ಮಲವಂತಿಗೆ ಗ್ರಾಮದ ಬಲ್ಲರಾಯನದುರ್ಗ ಕೆಳಭಾಗದಲ್ಲಿ ಸ್ಫೋಟದ ಸದ್ದು!

By Kannadaprabha NewsFirst Published Jul 16, 2022, 12:37 PM IST
Highlights

ದಕ್ಷಿಣ ಕನ್ನಡದ ಭಾಗದಲ್ಲಿ ಪ್ರತಿವರ್ಷ ವಿಪರೀತ ಮಳೆಯಾಗಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದ್ದು  ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆಗೆ  ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕೆಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರು ಭಯಭೀತರಾಗಗಿದ್ದಾರೆ.

ಬೆಳ್ತಂಗಡಿ(ಜು.16): ತಾಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಂಚಿನಲ್ಲಿರುವ ಬಲ್ಲರಾಯನದುರ್ಗದ ಕೆಳಭಾಗದಿಂದ ಭಾರಿ ಸ್ಫೋಟದ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿರುವ ಕುರಿತು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಮಕ್ಕಿ, ಪರ್ಲ, ದೈಪಿತ್ತಿಲು, ಎಲ್ಯರಕಂಡ ಸಹಿತ ಸುತ್ತಮುತ್ತ 16ಕ್ಕೂ ಅಧಿಕ ಮನೆಗಳಿವೆ. ಕಳೆದ ವರ್ಷ ಆಗಸ್ವ್‌ ಅವಧಿಯಲ್ಲಿ ಈ ಪ್ರದೇಶದಲ್ಲಿ ಭಾರಿ ಭೂ ಕುಸಿತ ಉಂಟಾದ ಹಿನ್ನೆಲೆ ಇಲ್ಲಿನ 40ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಿ ಬೇರೆಡೆ ಆಶ್ರಯ ನೀಡಲಾಗಿತ್ತು.

ಗುರುವಾರ ರಾತ್ರಿ ವೇಳೆಗೆ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಇದೇ ಪ್ರದೇಶದಲ್ಲಿ ಹಾದು ಬರುವ ಹಳ್ಳದಲ್ಲಿ ಮಣ್ಣುಮಿಶ್ರಿತ ನೀರು ಬರುತ್ತಿರುವುದಾಗಿ ಸ್ಥಳೀಯರ ಕೇಶವ ಎಂಬವರು ತಿಳಿಸಿದ್ದಾರೆ.

ಇದನ್ನೂ ಓದಿ: ಹಾನಿಗೀಡಾದ ಮನೆಗಳ ನಿರ್ಮಾಣಕ್ಕೆ ತುರ್ತು ಕ್ರಮ: ಸಿಎಂ ಸೂಚನೆ

ಈ ಪ್ರದೇಶದಲ್ಲಿ 250 ಹೇಕ್ಟೇರ್‌ ಅಧಿಕ ಕೃಷಿ ಹೊಂದಿದ್ದು, ಕಳೆದ ಮೂರು ವರ್ಷಗಳ ಹಿಂದೆ ಭೂ ಕುಸಿತ ಉಂಟಾದ ಬಳಿಕ ಅರಣ್ಯ ಇಲಾಖೆಯು ಇಲ್ಲಿನ ಕುಟುಂಬಗಳನ್ನು ಪರಿಹಾರ ಒದಗಿಸಿ ಸ್ಥಳಾಂತರಿಸಲು ನಿರ್ಧರಿಸಿತ್ತು. ಅರಣ್ಯ ಇಲಾಖೆ, ಕಂದಾಯ ಇಲಾಖೆ ಸರ್ವೇ ಕಾರ್ಯ ನಡೆಸಿ ಬಳಿಕ ಯಾವುದೇ ಸ್ಪಂದನೆ ನೀಡದ ಕಾರಣ ಇಲ್ಲಿನ ಮಂದಿ ಅತ್ತ ಸ್ಥಳಾಂತರಗೊಳ್ಳದೆ, ಇತ್ತ ಅಲ್ಲಿಯೂ ವಾಸಿಸಲು ಆಗದೆ ಭಯದಲ್ಲೇ ದಿನದೂಡುವಂತಾಗಿದೆ. ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರು ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು ಅಲ್ಲಲ್ಲಿ ಭೂ ಕುಸಿತ ಉಂಟಾಗುತ್ತಿದೆ. ಇದೀಗ ಮಲವಂತಿಗೆ ಸಮೀಪ ಬಲ್ಲರಾಯನದುರ್ಗದ ಭಾಗದಲ್ಲಿ ಭೂಕುಸಿತ ಉಂಟಾಗಿರುವ ಸಾಧ್ಯತೆ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

 ಬೆಳ್ತಂಗಡಿ ತಾಲೂಕಿನಲ್ಲಿ ಮಳೆಗೆ ಗುಡ್ಡ ಜರಿತ: ಮನೆ, ವಿದ್ಯುತ್‌ ಕಂಬಗಳಿಗೆ ಹಾನಿ:

ಬೆಳ್ತಂಗಡಿ ತಾಲೂಕಿನಲ್ಲಿ ವಿಪರೀತ ಮಳೆಯಾಗುತ್ತಿದ್ದು ಮುಂಡಾಜೆ ಹಾಗೂ ಆಸುಪಾಸಿನ ಗ್ರಾಮಗಳ ಅಲ್ಲಲ್ಲಿ ಕೆಲವೊಂದು ಸಣ್ಣಪುಟ್ಟಅನಾಹುತಗಳು ಸಂಭವಿಸುತ್ತಿವೆ. ಮುಂಡಾಜೆಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಭಿಡೆ ಕ್ರಾಸ್‌ ಎಂಬಲ್ಲಿ ಶಕುಂತಲಾ ಮೆಹಂದಳೆ ಅವರ ಮನೆಯ ಹಿಂಭಾಗದ ಗುಡ್ಡ ಕುಸಿದು ಮಳೆ ನೀರು ಮನೆಯ ಹಿಂಭಾಗದ ಜಗಲಿಯನ್ನು ಆವರಿಸಿದೆ. ಸ್ಥಳೀಯರು ಹೆಚ್ಚಿನ ಹಾನಿ ಉಂಟಾಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ.

