ ಮೇಲೆ ನಿಗಾ ವಹಿಸಿ ದಂಡ ವಸೂಲಿಗೆಂದೇ ನೇಮಕ ಮಾಡಲಾಗಿದೆ. ವಾರ್ಡ್‌ ಮತ್ತು ಇಂದಿರಾ ಕ್ಯಾಂಟೀನ್‌ ಕರ್ತವ್ಯದಲ್ಲಿರುವ ಮಾರ್ಷಲ್‌ಗಳು ಇದರೊಂದಿಗೆ ದಂಡ ವಸೂಲಿ ಕೆಲಸವನ್ನೂ ಸಹ ನಿರ್ವಹಿಸಲಿದ್ದಾರೆ. ಒಂದು ತಂಡದಲ್ಲಿ ನಾಲ್ವರಂತೆ ಒಟ್ಟು 27 ತಂಡಗಳು ಕೋವಿಡ್‌ ನಿಯಮ ಉಲ್ಲಂಘಿಸುವವರ ಮೇಲೆ ನಿಗಾ ವಹಿಸಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

₹81 ಲಕ್ಷ ದಂಡ ವಸೂಲಿ: ಪಾಲಿಕೆಯ ಎಂಟು ವಲಯಗಳಲ್ಲಿ 2022 ಜ.1ರಿಂದ 20ರ ವರೆಗೆ ಮಾಸ್ಕ್‌ ಧರಿಸದೆ ನಿಯಮ ಉಲ್ಲಂಘಿಸಿದ 18,743 ಪ್ರಕರಣಗಳಲ್ಲಿ 46,85,750 ರು.ಗಳನ್ನು ದಂಡವಾಗಿ ವಸೂಲು ಮಾಡಲಾಗಿತ್ತು. ಜ.21ರಿಂದ ಫೆ.9ರ ವರೆಗೆ ಒಟ್ಟು 13,808 ಪ್ರಕರಣಗಳಲ್ಲಿ 34,52,000 ರು. ದಂಡ ವಸೂಲಿ ಮಾಡಲಾಗಿದೆ. 

ಈ ಪೈಕಿ ಸಾಮಾಜಿಕ ಅಂತರ ಪಾಲಿಸದ 437 ಕೇಸುಗಳಲ್ಲಿ 1,09,250 ರು.ದಂಡ ವಸೂಲಾಗಿದೆ. ಮಾಸ್ಕ್‌ ಧರಿಸದ 13,371 ಜನರಿಂದ 33,42,750 ರು. ದಂಡ ವಸೂಲಾಗಿದೆ. ಹೀಗೆ ಒಟ್ಟು 40 ದಿನಗಳಲ್ಲಿ 81,37,750 ರು. ದಂಡ ವಸೂಲಿ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಮಾರ್ಷಲ್‌ ರಾಜಬೀರ್‌ಸಿಂಗ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ವಲಯ ಕೇಸ್‌ ಸಂಖ್ಯೆ ದಂಡದ ಮೊತ್ತ

ಪೂರ್ವ 2091 .522750

ಪಶ್ಚಿಮ 5375 .1343759

ದಕ್ಷಿಣ 2823 .705750

ಮಹದೇವಪುರ 781.195250

ಆರ್‌ಆರ್‌ನಗರ 1297 .324250

ಯಲಹಂಕ 564 .141000

ದಾಸರಹಳ್ಳಿ 304 .76000

ಬೊಮ್ಮನಹಳ್ಳಿ 573 .143250

ಒಟ್ಟು 13808 .3452000

click me!