ವರ್ಷದೊಳಗೆ ಬೆಂಗ್ಳೂರಲ್ಲಿ 75 ಕಿ.ಮೀ. ಮೆಟ್ರೋ ಮಾರ್ಗ: ರಾಜ್ಯಪಾಲ

Kannadaprabha News   | Asianet News
Published : Jan 29, 2021, 08:01 AM ISTUpdated : Jan 29, 2021, 08:02 AM IST
ವರ್ಷದೊಳಗೆ ಬೆಂಗ್ಳೂರಲ್ಲಿ 75 ಕಿ.ಮೀ. ಮೆಟ್ರೋ ಮಾರ್ಗ: ರಾಜ್ಯಪಾಲ

ಸಾರಾಂಶ

ಸಂಚಾರ ದಟ್ಟಣೆ ತಗ್ಗಿಸಲು ಮೆಟ್ರೋಗೆ ಆದ್ಯತೆ| ಒಂದು ದೇಶ ಒಂದು ಕಾರ್ಡ್‌ ಜಾರಿ| ಬೆಂಗಳೂರಿನ ಜನರ ಜೀವನ ಮಟ್ಟ ಸುಧಾರಣೆಗೆ ಬೆಂಗಳೂರು ಮಿಷನ್‌-2022| ಬೆಂಗಳೂರು ಮಹಾನಗರ ಸಾರಿಗೆ ನಿಗಮಕ್ಕೆ 6 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ| 

ಬೆಂಗಳೂರು(ಜ.29): ರಾಜಧಾನಿ ಬೆಂಗಳೂರಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು 2022ರೊಳಗೆ 75 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ರಾಜ್ಯಪಾಲ ವಿ.ಆರ್‌.ವಾಲಾ ಹೇಳಿದ್ದಾರೆ.

ಗುರುವಾರ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಮೆಟ್ರೋ ರೈಲು ನಿಗಮದಿಂದ ಪ್ರಸ್ತುತ ಕಾಮಗಾರಿಗಳನ್ನು ಆದ್ಯತೆಯೊಂದಿಗೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಹಂತ 2 ಮತ್ತು ಹಂತ 2ಎ ಕಾಮಗಾರಿಗಳು ಪ್ರಗತಿಯಲ್ಲಿವೆ. 2022ರೊಳಗೆ 75 ಕಿ.ಮೀ. ಮೆಟ್ರೋ ಮಾರ್ಗವನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ. ಸ್ವಯಂ ಚಾಲಿತ ದರ ಸಂಗ್ರಹಣೆಗಾಗಿ ‘ಒಂದು ದೇಶ ಒಂದು ಕಾರ್ಡ್‌’ ಅನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಅಡಿಯಲ್ಲಿ ಕಾರ್ಯಗತಗೊಳಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ರಾಜ್ಯಪಾಲರ ಟೀ ಪಾರ್ಟಿ...ಬಿಎಸ್‌ವೈ-ಖರ್ಗೆ ಮುಖಾಮುಖಿ

ನಗರದ ಸಂಚಾರ ದಟ್ಟಣೆಯನ್ನು ನಿವಾರಿಸಲು 15,767 ಕೋಟಿ ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲ್ವೆ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದಿಸಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮ 6 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಸ್ವೀಕರಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜ ಕಾಲುವೆಗಳಿಗೆ ಸಂಬಂಧಿಸಿದ ನವ ನಗರೋತ್ಥಾನ ಕಾರ್ಯಕ್ರಮದ ಅಡಿಯಲ್ಲಿ 1,060 ಕೋಟಿಗೆ ಅನುಮೋದನೆ ನೀಡಲಾಗಿದೆ. ಹೊಸದಾಗಿ ಸೇರಿದ 110 ಗ್ರಾಮಗಳಿಗೆ ಒಳಚರಂಡಿ ಸೌಲಭ್ಯಗಳನ್ನು ಕಲ್ಪಿಸಲು ಒಂದು ಸಾವಿರ ಕೋಟಿ ರುಪಾಯಿ ನೀಡಲಾಗಿದೆ. ನಗರೋತ್ಥಾನ ಮೂರನೇ ಹಂತದಲ್ಲಿ 1,598 ಕಾಮಗಾರಿಗಳನ್ನು 263 ನಗರ ಸ್ಥಳೀಯ ಸಂಸ್ಥೆಯಲ್ಲಿ ಪೂರ್ಣಗೊಳಿಸಲಾಗಿದೆ ಎಂದು ವಿವರಿಸಿದರು.

ಬಿಬಿಎಂಪಿ ಅಧಿನಿಯಮವನ್ನು ಬೆಂಗಳೂರು ನಗರದ ಉತ್ತಮ ಆಡಳಿತಕ್ಕಾಗಿ ಪ್ರತ್ಯೇಕವಾಗಿ ರಚಿಸಿದೆ. ಬೆಂಗಳೂರು ಜನರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಬೆಂಗಳೂರು ಮಿಷನ್‌-2022 ಪ್ರಾರಂಭಿಸಲಾಗಿದೆ. ಬೆಂಗಳೂರು ನಗರದಲ್ಲಿ 8015 ಕೋಟಿ ವೆಚ್ಚದ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಿದೆ. 256 ಎಕರೆ ಪ್ರದೇಶದಲ್ಲಿ 14,909 ವಸತಿ ಘಟಕಗಳನ್ನು ನಿರ್ಮಿಸುವ ಸಲುವಾಗಿ 35 ವಸತಿ ಯೋಜನೆಗಳನ್ನು ಕೈಗೆತ್ತಿಗೊಂಡಿದೆ. ರೇರಾ ನೋಂದಣಿಯ ಅನುಸಾರವಾಗಿ ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ನಿರ್ಮಿಸಲಾಗಿದೆ ಎಂದರು.
 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