ಹಲವು ದಶಕಗಳಿಂದ ತಾವು ಉಳುಮೆ ಮಾಡುತ್ತಿರುವ ಸರ್ಕಾರಿ ಜಮೀನು ಅಥವಾ ಗೋಮಾಳವನ್ನು ಭೂ ಸಕ್ರಮೀಕರಣಕ್ಕಾಗಿ ರೈತರು ಸಾಗುವಳಿ ಚೀಟಿ ಕನಸು ಹೊತ್ತು ಕಂದಾಯ ಇಲಾಖೆಗೆ ಫಾರಂ 53, 57 ಅಡಿ ಸಲ್ಲಿಕೆಯಾಗಿರುವ ಬರೋಬ್ಬರಿ 43,725 ಅರ್ಜಿಗಳು ಜಿಲ್ಲೆಯಲ್ಲಿ ಇನ್ನೂ ವಿಲೇವಾರಿಗೆ ಬಾಕಿ ಇವೆ.ಭೂಮಿ ಹಂಚಿಕೆಗೆ ಮೀನಮೇಷ ಎಣಿಸುತ್ತಿರುವ ಸರ್ಕಾರ.
ಚಿಕ್ಕಬಳ್ಳಾಪುರ (ಸೆ.6) : ಹಲವು ದಶಕಗಳಿಂದ ತಾವು ಉಳುಮೆ ಮಾಡುತ್ತಿರುವ ಸರ್ಕಾರಿ ಜಮೀನು ಅಥವಾ ಗೋಮಾಳವನ್ನು ಭೂ ಸಕ್ರಮೀಕರಣಕ್ಕಾಗಿ ರೈತರು ಸಾಗುವಳಿ ಚೀಟಿ ಕನಸು ಹೊತ್ತು ಕಂದಾಯ ಇಲಾಖೆಗೆ ಫಾರಂ 53, 57 ಅಡಿ ಸಲ್ಲಿಕೆಯಾಗಿರುವ ಬರೋಬ್ಬರಿ 43,725 ಅರ್ಜಿಗಳು ಜಿಲ್ಲೆಯಲ್ಲಿ ಇನ್ನೂ ವಿಲೇವಾರಿಗೆ ಬಾಕಿ ಇವೆ. ಜಿಲ್ಲೆಯ ಅತಿ ಹಿಂದುಳಿದ ತಾಲೂಕಾದ ಬಾಗೇಪಲ್ಲಿ ತಾಲೂಕು ಫಾರಂ 53, 57 ಅರ್ಜಿಗಳ ವಿಲೇವಾರಿಯಲ್ಲಿ ಕೊನೆ ಸ್ಥಾನದಲ್ಲಿದ್ದರೆ ನಂತರ ಸ್ಥಾನದಲ್ಲಿ ಚಿಕ್ಕಬಳ್ಳಾಪುರ ತಾಲೂಕು ಇದೆ. ಈ ಎರಡು ತಾಲೂಕುಗಳಲ್ಲಿ 20,000 ಅಧಿಕ ಬಗುರ್ ಹುಕ್ಕುಂ ಸಾಗುವಳಿ ಚೀಟಿಗಾಗಿ ಸಲ್ಲಿಕೆ ಆಗಿರುವ ಅರ್ಜಿಗಳು ಬಾಕಿ ಇವೆ. ಇನ್ನೂ 3ನೇ ಸ್ಥಾನದಲ್ಲಿ ಗೌರಿಬಿದನೂರು ಇದ್ದು ಒಟ್ಟು 8,121 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.
ಚಿಕ್ಕಬಳ್ಳಾಪುರ: ಬರದೂರಿನಲ್ಲೀಗ ಭರಪೂರ ಭತ್ತದ ನಾಟಿ..!
ಜಿಲ್ಲೆಯಲ್ಲಿ ಫಾರಂ 50, 53 ಹಾಗೂ 57 ನಡಿ ಒಟ್ಟು 1,30,436 ಅರ್ಜಿಗಳು ಸಲ್ಲಿಕೆ ಆಗಿದ್ದರೂ ಇಲ್ಲಿಯವರೆಗೂ ಒಟ್ಟು 86,711 ಅರ್ಜಿಗಳು ವಿಲೇವಾರಿ ಮಾಡಲಾಗಿದ್ದು ಆ ಪೈಕಿ ಫಾರಂ 50ರಡಿ 50,649, ಹಾಗೂ ಫಾರಂ 53 ನಡಿ 33,017ಮತ್ತು ಫಾರಂ 57ನಡಿ 3045 ಅರ್ಜಿಗಳು ವಿಲೇವಾರಿ ಮಾಡಲಾಗಿದೆ. ವಿಲೇವಾರಿಯಲ್ಲಿ ಬಹುಪಾಲು ಅರ್ಜಿಗಳು ತಿರಸ್ಕೃತಗೊಂಡಿವೆ.
