ಮಡಿಕೇರಿ ಗದ್ದುಗೆ ಪುರಾತತ್ವ ಜಾಗ ಒತ್ತುವರಿ ತೆರವಿಗೆ ಸರ್ಕಾರ ಸೂಚನೆ: ಆತಂಕದಲ್ಲಿ ಹಿಂದೂ-ಮುಸ್ಲಿಂ ಕುಟುಂಬಗಳು

By Girish Goudar  |  First Published Nov 21, 2024, 8:29 PM IST

ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ ಎನ್ನಲಾಗುವ 24 ಮುಸ್ಲಿಂ ಕುಟುಂಬಗಳಿಗೆ ಮತ್ತು 2 ಹಿಂದೂ ಕುಟುಂಬಗಳು ಸೇರಿದಂತೆ ಐಟಿಡಿಪಿ ಇಲಾಖೆ ಹಾಗೂ ಒಂದು ಶಾಲೆಗೆ ನೊಟೀಸ್ ನೀಡಲಾಗಿದೆ. 
 


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು(ನ.21): ರಾಜ್ಯದಲ್ಲಿ ವಕ್ಫ್ ಆಸ್ತಿ ಒತ್ತುವರಿಯಾಗಿದ್ದು ಅದನ್ನು ತೆರವು ಮಾಡಬೇಕು ಎಂದು ಎಲ್ಲಡೆ ರೈತರಿಗೆ ನೊಟೀಸ್ ಜಾರಿಯಾಗಿದ್ದು ಗೊತ್ತೇ ಇದೆ. ಆದರೆ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೊಡಗನ್ನು ಆಳ್ವಿಕೆ ಮಾಡಿದ್ದ ಹಾಲೇರಿ ರಾಜವಂಶಸ್ಥರ ಸಮಾಧಿಗಳಿರುವ ಅಂದರೆ ಗದ್ದುಗೆಗಳ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದು, ಅವುಗಳನ್ನು ಕೂಡಲೇ ತೆರವು ಮಾಡಬೇಕು. ಬಳಿಕ ಗದ್ದುಗೆ ಜಾಗವನ್ನು ಸಂರಕ್ಷಿಸಬೇಕು ಎಂದು ಹೈಕೋರ್ಟ್ ಕೊಡಗು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. 

Latest Videos

undefined

ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ ಎನ್ನಲಾಗುವ 24 ಮುಸ್ಲಿಂ ಕುಟುಂಬಗಳಿಗೆ ಮತ್ತು 2 ಹಿಂದೂ ಕುಟುಂಬಗಳು ಸೇರಿದಂತೆ ಐಟಿಡಿಪಿ ಇಲಾಖೆ ಹಾಗೂ ಒಂದು ಶಾಲೆಗೆ ನೊಟೀಸ್ ನೀಡಲಾಗಿದೆ. ಹೌದು ಅಂದಿನ ಕೊಡಗು ರಾಜ್ಯವನ್ನು ಆಳ್ವಿಕೆ ಮಾಡಿದ್ದ ಹಾಲೇರಿ ರಾಜವಂಶಸ್ಥರರಾದ ಲಿಂಗರಾಜ ಅರಸು ದೊಡ್ಡವೀರರಾಜೇಂದ್ರ ಮತ್ತು ಅವನ ಪತ್ನಿ ಮಹಾದೇವಿಯಮ್ಮನವರ ಸಮಾಧಿ, ಚಿಕ್ಕವೀರರಾಜೇಂದ್ರನ ತಂದೆ ಲಿಂಗರಾಜೇಂದ್ರನ ಸಮಾಧಿ ಹಾಗೂ ವೀರರಾಜೇಂದ್ರನ ಗುರು ರುದ್ರಪ್ಪನವರ ಸಮಾಧಿಗಳು ಮಡಿಕೇರಿಯಿಂದ ಅಬ್ಬಿಫಾಲ್ಸ್ ಹೋಗುವ ರಸ್ತೆಯಲ್ಲಿ ಇವೆ. ಇವೆಲ್ಲವು ಈಗ ಪುರಾತತ್ವ ಇಲಾಖೆಯ ಸಂರಕ್ಷಿತ ಸ್ಮಾರಕಗಳಾಗಿವೆ. ಇದಕ್ಕೆ ಸಂಬಂಧಿಸಿದಂತೆ ಇಲ್ಲಿ 19.86 ಎಕರೆ ಜಾಗವಿದ್ದು, ಅದರಲ್ಲಿ ಬರೋಬ್ಬರಿ 17 ಎಕರೆಗೂ ಹೆಚ್ಚು ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ. ಅದರಲ್ಲಿ 24 ಮುಸ್ಲಿಂ ಕುಟುಂಬಗಳು ಒತ್ತುವರಿ ಮಾಡಿಕೊಂಡಿದ್ದರೆ, 2 ಹಿಂದೂ ಕುಟುಂಬಗಳು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿವೆ. ಅಲ್ಲದೆ ಐಟಿಡಿಪಿ ಇಲಾಖೆ ಕೂಡ ಒತ್ತುವರಿ ಮಾಡಿಕೊಂಡು ವಸತಿ ಗೃಹಗಳನ್ನು ನಿರ್ಮಿಸಿದೆ. ಜೊತೆಗೆ ಮಡಿಕೇರಿ ನಗರಸಭೆ ಕೂಡ ಶಾಲೆಯನ್ನು ನಿರ್ಮಿಸಿದೆ. ಹೀಗಾಗಿ 19.86 ಎಕರೆ ಜಾಗದಲ್ಲಿ ಗದ್ದುಗೆಯ ಜಾಗವೆಂದು ಉಳಿದಿರುವುದು ಕೇವಲ 2 ಎಕರೆ ಮಾತ್ರ. 

ಸಿದ್ದು, ಡಿಕೆಶಿ ಕಾದಾಟದಿಂದ ಸರ್ಕಾರ ಬಿದ್ದು ಹೋಗುತ್ತದೆ: ಸುನಿಲ್ ಸುಬ್ರಹ್ಮಣಿ

ಒತ್ತುವರಿಯಾಗಿರುವ ಎಲ್ಲಾ ಜಾಗವನ್ನು ತೆರವು ಮಾಡಿ ಐತಿಹಾಸಿಕ ಸ್ಮಾರಕದ ಜಾಗವನ್ನು ರಕ್ಷಿಸಬೇಕು ಎಂದು ಕೊಡಗು ವೀರಶೈವ ಸಮಾಜ ಮತ್ತು ಪರಮಶಿವಯ್ಯ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು. ಎಲ್ಲವನ್ನೂ ವಿಚಾರಣೆ ಮಾಡಿರುವ ರಾಜ್ಯ ಉಚ್ಛನ್ಯಾಯಾಲಯವು ಎಲ್ಲವನ್ನು ತೆರವು ಮಾಡಿ ಜಾಗವನ್ನು ಸಂರಕ್ಷಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಹೀಗಾಗಿ ರಾಜ್ಯ ಸರ್ಕಾರವು ಕೊಡಗು ಜಿಲ್ಲಾಡಳಿತಕ್ಕೆ ನೊಟೀಸ್ ನೀಡಿದ್ದು ಒತ್ತುವರಿಯಾಗಿರುವ ಎಲ್ಲಾ ಜಾಗವನ್ನು ತೆರವು ಮಾಡಿ ಗದ್ದುಗೆ ಜಾಗವನ್ನು ಸಂರಕ್ಷಿಸುವಂತೆ ಸೂಚಿಸಿದೆ. 

ನಿನ್ನೆಯಷ್ಟೇ ಆದೇಶ ಮಾಡಲಾಗಿದ್ದು, 15 ದಿನಗಳ ಒಳಗೆ ಕ್ರಮವಹಿಸಿ ವರದಿ ನೀಡುವಂತೆ ಸೂಚಿಸಿದೆ. ಹತ್ತಾರು ವರ್ಷಗಳ ಹಿಂದಿನಿಂದಲೂ ಮನೆಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದ 25 ಕುಟುಂಬಗಳು ಇದೀಗ ಬೀದಿಗೆ ಬರುವ ಆತಂಕ ಎದುರಾಗಿದೆ. 

ದೇಶದಲ್ಲೇ 'ಪರಿಶುದ್ಧ ಗಾಳಿ'ಗೆ ಮಡಿಕೇರಿ ಅಗ್ರಸ್ಥಾನ: ಗದಗಕ್ಕೆ 8ನೇ ಸ್ಥಾನ!

ಈ ಕುರಿತು ಮಾತನಾಡಿರುವ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ಅವರು, ಅತಿಕ್ರಮಣವಾಗಿರುವ ಜಾಗವನ್ನು ತೆರವು ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. ಅತಿಕ್ರಮಣದಾರರಿಗೆ ಪುರಾತತ್ವ ಇಲಾಖೆ ಕೂಡಲೇ ನೊಟೀಸ್ ನೀಡಲಿದೆ. ಬಳಿಕ ಕ್ರಮವಹಿಸಲಾಗುವುದು ಎಂದಿದ್ದಾರೆ. 

ಮತ್ತೊಂದೆಡೆ ಒತ್ತುವರಿಯಾಗಿರುವ ಗದ್ದುಗೆ ಜಾಗವನ್ನು ತೆರವು ಮಾಡಿ ಸಂರಕ್ಷಿಸುವಂತೆ ಸರ್ಕಾರ ನೊಟೀಸ್ ಮಾಡಿದ್ದೇ ತಡ ಕೋರ್ಟ್ ಆದೇಶವನ್ನು ಪಾಲಿಸಿ ಎಲ್ಲಾ ಒತ್ತುವರಿದಾರರನ್ನು ಖಾಲಿ ಮಾಡಿಸುವಂತೆ ವೀರಶೈವ ಲಿಂಗಾಯತ ಸಮಾಜದ ಕೊಡಗು ಜಿಲ್ಲಾ ಘಟಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಕೂಡಲೇ ಒತ್ತುವರಿದಾರರನ್ನು ತೆರವು ಮಾಡಿ, ಇಲ್ಲದಿದ್ದರೆ ತೀವ್ರ ಸ್ವರೂಪದ ಹೋರಾಟ ಹಾಗೂ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಂದಿದ್ದಾರೆ.

click me!