ಮಹದೇವಪುರದಲ್ಲಿ ಜೆಸಿಬಿ ಘರ್ಜನೆ: 4 ಅಂತಸ್ತಿನ ಅನಧಿಕೃತ ಕಟ್ಟಡ ತೆರವುಗೊಳಿಸಿದ ಬಿಬಿಎಂಪಿ

By Sathish Kumar KH  |  First Published Nov 21, 2024, 5:52 PM IST

ಬಿಬಿಎಂಪಿಯು ಮಹದೇವಪುರದಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಿಸಲಾದ 4 ಅಂತಸ್ತಿನ ಕಟ್ಟಡವನ್ನು ತೆರವುಗೊಳಿಸಿದೆ. ತುಳಸೀದೇವಿ ಎಂಬುವವರಿಗೆ ನೋಟಿಸ್ ನೀಡಿದ್ದರೂ ಕಟ್ಟಡ ನಿರ್ಮಾಣ ಮುಂದುವರೆಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.


ಬೆಂಗಳೂರು (ನ.21): ಸಿಲಿಕಾನ್ ಸಿಟಿ ಬೆಂಗಳೂರಿನಲ ಹೊರವಲಯ ಮಹದೇವಪುರದಲ್ಲಿ ಗುರುವಾರ ಬೆಳಗ್ಗೆ ವೈಟ್‌ ರೋಸ್ ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದ್ದ 4 ಅಂತಸ್ತಿನ ಕಟ್ಟಡವನ್ನು ಬಿಬಿಎಂಪಿ ಜೆಸಿನಿ ಮೂಲಕ ತೆರವುಗೊಳಿಸಿ, ನೆಲಸಮ ಮಾಡುತ್ತಿದೆ.

ಈ ಘಟನೆ ಮಹದೇವಪುರ ವಲಯದ ವೈಟ್‌ರೋಸ್ ಲೇಔಟ್ ನಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ನಿರ್ಮಿಸಿದ ಕಟ್ಟಡ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಬಿಬಿಎಂಪಿ ಮಹದೇವಪುರ ವಲಯ ಆಯುಕ್ತ ರಮೇಶ್ ಅವರ ನಿರ್ದೇಶನದಂತೆ ಸೈಟ್ ಸಂ. 23ಎ, ವೈಟ್ ರೋಸ್ ಲೇವಟ್ ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಿಸಲಾಗುತ್ತಿದ್ದ 4 ಅಂತಸ್ತಿನ ಕಟ್ಟದವನ್ನು ತೆರವುಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. 

Latest Videos

undefined

ಮಹದೇವಪುರ ವಲಯದ ಪಟ್ಟಂದೂರು ಅಗ್ರಹಾರದಲ್ಲಿ ಮಾಲೀಕರಾದ ತುಳಸೀದೇವಿ ಎಂಬುವವರು 30X80 ಸೈಟ್ ನಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ನೆಲಮಹಡಿ + 4 ಅಂತಸ್ತು ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡದಂತೆ, ಈಗ ಕಟ್ಟಲಾಗಿರುವುದನ್ನು ಸ್ಥಗಿತಗೊಳಿಸುವಂತೆ ಮಾಲೀಕರಿಗೆ ನೋಟೀಸ್ ಜಾರಿ ಮಾಡಲಾಗಿರುತ್ತದೆ. ಆದರೆ, ಕಟ್ಟಡದ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದ್ದರೂ ಕೂಡಾ ಕಟ್ಟಡ ನಿರ್ಮಾಣ ಕಾರ್ಯ ನಿಲ್ಲಿಸಿರಲಿಲ್ಲ. ಇದರಿಂದಾಗಿ, ಪಾಲಿಕೆ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ 1 ಜೆಸಿಬಿ ಹಾಗೂ 10 ಸಿಬ್ಬಂದಿಗಳ ಮೂಲಕ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: ಅಧಿವೇಶನ ಆರಂಭಕ್ಕೆ ಮುನ್ನ ರೇಷನ್‌ ಕಾರ್ಡ್‌ ವಾಪಸ್‌ ಕೊಡದಿದ್ದರೆ ತೀವ್ರ ಹೋರಾಟ: ಆರ್‌.ಅಶೋಕ

ಇನ್ನು ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ, ಪಾಲಿಕೆಯಿಂದ ಕೈಗೊಳ್ಳಲಾದ 1 ಜೆಸಿಬಿ, ಕಾರ್ಮಿಕರು ಹಾಗೂ ಪಾಲಿಕೆ ಅಧಿಕಾರಿಗಳು ಸೇರಿದಂತೆ ಕಟ್ಟಡ ತೆರವುಗೊಳಿಸಲು ತಗುಲಿದ ವೆಚ್ಚವನ್ನು ಕಟ್ಟಡ ಮಾಲೀಕರಿಂದ ವಸೂಲಿ ಮಾಡಲಾಗುತ್ತದೆ. ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಮಹದೇವಪುರ ವಲಯದ ಕಾರ್ಯಪಾಲಕ ಇಂಜಿನಿಯರ್ ರವಿಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗುರುರಾಜ್, ಸಹಾಯಕ ಇಂಜಿನಿಯರ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

click me!