ಮಂಗ್ಳೂರು ಸ್ಫೋಟ: ಗಾಯಾಳು ರಿಕ್ಷಾ ಚಾಲಕನಿಗೆ ಸರ್ಕಾರದ ಪರಿಹಾರ ಮರೀಚಿಕೆ

By Kannadaprabha NewsFirst Published Dec 21, 2022, 12:00 AM IST
Highlights

ನ.19ರಂದು ಕಂಕನಾಡಿ ಬಳಿ ಅಟೋರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಕುಕ್ಕರ್‌ ಬಾಂಬ್‌ ಹೊಂದಿದ್ದ ಮಹಮ್ಮದ್‌ ಶಾರೀಕ್‌ ಹಾಗೂ ಆಟೋ ಚಾಲಕ ಪುರುಷೋತ್ತಮ ಗಂಭೀರ ಗಾಯಗೊಂಡಿದ್ದರು. 

ಮಂಗಳೂರು(ಡಿ.21):  ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಟೋರಿಕ್ಷಾ ಚಾಲಕ ಪುರುಷೋತ್ತಮ ಅವರಿಗೆ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಹಾಗೂ ದ.ಕ.ಜಿಲ್ಲಾಡಳಿತ ನೀಡಿದ ಭರವಸೆ ಮರೆತುಬಿಟ್ಟಿದೆ.

ನ.19ರಂದು ಕಂಕನಾಡಿ ಬಳಿ ಅಟೋರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಕುಕ್ಕರ್‌ ಬಾಂಬ್‌ ಹೊಂದಿದ್ದ ಮಹಮ್ಮದ್‌ ಶಾರೀಕ್‌ ಹಾಗೂ ಆಟೋ ಚಾಲಕ ಪುರುಷೋತ್ತಮ ಗಂಭೀರ ಗಾಯಗೊಂಡಿದ್ದರು. ಇಬ್ಬರನ್ನೂ ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಮಹಮ್ಮದ್‌ ಶಾರೀಕ್‌ ಒಂದು ತಿಂಗಳ ಚಿಕಿತ್ಸೆ ಬಳಿಕ ಈಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸರ್ಜಿರಿಗೆ ಒಳಗಾಗುತ್ತಿದ್ದಾನೆ. ರಿಕ್ಷಾ ಚಾಲಕ ಪುರುಷೋತ್ತಮ ಅವರು ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ. ಆದರೆ ಸುಲಭದಲ್ಲಿ ದುಡಿಯಲು ಆಗದ ಸ್ಥಿತಿಗೆ ತಲುಪಿದ್ದಾರೆ.

ಮಂಗಳೂರು ಬಾಂಬ್‌ ಸ್ಫೋಟ: ವಿಕ್ಟೋರಿಯಾ ಆಸ್ಪತ್ರೆಗೆ ಶಾರೀಕ್‌ ದಾಖಲು

ಬಾಂಬ್‌ ಸ್ಫೋಟ ಘಟನೆಯಲ್ಲಿ ರಿಕ್ಷಾ ಚಾಲಕ ಅಮಾಯಕನಾಗಿದ್ದು, ಆತನಿಗೆ ಸೂಕ್ತ ಪರಿಹಾರ ನೀಡುವುದಾಗಿ ಆಸ್ಪತ್ರೆಗೆ ಭೇಟಿ ನೀಡಿದ ಗೃಹ ಸಚಿವರು, ಉಸ್ತುವಾರಿ ಸಚಿವರು, ಸಂಸದರುು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಭರವಸೆ ನೀಡಿದ್ದರು. ಅಲ್ಲದೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸುವುದಾಗಿಯೂ ಹೇಳಿದ್ದರು. ಈಗ ಘಟನೆಯ ಕಾವು ತಣ್ಣಗಾಗಿಗೆ, ನೀಡಿದ ಭರವಸೆಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಮರೆತಿದೆ.

ಪುರುಷೋತ್ತಮ ಅವರು ಈಗ ತನ್ನ ಪುತ್ರಿಯ ಇಎಸ್‌ಐ ಯೋಜನೆಯಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ರಿಗೆ ಮೇ ತಿಂಗಳಲ್ಲಿ ಮದುವೆ ನಿಗದಿಯಾಗಿದ್ದು, ಅದಕ್ಕಾಗಿ ಹಗಲು ರಾತ್ರಿ ಪುರುಷೋತ್ತಮ ಅಟೋರಿಕ್ಷಾ ಓಡಿಸಿ ಸಂಪಾದಿಸುತ್ತಿದ್ದರು. ಕಳೆದ ಒಂದು ತಿಂಗಳಿಂದ ಚಿಕಿತ್ಸೆಯಲ್ಲಿರುವ ಕಾರಣ ಸಂಪಾದನೆಗೆ ಹೊಡೆತ ಬಿದ್ದಿದೆ. ಇತ್ತ ಸರ್ಕಾರದ ನೆರವಿನ ಭರವಸೆಯೂ ಭರವಸೆಯಾಗಿಯೇ ಉಳಿದಿದೆ.

ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ವೈಯಕ್ತಿಕ ನೆಲೆಯಲ್ಲಿ 50 ಸಾವಿರ ರು. ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ 25 ಸಾವಿರ ರು. ನೀಡಿದ್ದು ಬಿಟ್ಟರೆ ಬೇರೆ ಆರ್ಥಿಕ ನೆರವು ಇವರಿಗೆ ಕೈಗೂಡಿಲ್ಲ. ಪುರುಷೋತ್ತಮರ ದುಸ್ಥಿತಿಯನ್ನು ಗಮನಿಸಿ ಗುರು ಬೆಳದಿಂಗಳು ಫೌಂಡೇಷನ್‌ ಮನೆ ದುರಸ್ತಿಯ ಕಾರ್ಯ ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದೆ. ಫೌಂಡೇಷನ್‌ ಅಧ್ಯಕ್ಷ ಪದ್ಮರಾಜ್‌ ಅವರು ಪುರುಷೋತ್ತಮರ ಮನೆ ನವೀಕರಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶೀಘ್ರವೇ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದಾರೆ.
 

click me!