ಮುಂಡಾಜೆ ಕಲ್ಮಂಜ ಮೂಲಕ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮರ ಒಂದು ರಸ್ತೆಗೆ ಉರುಳಿ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ದಿಡುಪೆ ಸಮೀಪದ ಮನೆಯೊಂದರ ಪಕ್ಕದ ಗುಡ್ಡ ಕುಸಿತವಾದ ಬಗ್ಗೆ ತಿಳಿದುಬಂದಿದೆ. ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಕಾಪು ಎಂಬಲ್ಲಿ ಮರದ ರೆಂಬೆಯೊಂದು ಮುರಿದು ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಉಜಿರೆಯ ಶಿವಾಜಿನಗರ ಸಮೀಪ ಭಾಸ್ಕರ ಎಂಬವರ ಮನೆ ಪಕ್ಕದ ಗುಡ್ಡ ಕುಸಿತವಾಗಿದ್ದು ಮಣ್ಣು ಮನೆಯ ಗೋಡೆಯನ್ನು ಆವರಿಸಿದೆ. ತಾಲೂಕಿನ ಹಲವೆಡೆ ವಿದ್ಯುತ್‌ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.

ಇದನ್ನೂ ಓದಿ: ಮಳೆ, ಇಳಿಯದ ನೆರೆ - ಉಕ್ಕಿ ಹರಿಯುತ್ತಿರುವ ನದಿಗಳ ಡ್ಯಾಂಗಳಿಂದ ಅಪಾರ ನೀರು

ನೇತ್ರಾವತಿ ನದಿಯು ತುಂಬಿ ಹರಿಯುತ್ತಿದ್ದು ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ತೇಲಿ ಬಂದ ಜಾನುವಾರೊಂದು ಕಡಿರುದ್ಯಾವರ ಗ್ರಾಮದ ಕೊಪ್ಪದಗಂಡಿ ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ಕಟ್ಟಲಾಗಿರುವ ಸೇತುವೆಯಲ್ಲಿ ಸಿಕ್ಕಿ ಪ್ರಾಣ ಬಿಟ್ಟಿರುವುದು ಶುಕ್ರವಾರ ಬೆಳಗಿನ ಜಾವ ಸ್ಥಳೀಯರಿಗೆ ಕಂಡು ಬಂದಿದೆ. ಆದರೆ ಇದರ ವಾರಸುದಾರರು ಯಾರೆಂದು ತಿಳಿದು ಬಂದಿಲ್ಲ.

ಮಲವಂತಿಗೆ ಗ್ರಾಮದ ಪರಾರಿಗುಡ್ಡೆ ಎಂಬಲ್ಲಿ ಗುರುವಾರದಿಂದ ವಿಪರೀತ ಮಳೆಯಾಗುತ್ತಿದ್ದು ಶುಕ್ರವಾರ ಸುಂದರ ಪೂಜಾರಿ ಎಂಬವರ ಮನೆಗೆ ಗುಡ್ಡ ಕುಸಿದು ಮನೆ ಸಂಪೂರ್ಣ ಹಾನಿಯಾಗಿದೆ. ಸ್ಥಳೀಯ ಸ್ವಯಂ ಸೇವಕರು ಹಾನಿಗೀಡಾದ ಮನೆಯ ಸಾಮಗ್ರಿಗಳನ್ನು ಸ್ಥಳಾಂತರ ಮಾಡಿದ್ದು, ಸಂತ್ರಸ್ತರು ನೆರೆಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಚಾರ್ಮಾಡಿ ಗ್ರಾಮದ ರಫೀಕ್‌ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಲಾಯಿಲ ಗ್ರಾಮದ ರಾಧಾ ಎಂಬುವರ ಮನೆ ಹಿಂಭಾಗ ಗುಡ್ಡ ಜರಿದಿದೆ. ಮನೆಯವರನ್ನು ಸ್ಥಳಾಂತರ ಮಾಡಲಾಗಿದೆ. ಮುಂಡಾಜೆಯ ಉಳ್ಳಾಲ್ತಿ ಕಲ್ಲು ಎಂಬಲ್ಲಿ ಮರ ರಸ್ತೆಗೆ ಬಿದ್ದು ಸಂಚಾರಕ್ಕೆ ತಡೆಯುಂಟಾಗಿದೆಯಲ್ಲದೆ ವಿದ್ಯುತ್‌ ಕಂಬ ಮುರಿದು ಬಿದ್ದಿದೆ. ಮಿತ್ತಬಾಗಿಲು ಗ್ರಾಮದ ಕಿಲ್ಕೂರು ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಗುಡ್ಡ ಕುಸಿದಿದೆ. ಕಳಿಯ ಗ್ರಾಮದ ಗ್ರಾಮ ಸಹಾಯಕ ಸ್ಟ್ಯಾನ್ಲಿ ಡಿಸೋಜ ಅವರ ಅಡಕೆ ತೋಟ ಜರಿದಿದೆ.

click me!