ಭವಿಷ್ಯದ ಬೆಂಗಳೂರು ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

By Kannadaprabha NewsFirst Published Sep 13, 2021, 7:13 AM IST
Highlights

*  ಮುಂದಿನ 50 ವರ್ಷ ಗಮನದಲ್ಲಿ ಇಟ್ಟುಕೊಂಡು ಯೋಜನಾ ಬದ್ಧವಾಗಿ ನಗರ ಅಭಿವೃದ್ಧಿ
*  ಮೂಲಭೂತ ಸೌಕರ್ಯ ಹೆಚ್ಚಿಸಲು ಶಾಸಕರು, ಸಚಿವರು ಕಾರ್ಯ ನಿರ್ವಹಣೆ
*  ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ
 

ಬೆಂಗಳೂರು(ಸೆ.13): ಭವಿಷ್ಯದ 50 ವರ್ಷ ಗಮನದಲ್ಲಿಟ್ಟುಕೊಂಡು ಯೋಜನಾ ಬದ್ಧವಾಗಿ ರಾಜಧಾನಿ ಬೆಂಗಳೂರನ್ನು ಅಂತಾರಾಷ್ಟ್ರೀಯ ನಗರವನ್ನಾಗಿ ಮಾಡಲು ರಾಜ್ಯ ಸರ್ಕಾರ ಸಿದ್ಧವಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಮೂಲಭೂತ ಸೌಲಭ್ಯ ಹೆಚ್ಚಿಸಲು ಶಾಸಕರು, ಸಚಿವರು ಕಾರ್ಯೋನ್ಮುಖರಾಗಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಭಾನುವಾರ ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಅವರ ಸ್ವಕ್ಷೇತ್ರವಾದ ಗೋವಿಂದರಾಜ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್‌ ಕೇಂದ್ರ’, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ’ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸೇರಿ ಆರೋಗ್ಯ ವಲಯದ ನಿರ್ವಹಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ವಲಯದ ಸೂಕ್ತ ನಿರ್ವಹಣೆಗಾಗಿ ಏಕರೂಪ ವ್ಯವಸ್ಥೆ ತರುವ ಚಿಂತನೆ ನಡೆದಿದೆ. ಅದಕ್ಕಾಗಿ ಆರೋಗ್ಯ ಸಿಬ್ಬಂದಿ ಹೆಚ್ಚಿಸುವ ಜತೆಗೆ ಎಲ್ಲ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು. ಬಡವರಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ವಾರ್ಡ್‌ಗೆ ಒಂದರಂತೆ ಆಸ್ಪತ್ರೆ ನಿರ್ಮಿಸಲಾಗುವುದು ಎಂದರು.

ಗಾಯಕ ಸೂರ್ಯಕಾಂತ್ ಊರಿಗೆ ಬಸ್ ಸೇವೆ ನೀಡಿದ ಸಿಎಂ ಬೊಮ್ಮಾಯಿ

ನಗರದಲ್ಲಿ ಸೂರಿಲ್ಲದ ಬಡವರಿಗೆ ಮನೆ ಕಟ್ಟಿಕೊಡಲು ಇರುವ ಕಾನೂನು ತೊಡಕು ನಿವಾರಣೆಗಾಗಿ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳು, ಸಚಿವರ ಜತೆ ಚರ್ಚಿಸಿದ್ದು, ಈ ಬಗ್ಗೆ ಶೀಘ್ರವೇ ಸಿಹಿ ಸುದ್ದಿ ಸಿಗಲಿದೆ. ಮನೆ ಇದ್ದು, ದಾಖಲೆ ಇಲ್ಲದವರಿಗೆ ದಾಖಲಾತಿ ನೀಡಲು ಕ್ರಮ ವಹಿಸಲಾಗುವುದು. ರಾಜಧಾನಿ ನಾಗರಿಕರಿಗೆ ಮನೆ ಬಾಗಿಲಿಗೆ ಎಲ್ಲ ಸರ್ಕಾರಿ ಸೌಲಭ್ಯ ಲಭ್ಯವಾಗುವಂತೆ ನೋಡಿಕೊಳ್ಳಲಿದ್ದೇವೆ. ಸ್ಥಳೀಯ ಮೂಲಸೌಕರ್ಯ ಅಭಿವೃದ್ಧಿಗಾಗಿ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುವುದು ಎಂದು ಭವಿಷ್ಯದ ಬೆಂಗಳೂರು ಅಭಿವೃದ್ಧಿಯ ಯೋಜನೆಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದಿಂದ ಬೊಮ್ಮಾಯಿ, ಸೋಮಣ್ಣ ಸೇರಿದಂತೆ ಗಣ್ಯರಿಗೆ ಕಂಬಳಿ ಹೊದಿಸಿ ಸನ್ಮಾನಿಸಲಾಯಿತು. ಕಾಗಿನೆಲೆಯ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ಮತ್ತು ಹೊಸದುರ್ಗ ಶಾಖಾ ಮಠದ ಪೀಠಾಧ್ಯಕ್ಷ ಈಶ್ವರಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಚಿವರಾದ ಆರ್‌.ಅಶೋಕ್‌, ಡಾ. ಕೆ.ಸುಧಾಕರ್‌, ಬೈರತಿ ಬಸವರಾಜ, ಕೆ.ಗೋಪಾಲಯ್ಯ, ಮುನಿರತ್ನ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಎಸ್‌.ಆರ್‌.ವಿಶ್ವನಾಥ್‌, ಅ.ದೇವೇಗೌಡ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ, ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಪಿಇಎಸ್‌ ವಿಶ್ವವಿದ್ಯಾಲಯ ಕುಲಾಧಿಪತಿ ಡಾ
ಎಂ.ಆರ್‌.ದೊರೆಸ್ವಾಮಿ, ರಾಜರಾಜೇಶ್ವರಿ ವೈದ್ಯಕೀಯ ವಿದ್ಯಾಲಯ/ಆಸ್ಪತ್ರೆ ಮುಖ್ಯಸ್ಥ ಷಣ್ಮುಗಂ ಮತ್ತಿತರರು ಪಾಲ್ಗೊಂಡಿದ್ದರು.

