
ಮುಟ್ಟು ಅಥವಾ ಋತುಸ್ರಾವ ಎನ್ನುವುದು ಓರ್ವ ಹೆಣ್ಣು ತಾಯಿಯಾಗಲು ಅರ್ಹಳಾಗಿದ್ದಾಳೆ ಎಂದು ತೋರಿಸುವ ಪ್ರಕೃತಿಯ ಒಂದು ಕ್ರಿಯೆ. ಆದರೆ ಈ ಮುಟ್ಟಿನ ಬಗ್ಗೆ ಇಂದಿಗೂ ಬಹಿರಂಗವಾಗಿ ಹೇಳಿಕೊಳ್ಳಲು ನಾಚಿಕೊಳ್ಳುವ ದೊಡ್ಡ ವರ್ಗವೂ ಇದೆ. ಆದರೆ ಗರ್ಭಾಶಯದ ಸ್ನಾಯುಗಳು ಸಂಕುಚಿತಗೊಂಡು, ಅಂತರ್ನಿರ್ಮಿತ ಒಳಪದರಗಳನ್ನು ಹೊರಹಾಕುವ ಕಾರ್ಯವನ್ನು ದೇಹ ಮಾಡಿದಾಗ ಹಲವಾರು ಹೆಣ್ಣುಮಕ್ಕಳು ಅನುಭವಿಸುವ ಆ ವೇದನೆ, ಹೊಟ್ಟೆ ನೋವು ದೇವರಿಗೇ ಪ್ರೀತಿ ಎನ್ನಿಸುವುದು ಉಂಟು. ಆ ಅಸಹನೀಯ ನೋವು ತಾಳದೇ ಒದ್ದಾಡುವ, ಪ್ರತಿ ತಿಂಗಳೂ ಹೊಟ್ಟೆ ನೋವಿಗೆ ಮಾತ್ರೆಗಳನ್ನು ಸೇವಿಸಿ ಹಲವಾರು ಸಮಸ್ಯೆಗಳನ್ನು ತಂದೊಡ್ಡಿಕೊಳ್ಳುತ್ತಿರುವ ದೊಡ್ಡ ವರ್ಗವೇ ಇದೆ. ಅದರಲ್ಲಿಯೂ ಒಂದು ಹಂತ ದಾಟಿದಾಗ ಮುಟ್ಟಿನ ಸಮಯದಲ್ಲಿ ಆಗುವ ಮೈಗ್ರೇನ್, ತಡೆದುಕೊಳ್ಳಲು ಅಸಾಧ್ಯ ಎನ್ನಿಸುವ ತಲೆನೋವು ಕೂಡ ಶಬ್ದಕ್ಕೆ ನಿಲುಕದ ಹಿಂಸೆ ಅದು. ಇದೆಲ್ಲಾ ಕಾರಣಗಳಿಂದ ರಾಜ್ಯ ಸರ್ಕಾರ, ಹೆಣ್ಣುಮಕ್ಕಳಿಗೆ ಮಾಸಿಕ ಒಂದು ದಿನವನ್ನು ಮುಟ್ಟಿದ ದಿನವನ್ನಾಗಿ ಇಂದು ಘೋಷಿಸಿದ್ದು, ಆ ದಿನ ರಜೆ ನೀಡುವಂತೆ ಕಚೇರಿ, ಇಲಾಖೆಗಳಿಗೆ ಆದೇಶಿಸಿದೆ.
ಉದ್ಯೋಗಿಗಳು ಮತ್ತು ಇತರ ಖಾಸಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೂ ಪ್ರತಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ರಜೆ ನೀಡುವ ಮಹತ್ವದ ನಿರ್ಧಾರಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಎಲ್ಲರೂ ಕಡ್ಡಾಯವಾಗಿ ರಜೆ ಕೊಡಬೇಕಿದೆ. ಇದನ್ನು ಕೇಳಿ, ಈ ಅಸಹನೀಯ ನೋವನ್ನು ಅನುಭವಿಸುತ್ತಿರುವ ಮಹಿಳೆಯರು ಖುಷಿ ಪಟ್ಟುಕೊಂಡಿದ್ದಾರೆ. ಆ ದಿನದ ನೋವನ್ನು ಅನುಭವಿಸಿ ಕಚೇರಿಯಲ್ಲಿ ಕೆಲಸ ಮಾಡುವ ಸ್ಥಿತಿಯಲ್ಲಿದ್ದ ಹಲವು ಮಹಿಳೆಯರಿಗೆ ಇದು ವರದಾನವಾಗಿ ಪರಿಣಮಿಸಿದೆ.
