ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಸಹಾಯಕ ಶಿವಣ್ಣ, ಹಕ್ಕು ಪತ್ರ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಶಿವಣ್ಣ, ತಾಲೂಕು ಕಚೇರಿಯಲ್ಲಿ ಹಕ್ಕು ಪತ್ರ ಕೊಡಿಸಲು 10 ಸಾವಿರ ಲಂಚ, ಮುಂಗಡವಾಗಿ 3 ಸಾವಿರ ಲಂಚ ಪಡೆದಿದ್ದ ಶಿವಣ್ಣ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಫೆ.23): ನಿವೇಶನ ಹಕ್ಕುಪತ್ರವನ್ನು ನೀಡಲು ಗ್ರಾಮ ಸಹಾಯಕನೋರ್ವ ಮಹಿಳೆಯಿಂದ ಲಂಚ ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಪೋಲೀಸರು ದಾಳಿ ನಡೆಸಿ ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ನಡೆದಿದೆ.
ಗ್ರಾಮ ಸಹಾಯಕ ಶಿವಣ್ಣ ಎಂಬ ವ್ಯಕ್ತಿಯೇ ಬಂಧಿತನಾಗಿದ್ದು, ಪಟ್ಟಣಕ್ಕೆ ಸಮೀಪದ ಗ್ರಾಮವಾದ ಶ್ರೀರಾಂಪುರದ ಸರೋಜಮ್ಮ ಎಂಬುವವರು ಈ ಬಗ್ಗೆ ದೂರು ನೀಡಿದ್ದು, ಅವರ ಪತಿ ಗೋವಿಂದಪ್ಪ ಎಂಬುವವರ ಹೆಸರಿನಲ್ಲಿ ಇದ್ದ ನಿವೇಶನದ ಹಕ್ಕುಪತ್ರವನ್ನು 94(ಸಿ) ಯೋಜನೆಯಡಿ 2022ರ ಆಗಸ್ಟ್ 3ರಂದು ಪಡೆದಿದ್ದರು. ಅದರ ಚಕ್ಕುಬಂಧಿ ಸರಿ ಇರದ ಕಾರಣ 2022ರ ಡಿಸೆಂಬರ್ 8ರಂದು ಅರ್ಜಿ ಸಲ್ಲಿಸಿದ್ದೇನೆಂದು ದೂರಿನಲ್ಲಿ ತಿಳಿಸಿದ್ದಾರೆ.
KARNATAKA ELECTION 2023: ಚಿಕ್ಕಮಗಳೂರಿನಲ್ಲಿ ಒಂದೇ ದಿನ ಬಿಜೆಪಿ- ಕಾಂಗ್ರೆಸ್ ಬೈಕ್ RALLY!
ಈ ಬಗ್ಗೆ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರ ಕಚೇರಿಯಲ್ಲಿದ್ದ ಗ್ರಾಮ ಸಹಾಯಕ ಶಿವಣ್ಣ ಅವರನ್ನು ತಾವು 2023ರ ಫೆಬ್ರವರಿ 14ರಂದು ಭೇಟಿಯಾದಾಗ ಚಕ್ಕುಬಂಧಿ ಸರಿಪಡಿಸಲು ಸರ್ವೇಯರ್, ಶಿರಸ್ತೇದಾರ್, ತಹಸೀಲ್ದಾರ್ ಬಳಿ ಓಡಾಡಿ ಕೆಲಸ ಮಾಡಬೇಕು 10 ಸಾವಿರ ಲಂಚ ಕೊಡಿ ಎಂದು ಬೇಡಿಕೆ ಇಟ್ಟಿದ್ದ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
ಶಿವಣ್ಣ ಅವರಿಗೆ ಈ ಸಂಬಂಧ 3 ಸಾವಿರ ಹಣವನ್ನು ಸರೋಜಮ್ಮ ನೀಡಿದ್ದು, ಬಾಕಿ ಉಳಿದ 7 ಸಾವಿರವನ್ನು ಮುಂದೆ ನೀಡುತ್ತೇನೆಂದು ಹೇಳಿದ್ದು ಇಂದು ಆ ಹಣವನ್ನು ನೀಡುವಾಗ ಚಿಕ್ಕಮಗಳೂರು ಲೋಕಾಯುಕ್ತ ಪೋಲೀಸರು ದಾಳಿ ನಡೆಸಿ ಶಿವಣ್ಣ ಅವರನ್ನು ಬಂಧಿಸಿದ್ದಾರೆ.
ದಾಳಿಯಲ್ಲಿ ಡಿವೈಎಸ್ಪಿ ತಿರುಮಲೇಶ್, ಪೋಲಿಸ್ ಇನ್ಸ್ಪೆಕ್ಟರ್ಗಳಾದ ಮಲ್ಲಿಕಾರ್ಜುನ ಹಾಗೂ ಅನಿಲ್ ರಾಥೋಡ್ ಮತ್ತು ಸಿಬ್ಬಂದಿ ಇದ್ದರು. ಬಂಧಿತ ಶಿವಣ್ಣ ಅವರನ್ನು ರಾತ್ರಿ ಚಿಕ್ಕಮಗಳೂರು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.