ರಾಯಣ್ಣನ ಸ್ಮರಣಾರ್ಥ ಅಭಿವೃದ್ಧಿ ಕಾಮಗಾರಿ

ಅಧ್ಯಕ್ಷತೆ ವಹಿಸಿದ್ದ ಸಚಿವ ವಿ.ಸೋಮಣ್ಣ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹೋರಾಟ, ದೇಶಪ್ರೇಮ, ಶೌರ್ಯ ಯುವಪೀಳಿಗೆಗೆ ತಿಳಿಸುವ ದೃಷ್ಟಿಯಿಂದ ಕ್ಷೇತ್ರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್‌ ಕೇಂದ್ರ, ಸಂಗೊಳ್ಳಿ ರಾಯಣ್ಣ ಉದ್ಯಾನ, ಸ್ಕೇಟಿಂಗ್‌ ಟ್ರ್ಯಾಕ್‌, 70 ಬೆಡ್‌ಗಳ ಕೋವಿಡ್‌ ಆಸ್ಪತ್ರೆ, ರಾಯಣ್ಣನ ಪುತ್ಥಳಿ ನಿರ್ಮಿಸಿದ್ದೇವೆ. ಡಾ. ಶಿವಕುಮಾರ ಸ್ವಾಮೀಜಿ ಮತ್ತು ಪೇಜಾವರ ಶ್ರೀಗಳ ಹೆಸರಲ್ಲಿ ಐಎಎಸ್‌, ಕೆಎಎಸ್‌ ತರಬೇತಿ ಕೇಂದ್ರ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ ಸ್ಥಾಪಿಸಲಾಗಿದೆ. ಪಾಲಿಕೆ ಮಾಜಿ ಸದಸ್ಯ ದಿ. ಡಿ.ಕೃಷ್ಣಪ್ಪ ಸ್ಮರಣಾರ್ಥ ಶಾಲಾ ಕಟ್ಟಡ ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಕ್ಷೇತ್ರದ ಬಡ ಮಕ್ಕಳಿಗಾಗಿ ಸ್ಥಾಪಿಸಿದ ಸರ್ಕಾರಿ ಶಾಲೆಗಳ ನಿರ್ವಹಣೆ ಕಷ್ಟವಾಗಿದ್ದು, ಅವುಗಳನ್ನು ಬಿಬಿಎಂಪಿ ವ್ಯಾಪ್ತಿಗೆ ತೆಗೆದುಕೊಂಡು ಅಗತ್ಯ ನೆರವು ಕಲ್ಪಿಸಬೇಕು. ಕೊರೋನಾ ರೋಗಿಗಳ ಚಿಕಿತ್ಸೆಗೆಂದು ನಿರ್ಮಿಸಿದ ಕೊವಿಡ್‌ ವಾರ್‌ ರೂಂಗಳನ್ನು ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ತರಬೇಕು. ನಗರದಲ್ಲಿ 2 ವರ್ಷದಲ್ಲಿ 4 ಲಕ್ಷ ಮನೆಗಳನ್ನು ವಿತರಿಸಲಾಗಿದೆ. ಉದ್ದೇಶಿತ ಒಂದು ಲಕ್ಷ ಮನೆ ಪೈಕಿ 65 ಸಾವಿರ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

