ಕೊಳಚೆ ಪ್ರದೇಶದ 3.37 ಲಕ್ಷ ಕುಟುಂಬಕ್ಕೆ ಹಕ್ಕುಪತ್ರ: ಸಚಿವ ವಿ. ಸೋಮಣ್ಣ

By Kannadaprabha NewsFirst Published Oct 3, 2021, 11:47 AM IST
Highlights

*   ಸಮಾಜದಲ್ಲಿ ಬಡವರಿಗೆ ತಮ್ಮ ಇಚ್ಛಾನುಸಾರ ಬದುಕುವ ಅವಕಾಶ ಇದೆ
*   ಸಿದ್ದರಾಮಯ್ಯ ಹಿಡಿತದಲ್ಲಿ ಮಾತನಾಡಲಿ
*   ಮುಂದಿನ 3-4 ತಿಂಗಳಲ್ಲಿ ಎಲ್ಲ ಮನೆಗಳಿಗೆ ಹಕ್ಕುಪತ್ರ ಸಿಗಲಿದೆ 

ಹುಬ್ಬಳ್ಳಿ(ಅ.03): ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ರಾಜ್ಯದ 3.37 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದಿರುವ ವಸತಿ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ(V Somanna) ಇದು ಕ್ರಾಂತಿಕಾರಿ ತೀರ್ಮಾನವಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ(Karnataka) ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹುಬ್ಬಳ್ಳಿ(Hubballi) ಚಾಮುಂಡೇಶ್ವರಿ ನಗರದಲ್ಲಿ ಆಯೋಜಿಸಲಾದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ 8626 ಎಕರೆ ಸರ್ಕಾರಿ ಜಾಗದ ಕೊಳಚೆ ಪ್ರದೇಶದಲ್ಲಿ ಬಹುದಿನಗಳಿಂದ 3.37 ಲಕ್ಷ ಕುಟುಂಬಗಳು ವಾಸವಾಗಿವೆ. ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ಈ ಕುಟುಂಬಗಳಿಗೆ ಅಗತ್ಯ ಸೌಕರ್ಯ ಒದಗಿಸಿ ಶಾಶ್ವತವಾದ ಹಕ್ಕುಪತ್ರ ನೀಡುವ ಐತಿಹಾಸಿಕ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಮುಂದಿನ 3-4 ತಿಂಗಳಲ್ಲಿ ಎಲ್ಲ ಮನೆಗಳಿಗೆ ಹಕ್ಕುಪತ್ರ ಸಿಗಲಿದೆ ಎಂದರು.

ಈ ಹಿಂದೆ ನಮ್ಮ ಸರ್ಕಾರವಿದ್ದಾಗ 6 ಲಕ್ಷ ಮನೆಗಳ ನಿರ್ಮಾಣಕ್ಕೆ 3315 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ 4 ಸಾವಿರ ಕೋಟಿಯಲ್ಲಿ 2.57 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ನಗರ ಪ್ರದೇಶದಲ್ಲಿ 3.40 ಲಕ್ಷ ಮನೆ ನಿರ್ಮಾಣದ ಗುರಿ ಹೊಂದಿದ್ದು, ಮುಂದಿನ ತಿಂಗಳ ಒಳಗಾಗಿ 35 ಸಾವಿರ ಮನೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಕೊಳಚೆ ಪ್ರದೇಶದ ನಿವಾಸಿಗಳಿಗೆ ಸರ್ಕಾರದ ಸಿಹಿ ಸುದ್ದಿ: ಸಚಿವ ಸೋಮಣ್ಣ

ವಸತಿ ಹಕ್ಕುಪತ್ರ ವಿತರಣೆಗೆ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದವರಿಗೆ ನಿಗದಿ ಪಡಿಸಿದ್ದ . 2 ಸಾವಿರ ಶುಲ್ಕವನ್ನು . 1 ಸಾವಿರಕ್ಕೆ ಹಾಗೂ ಇತರರಿಗೆ ನಿಗದಿ ಪಡಿಸಿದ್ದ . 4 ಸಾವಿರ ಶುಲ್ಕವನ್ನು . 2 ಸಾವಿರಕ್ಕೆ ಇಳಿಸಲಾಗುವುದು. ಹಕ್ಕುಪತ್ರ ಪಡೆದ ಎಲ್ಲರೂ ನಿವೇಶನವನ್ನು ಮುದ್ರಾಂಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹಕ್ಕುಪತ್ರಗಳನ್ನು ಮಹಿಳೆಯರ ಹೆಸರಿಗೆ ನೋಂದಣಿ ಮಾಡಿಕೊಡಲಾಗುವುದು ಎಂದರು.

ಸಿದ್ದರಾಮಯ್ಯ ಹಿಡಿತದಲ್ಲಿ ಮಾತನಾಡಲಿ

ಮುಂಬರುವ ಉಪಚುನಾವಣೆಯನ್ನು ನಾವು ಪ್ರತಿಷ್ಠೆಯಾಗಿ ತೆಗೆದುಕೊಂಡು ಎದುರಿಸಲಿದ್ದೇವೆ ಎಂದಿರುವ ಸಚಿವ ಸೋಮಣ್ಣ, ಬಿಜೆಪಿಯನ್ನು ತಾಲಿಬಾನ್‌ಗೆ ಹೋಲಿಸಿದ ಸಿದ್ದರಾಮಯ್ಯ ಹಿಡಿತದಲ್ಲಿ ಮಾತನಾಡಬೇಕು. ಈಗಾಗಲೆ ಪಕ್ಷದ ಮುಖಂಡರು ಅವರಿಗೆ ತಕ್ಕ ಉತ್ತರ ನೀಡಿದ್ದಾರೆ. ಅವರು ಅಹಿಂದ ಹೋರಾಟ ಶುರು ಮಾಡುವ ಬಗ್ಗೆ ಚರ್ಚೆ ನಡೆದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ(Narendra Modi) ಬಡವರಿಗೆ ಸೂರು, ಮೂಲಸೌಕರ್ಯ ಕಲ್ಪಿಸುವ ಬಗ್ಗೆ ಕ್ರಮಕ್ಕೆ ಸೂಚಿಸಿದ್ದಾರೆ. ಅದರಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂದರು.

ಈಗಾಗಲೇ ಮತಾಂತರ ಕಾನೂನು ಕುರಿತಂತೆ ಗೃಹ ಸಚಿವರು ಸ್ಪಷ್ಟವಾಗಿ ಉತ್ತರಿಸಿದ್ದಾರೆ. ಸಮಾಜದಲ್ಲಿ ಬಡವರಿಗೆ ತಮ್ಮ ಇಚ್ಛಾನುಸಾರ ಬದುಕುವ ಅವಕಾಶ ಇದೆ. ಆದರೆ ಈ ನಡುವೆ ಅವರ ತಲೆ ಕೆಡೆಸಿ ಬೇರೆ ರೂಪದಲ್ಲಿ ನೆಮ್ಮದಿ ಹಾಳು ಮಾಡುವುದು ಸರಿಯಲ್ಲ. ಈ ಬಗ್ಗೆ ಸರ್ಕಾರ ದಿಟ್ಟ ತೀರ್ಮಾನ ಕೈಗೊಳ್ಳಲಿದೆ ಎಂದರು.
 

click me!