* ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿ, ಮಾಹಿತಿ ತಿಳಿದುಕೊಳ್ಳಿ
* ಸರ್ಕಾರಿ-ಖಾಸಗಿ ಆಸ್ಪತ್ರೆಗಳ ಬೆಡ್ ಮಾಹಿತಿ ವೆಬ್‌ನಲ್ಲಿ
* ಕೊಪ್ಪಳ ಜಿಲ್ಲಾಡಳಿತ ವಿನೂತನ ಪ್ರಯೋಗ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಮೇ.13): ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇರುವ ಮಾಹಿತಿಯ ಬಗ್ಗೆ ತಡಕಾಡುತ್ತಿದ್ದಿರಾ? ಆಸ್ಪತ್ರೆಯವರು ಖಾಲಿ ಇದ್ದರೂ ಸುಳ್ಳು ಹೇಳಿತ್ತಿರಬಹುದೇ? ತುರ್ತಾಗಿ ದಾಖಲಾಗಬೇಕಾದಾಗ ಯಾವ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇವೆ ಎನ್ನುವ ಸಮಸ್ಯೆ ಎದುರಿಸುತ್ತಿದ್ದಿರಾ? ಇದೆಲ್ಲಕ್ಕೂ ಪರಿಹಾರವನ್ನು ಕೊಪ್ಪಳ ಜಿಲ್ಲಾಡಳಿತ ಸೂಚಿಸಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಸಾಮಾನ್ಯ ಬೆಡ್, ಆಕ್ಸಿಜನ್ ಬೆಡ್, ವೆಂಟಿಲೇಟರ್ ಬೆಡ್‌ಗಳ ಮಾಹಿತಿ ಮತ್ತು ಅವು ಖಾಲಿ ಇರುವಿಕೆಯನ್ನು ಅಂಗೈಯಲ್ಲಿರುವ ಮೊಬೈಲ್‌ನಲ್ಲಿ ನೋಡಬಹುದು.
ನಿಗದಿಪಡಿಸಿರುವ ವೆಬ್‌ನಲ್ಲಿಯೂ ನೋಡಬಹುದು ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಯೂ ನೋಡಬಹುದು. ಕೊಪ್ಪಳ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಬೆಡ್‌ಗಳ ಮಾಹಿತಿಯನ್ನು ಆನ್ಲೈನ್ಗೆ ಅಪ್‌ಲೋಡ್ ಮಾಡಲಾಗುತ್ತದೆ. ಆಯಾ ಕ್ಷಣದ ಮಾಹಿತಿಯೂ ಲಭ್ಯವಾಗುವುದರಿಂದ ರೋಗಿಗಳು ಆಸ್ಪತ್ರೆ ಹುಡುಕಿಕೊಂಡು ಹೋದ ಮೇಲೆ ಬೆಡ್‌ಗಳ ಬಗ್ಗೆ ಮಾಹಿತಿ ಪಡೆಯುವ ಬದಲು ಮೊದಲೇ ಮಾಹಿತಿಯನ್ನು ಪಡೆದುಕೊಂಡು, ಆ ಆಸ್ಪತ್ರೆಗೆ ಹೋಗಬಹುದಾಗಿದೆ. ಇಂಥದ್ದೊಂದು ತಂತ್ರಜ್ಞಾನವನ್ನು ಅಳವಡಿಸಿ, ಸಾರ್ವಜನಿಕರ ಅನುಕೂಲಕ್ಕಾಗಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಕ್ಯೂಆರ್ ಕೋಡ್ ಹಾಗೂ ವೆಬ್ ವಿಳಾಸವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಚುರಪಡಿಸಲಾಗುತ್ತಿದೆ.
ಕೊಪ್ಪಳ: ಬೆಡ್ ಸಿಗದೆ ಸರ್ಕಾರಿ ಆಸ್ಪತ್ರೆ ಎದುರೇ ಮಹಿಳೆ ಸಾವು
ಬೆಡ್ ಬ್ಲಾಕಿಂಗ್ ದಂಧೆಗೆ ಬ್ರೇಕ್:
ಈ ಮೂಲಕ ಬೆಡ್ ಬ್ಲಾಕಿಂಗ್ ದಂಧೆಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಲಾಗಿದೆ. ಖಾಲಿ ಇದ್ದರೂ ಫುಲ್ ಆಗಿವೆ ಎನ್ನುವ ಖಾಸಗಿ ಆಸ್ಪತ್ರೆಯವರ ಆಟಕ್ಕೆ ಬ್ರೇಕ್ ಹಾಕಲಾಗಿದೆ. ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿಯೂ ಖಾಲಿ ಇದ್ದರೂ ಕೇವಲ ಜನಪ್ರತಿನಿಧಿಗಳು ಮತ್ತು ದೊಡ್ಡ ದೊಡ್ಡವರ ಶಿಫಾರಸು ಮೇಲೆ ದೊರೆಯುತ್ತಿದ್ದ ಬೆಡ್‌ಗಳ ದಂಧೆಗೂ ಕಡಿವಾಣ ಹಾಕಿ, ಪಾರದರ್ಶಕತೆ ಕಾಪಾಡಲಾಗಿದೆ. ಇನ್ಮುಂದೆ ಬೆಡ್‌ಗಳ ಮಾಹಿತಿ ನಿಮ್ಮ ಅಂಗೈಯಲ್ಲಿ ಇರುವ ಮೊಬೈಲ್‌ನಲ್ಲಿ ದೊರೆಯುತ್ತದೆ.
ವಿಳಾಸ
http://koppal.nic.in/covid-19 ವೆಬ್ ತಡಕಾಡಿದರೇ ನಿಮಗೆ ಕೊಪ್ಪಳ ಜಿಲ್ಲಾದ್ಯಂತ ಇರುವ ನೋಂದಾಯಿದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಬೆಡ್‌ಗಳ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಇದಕ್ಕಿಂತ ಸುಲಭ ಎಂದರೆ ಫೋಟೋದಲ್ಲಿರುವ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿದರೂ ನಿಮಗೆ ಸುಲಭವಾಗಿ ಮಾಹಿತಿ ದೊರೆಯುತ್ತದೆ.
ಎಲ್ಲೆಲ್ಲಿ ಬೆಡ್‌ಗಳು ಖಾಲಿ ಇವೆ ಎನ್ನುವ ಕುರಿತು ಪಾರದರ್ಶಕತೆ ಇರಲಿ ಎನ್ನುವ ಕಾರಣಕ್ಕಾಗಿಯೇ ವೆಬ್‌ನಲ್ಲಿಯೇ ಮಾಹಿತಿ ಹಾಕಲಾಗಿದೆ. ಇದಕ್ಕೆ ಪೂರಕವಾಗಿ ಕ್ಯೂಆರ್‌ಕೋಡ್ ಸಹ ಇದ್ದು, ಸ್ಕ್ಯಾನ್ ಮಾಡಿಯೂ ನೋಡಿಕೊಳ್ಳಬಹುದು. ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಲಾಗಿದೆ ಎಂದು ಕೊಪ್ಪಳ ಎಡಿಸಿ ಎಂ.ಪಿ. ಮಾರುತಿ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona