
ಚಿತ್ರದುರ್ಗ: ಚಿತ್ರದುರ್ಗದ ಪ್ರಸಿದ್ಧ ಮುರುಘಾಶ್ರೀ ವಿರುದ್ಧ ದಾಖಲಾಗಿರುವ ಪಾಕ್ಸೋ (POCSO) ಪ್ರಕರಣದಲ್ಲಿ ವಿಚಾರಣೆ ತೀವ್ರ ಹಂತಕ್ಕೆ ತಲುಪಿದೆ. ಗುರುವಾರ ನಡೆದ ವಿಚಾರಣೆಯಲ್ಲಿ ಸರ್ಕಾರಿ ವಕೀಲ ಜಗದೀಶ್ ಅವರು ಸಂತ್ರಸ್ತೆಯರ ಪರವಾಗಿ ವಾದ ಮಂಡನೆ ಪೂರ್ಣಗೊಳಿಸಿದರು. ಇದಾದ ನಂತರ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ಮುಂದೂಡಲಾಗಿದೆ. ಈ ದಿನ ಮುರುಘಾಶ್ರೀ ಪರ ವಕೀಲರಿಗೆ ಪ್ರತಿವಾದ ಮಾಡಲು ನ್ಯಾಯಾಲಯ ಅವಕಾಶ ನೀಡಲಿದೆ.
ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ ಸರ್ಕಾರಿ ವಕೀಲ ಜಗದೀಶ್ ಅವರು ಸಂತ್ರಸ್ತೆಯರ ಪರವಾಗಿ ವಿಶ್ದ ವಾದ ಮಂಡಿಸಿದರು. ಅವರು ತಮ್ಮ ರಿಟನ್ ಆರ್ಗ್ಯುಮೆಂಟ್ ಕಾಪಿಯನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಿದರು. ಜೊತೆಗೆ, ಸಿಆರ್‌ಪಿಸಿ 310ನೇ ವಿಧಿಯಡಿ (CrPC 310) ಮತ್ತೊಂದು ವಿಶೇಷ ಅರ್ಜಿಯನ್ನು ಕೂಡ ಸಲ್ಲಿಸಿದರು. ಈ ಅರ್ಜಿಯ ಮೂಲಕ ಅವರು ಮುರುಘಾಮಠಕ್ಕೆ ಖುದ್ದಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವಂತೆ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದ್ದಾರೆ. ಸಂತ್ರಸ್ತೆಯರನ್ನು ಹಿಂಬಾಗಿಲು ಮೂಲಕ ಮುರುಘಾಶ್ರೀ ಅವರ ಬಳಿ ಕರೆದುಕೊಂಡು ಹೋಗಲಾಗುತ್ತಿತ್ತು ಎಂಬ ವಾದವನ್ನು ಅವರು ಮಂಡಿಸಿದರು.
ಇದಕ್ಕೆ ಪ್ರತಿಯಾಗಿ, ಮುರುಘಾಶ್ರೀ ಪರ ವಕೀಲರು ಮಠದಲ್ಲಿ ಯಾವುದೇ ಹಿಂಬಾಗಿಲು ಇರುವುದೇ ಇಲ್ಲ ಎಂದು ಹೇಳಿ ಸರ್ಕಾರಿ ವಕೀಲರ ವಾದವನ್ನು ಪ್ರಶ್ನಿಸಿದರು. ವಿಚಾರಣೆ ವೇಳೆ ಈ ವಿಚಾರದಲ್ಲಿ ಉಭಯ ಪಕ್ಷದ ನಡುವೆ ವಾದ-ಪ್ರತಿವಾದ ನಡೆದಿದ್ದು, ಈ ಹಿನ್ನೆಲೆಯಲ್ಲಿ ಜಡ್ಜ್ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಸರ್ಕಾರಿ ವಕೀಲರು ಬಲವಾಗಿ ಒತ್ತಾಯಿಸಿದರು.
ನ್ಯಾ. ಗಂಗಾಧರ್ ಚನ್ನಬಸಪ್ಪ ಹಡಪದ್ ಅವರ ನ್ಯಾಯಾಸನದಲ್ಲಿ ನಡೆದ ವಿಚಾರಣೆಯಲ್ಲಿ, ಸರ್ಕಾರಿ ವಕೀಲರ ವಾದ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ಮುಂದೂಡಲಾಗಿದೆ. ಈ ದಿನ ಮುರುಘಾಶ್ರೀ ಪರ ವಕೀಲರಿಗೆ ಆರ್ಗ್ಯುಮೆಂಟ್ ಮಾಡಲು ಅವಕಾಶ ನೀಡಲಾಗುತ್ತದೆ.