4 ಲಕ್ಷ ಮನೆಗಳಿಗೆ ಅರ್ಹ ಫಲಾನುಭವಿಗಳ ಗುರುತಿಸಿ

ಆರ್ಥಿಕ ಶಕ್ತಿ ತುಂಬುವಂತೆ ಮನವಿ

ಎಂ.ಸಿ ಲೇಔಟ್‌ನಲ್ಲಿ 200 ಬೆಡ್‌ಗಳ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗೆ ಮತ್ತು ಪಂತರಪಾಳ್ಯದ ಜನರಿಗೆ ಆರೋಗ್ಯ ಸೇವೆ ಒದಗಿಸಲು ಆಸ್ಪತ್ರೆ ನಿರ್ಮಾಣ ಕಾರ್ಯಗಳಿಗೆ ನೆರವು ನೀಡಬೇಕು. 28 ವಿಧಾನಸಭಾ ಕ್ಷೇತ್ರಗಳ ಪೈಕಿ ಗೋವಿಂದರಾಜ ನಗರ ಮಾದರಿ ಕ್ಷೇತ್ರವನ್ನಾಗಿ ಮಾಡಲು ಇಲ್ಲಿನ ಮೂಲ ಸೌಕರ್ಯಗಳ ಅಭಿವೃದ್ಧಿ ಒತ್ತು ನೀಡಬೇಕು. ಭವಿಷ್ಯದ ಯೋಜನೆಗಳಿಗೆ ಸರ್ಕಾರ ಇನ್ನಷ್ಟುಆರ್ಥಿಕ ಶಕ್ತಿ ತುಂಬಬೇಕೆಂದು ಇದೇ ವೇಳೆ ಸೋಮಣ್ಣ ಮನವಿ ಮಾಡಿದರು.

ಮಾದರಿ ಸೋಮಣ್ಣ: ಸಿಎಂ ಪ್ರಶಂಸೆ

ಜನರ ಒಳಿತಿಗಾಗಿ ಸೋಮಣ್ಣನವರು ಕ್ಷೇತ್ರದ ಇಂಚಿಂಚು ಸ್ಥಳವನ್ನು ಅಭಿವೃದ್ಧಿಗಾಗಿ ಬಳಸುತ್ತಿದ್ದಾರೆ. ಕೊಳಚೆ ಪ್ರದೇಶವಾಗಿದ್ದ ಈ ಸ್ಥಳದಲ್ಲಿ ಸಂಗೊಳ್ಳಿ ರಾಯಣ್ಣನ ಹೆಸರಲ್ಲಿ ಅಭಿವೃದ್ಧಿ ಮಾಡಿ ಸ್ಫೂರ್ತಿ ತುಂಬಿದ್ದಾರೆ. 70 ವರ್ಷ ದಾಟಿರುವ ಸೋಮಣ್ಣ 20 ವರ್ಷದ ಯವಕನಂತೆ ಕ್ಷೇತ್ರದ ತುಂಬೆಲ್ಲ ಓಡಾಡಿಕೊಂಡು ಜನಪರ ಕೆಲಸಗಳನ್ನು ಮಾಡುತ್ತಿರುವುದು ನಮಗೆಲ್ಲ ಮಾದರಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದರು.

ಸೋಮಣ್ಣ ಅವರ ಕಾರ್ಯದ ಫಲವಾಗಿ ಸಾವಿರಾರು ಬಡ ಮಕ್ಕಳ ವಿದ್ಯಾರ್ಜನೆಗಾಗಿ ಅಗ್ರಹಾರ ದಾಸರಹಳ್ಳಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಪುನರ್ಜೀವ ನೀಡುವುದರ ಜತೆಗೆ ಇಲ್ಲಿಯೇ ನೂತನ ಪಿಯು ಕಾಲೇಜು ಸ್ಥಾಪಿಸಿದ್ದಾರೆ. ಖಾಸಗೀಕರಣದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು ಹೆಚ್ಚುತ್ತಿವೆ. ಅವುಗಳ ಗುಣಮಟ್ಟಕ್ಕೆ ಸರಿಸಮವಾಗಿ ಪೈಪೋಟಿ ಒಡ್ಡಿ ನಗರದ ಸರ್ಕಾರಿ ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಅಂತಹ ಸಂಸ್ಥೆಗಳಿಗೆ ಸರ್ಕಾರ ಇನ್ನಷ್ಟುಆರ್ಥಿಕ ಶಕ್ತಿ ತುಂಬಲಿದೆ ಎಂದು ಹೇಳಿದರು.

-ಅಗ್ರಹಾರ ದಾಸರಹಳ್ಳಿಯಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜು ಉದ್ಘಾಟನೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
-ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣಗೊಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
-ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್‌ ಕೇಂದ್ರ’, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ’ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.
 

click me!