ತಾಲೂಕುವಾರು ಮಾಹಿತಿ:
ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಒಟ್ಟು 23,133 ಅರ್ಜಿಗಳು ಸಲ್ಲಿಕೆ ಆಗಿದ್ದು ಕೇವಲ 14,037 ಅರ್ಜಿಗಳು ವಿಲೇವಾರಿ ಆಗಿವೆ. ಇನ್ನೂ 9.096 ಅರ್ಜಿಗಳು ಬಾಕಿ ಇವೆ. ಶಿಡ್ಲಘಟ್ಟದಲ್ಲಿ ಒಟ್ಟು 25,548 ಅರ್ಜಿಗಳು ಸಲ್ಲಿಕೆ ಆಗಿದ್ದು ಆ ಪೈಕಿ ಇಲ್ಲಿವರೆಗೂ 18,658 ಅರ್ಜಿಗಳು ವಿಲೇವಾರಿ ಮಾಡಲಾಗಿದ್ದು ಇನ್ನೂ 6,890 ಅರ್ಜಿಗಳು ಬಾಕಿ ಇವೆ. ಚಿಂತಾಮಣಿ ತಾಲೂಕಿನಲ್ಲಿ ಒಟ್ಟು 21,789 ಅರ್ಜಿಗಳು ಸಲ್ಲಿಕೆ ಆಗಿದ್ದು ಇಲ್ಲಿಯವರೆಗೂ ಒಟ್ಟು15,822 ಅರ್ಜಿಗಳು ವಿಲೇವಾರಿ ಆಗಿದ್ದು ಇನ್ನೂ 5,976 ಅರ್ಜಿಗಳು ಬಾಕಿ ಇವೆ.
ಬಾಗೇಪಲ್ಲಿ ತಾಲೂಕಿನಲ್ಲಿ ಒಟ್ಟು 24,048 ಅರ್ಜಿಗಳು ಸಲ್ಲಿಕೆಯಾಗಿದ್ದು ಆ ಪೈಕಿ ಇಲ್ಲಿಯವರೆಗೂ ಒಟ್ಟು 13,117 ಅರ್ಜಿಗಳು ಮಾತ್ರ ವಿಲೇವಾರಿ ಆಗಿದ್ದು ಇನ್ನೂ 10.931 ಅರ್ಜಿಗಳು ವಿಲೇವಾರಿಗೆ ಎದುರು ನೋಡುತ್ತಿವೆ. ಗುಡಿಬಂಡೆ ತಾಲೂಕಿನಲ್ಲಿ ಒಟ್ಟು 5801 ಅರ್ಜಿಗಳು ಸಲ್ಲಿಕೆ ಆಗಿ ಇಲ್ಲಿಯವರೆಗೂ 3,090 ಅರ್ಜಿಗಳು ವಿಲೇವಾರಿ ಆಗಿವೆ. ಇನ್ನೂ 2,711 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಗೌರಿಬಿದನೂರು ತಾಲೂಕಿನಲ್ಲಿ ಒಟ್ಟು 30,108 ಅರ್ಜಿಗಳು ಸಲ್ಲಿಕೆ ಆಗಿದ್ದು ಇಲ್ಲಿಯವರೆಗೂ 21,987 ಅರ್ಜಿಗಳು ವಿಲೇವಾರಿ ಆಗಿದ್ದು ಇನ್ನೂ 8,121 ಅರ್ಜಿಗಳು ವಿಲೇವಾರಿಗೆ ಎದುರು ನೋಡುತ್ತಿದೆ.
ಗ್ರಾಮೀಣರಿಗೆ ಉತ್ತಮ ಆರೋಗ್ಯ ನೀಡುವ ಗುರಿ: ಸಚಿವ ಸುಧಾಕರ್
ಜಿಲ್ಲೆಯಲ್ಲಿ ಫಾರಂ 50, 53, 57 ರಡಿ ಒಟ್ಟು ಜಿಲ್ಲಾದ್ಯಂತ 1,30,436 ಅರ್ಜಿಗಳು ಸಲ್ಲಿಕೆ ಆಗಿದ್ದು ಆ ಪೈಕಿ 86,711 ಅರ್ಜಿಗಳು ವಿಲೇವಾರಿ ಮಾಡಲಾಗಿದ್ದು ಇನ್ನೂ 43,725 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆಯೆಂದು ಜಿಲ್ಲೆಯ ಉಪ ವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್ ಕನ್ನಡಪ್ರಭಗೆ ಮಾಹಿತಿ ನೀಡಿದ್ದಾರೆ.