ಆದರೆ, ಇದರ ಬಗ್ಗೆ ಇದಾಗಲೇ ವಿರೋಧಗಳೂ ವ್ಯಕ್ತವಾಗುತ್ತಿವೆ. ಎಲ್ಲಾ ಹೆಣ್ಣುಮಕ್ಕಳು ಅಥವಾ ಮಹಿಳೆಯರಿಗೆ ಮಾಸಿಕ ಋತುಸ್ರಾವದ ಸಮಯದಲ್ಲಿ ನೋವು ಆಗಲೇಬೇಕೆಂದೇನೂ ಇಲ್ಲ. ಎಷ್ಟೋ ಮಂದಿಗೆ ಏನೂ ಸಮಸ್ಯೆ ಆಗುವುದೇ ಇಲ್ಲ. ಆದರೆ ಅಂಥವರು ಕೂಡ ರಜೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನುವುದು ಕೆಲವರ ತಕರಾರು. ಆದರೆ ಇದಕ್ಕಿಂತಲೂ ಮುಖ್ಯವಾದ ಇನ್ನೊಂದು ಕಾರಣವಿದೆ. ಅದೇನೆಂದರೆ, ಇದಾಗಲೇ ಹಲವಾರು ಕಂಪೆನಿಗಳು ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳದೇ ಹಿಂದೇಟು ಹಾಕುವುದು ಇದೆ. ಅವರಿಗೆ ಮದುವೆಯ ವೇಳೆ ಅಷ್ಟೇ ಅಲ್ಲದೇ ಗರ್ಭಧಾರಣೆಯ ಸಂದರ್ಭದಲ್ಲಿ ಐದಾರು ತಿಂಗಳು ವೇತನ ಸಹಿತ ರಜೆ ಕೊಡಬೇಕು. ಹೀಗೆ ಇರುವಾಗ ಇದೊಂದು ಬೇರೆ ಎಕ್ಸ್ಟ್ರಾ ರಜೆ. ಇವೆಲ್ಲಾ ಉಸಾಬರಿಯೇ ಬೇಡ ಎನ್ನುವ ಸಾಧ್ಯತೆಯೂ ಇದೆ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಒಂದು ವೇಳೆ, ಈ ಸಮಸ್ಯೆಲ್ಲಿ ಹೆಣ್ಣುಮಕ್ಕಳಿಗೆ ಸಮಸ್ಯೆಯಾದರೆ ಅಥವಾ ಸಹಿಸಿಕೊಳ್ಳಲಾರದಷ್ಟು ನೋವಾದರೆ, ಅವರಿಗೆ ಸಿಎಲ್, ಸಿಕ್ ಲೀವ್ ಎಲ್ಲವೂ ಇದೆಯಲ್ಲವೆ, ಮತ್ಯಾಕೆ ರಜೆ ಎನ್ನುವ ಮಾತು ಕೂಡ ಕೇಳಿಬರುತ್ತಿದೆ. ಆದ್ದರಿಂದ ತಮ್ಮ ನೋವಿಗೆ ಸರ್ಕಾರ ಸ್ಪಂದಿಸಿದೆ ಎಂದು ಮಹಿಳೆಯರು ಖುಷಿಪಟ್ಟುಕೊಳ್ಳುವ ಬೆನ್ನಲ್ಲೇ ಇಂಥ ವಿವಾದಗಳು ಕೂಡ ಹುಟ್ಟಿಕೊಂಡಿರುವುದು ನೋವಿನ ಸಂಗತಿಯೇ ಆಗಿದೆ. ಹಾಗೆಂದು, ಮುಟ್ಟಿನ ರಜೆ ಎನ್ನುವುದು ಕರ್ನಾಟಕಕ್ಕೆ ಹೊಸತಾಗಿರಬಹುದು. ಆದರೆ ಇದನ್ನು ಮೊದಲು ಶುರು ಮಾಡಿದ್ದು ಲಾಲೂ ಪ್ರಸಾದ್ ಯಾದವ್ ಅವರು. 1992ರಲ್ಲಿ ಬಿಹಾರ ಮುಖ್ಯಮಂತ್ರಿಯಾಗಿದ್ದ ಅವರು ದೇಶದಲ್ಲೇ ಮೊದಲಿಗೆ ಮುಟ್ಟಿನ ರಜೆ ಘೋಷಿಸಿದ್ದರು. ಆ ಬಳಿಕ ಅದೇ ಮಾದರಿಯನ್ನು ಕೇರಳದಲ್ಲಿಯೂ ಜಾರಿ ಮಾಡಲಾಗಿದೆ. ಇದೀಗ ಕರ್ನಾಟದಲ್ಲಿಯೂ ಜಾರಿಯಾಗಿದ್ದು, ಹೆಣ್ಣುಮಕ್ಕಳು ಇದನ್ನು ತುಂಬು ಮನಸ್ಸಿನಿಂದ ಸ್ವಾಗತಿಸಿದ್ದಾರೆ. ಆದರೆ, ಇದನ್ನು ಸಂಸ್ಥೆಗಳು, ಕಂಪೆನಿಗಳು ಹೇಗೆ ಸ್ವೀಕರಿಸುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಅದೇ ರೀತಿ, ಯಾವುದೇ ಸಮಸ್ಯೆಯಾಗದ ಹೆಣ್ಣುಮಕ್ಕಳು ಇಂಥ ದಿನಗಳಲ್ಲಿ ರಜೆ ಪಡೆದುಕೊಳ್ಳದೇ, ನಿಜವಾಗಿಯೂ ನೋವು ಅನುಭವಿಸುವವರಿಗೆ ರಜೆ ತೆಗೆದುಕೊಳ್ಳಲು ಅನುವು ಮಾಡಿಕೊಡುವ ದೊಡ್ಡ ಮನಸ್ಸು ಕೂಡ ಮಾಡಬೇಕಿದೆ.