ಮದ್ಯ ಮಾರಾಟಕ್ಕೆ ಗ್ರೀನ್‌ ಸಿಗ್ನಲ್‌: ಆದಾಯ ಹೆಚ್ಚಿಸಿಕೊಳ್ಳಲು ಆರೇಂಜಿಗೆ ಇಳಿದ ಅಬಕಾರಿ..!

By Kannadaprabha NewsFirst Published May 3, 2020, 12:45 PM IST
Highlights

ಮದ್ಯ ಮಾರಾಟಕ್ಕೆ ಅನುಕೂಲ: ಸರ್ಕಾರದ ಆದಾಯಕ್ಕೆ ಪ್ರತಿಕೂಲ|ರೆಡ್ ಝೋನ್‌ನಿಂದ ಆರೆಂಜಿನ ಹಿಂದೆ ಅಬಕಾರಿ ಅಜೆಂಡಾ| ವಾರ್ಷಿಕ ಲೈಸೆನ್ಸ್ ನವೀಕರಣ ಈ ತಿಂಗಳು ಜೂನ್ ಅಂತ್ಯದ ಸಮಯ|
 

ಆನಂದ್ ಎಂ. ಸೌದಿ

ಯಾದಗಿರಿ(ಮೇ.03):  ಮದ್ಯ ಮಾರಾಟಕ್ಕೆ ಕೊನೆಗೂ ಅನುಮತಿ ನೀಡಿದ ರಾಜ್ಯ ಸರ್ಕಾರಕ್ಕೆ ಈ ಬಾರಿ ಡಬ್ಬಲ್ ಆದಾಯದ ನಿರೀಕ್ಷೆಯಿದೆ ಎನ್ನಲಾಗಿದೆ. ಮೂರನೇ ಹಂತದ ಲಾಕ್‌ಡೌನ್ ವಿಸ್ತರಣೆಯ ಮಧ್ಯೆಯೂ ಗ್ರೀನ್ ಹಾಗೂ ಆರೆಂಜ್ ಝೋನ್‌ಗಳಲ್ಲಿ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮಧ್ಯೆ, ಸೋಂಕು ಇನ್ನೂ ಹಸಿರಾಗಿರುವ ಪ್ರದೇಶಗಳಲ್ಲಿಯೂ ರೆಡ್ ಝೋನ್‌ಗಳನ್ನು ಸರ್ಕಾರ ‘ಆರೆಂಜ್ ಝೋನ್’ ಮಾಡಿದ ಹಿಂದೆ ಅಬಕಾರಿ ಅಜೆಂಡಾ ಅಡಗಿರುವುದು ಸುಳ್ಳೇನಲ್ಲ ಎನ್ನುವ ಮಾತುಗಳು ಮದ್ಯ ಮಾರಾಟಗಾರರ ವಲಯದಲ್ಲಿ ಚಾಲ್ತಿಯಲ್ಲಿದೆ.

ಶುಕ್ರವಾರ ಕೇಂದ್ರ ಸರ್ಕಾರ ಮೂರನೇ ಹಂತದ ಲಾಕ್ ಡೌನ್ ಘೋಷಣೆ ಮಾಡಿದ ನಂತರ, ಮದ್ಯಪ್ರಿಯರ ಮೊಗದಲ್ಲಿ ನೆಮ್ಮದಿ ಮೂಡಿಸಿತ್ತು. ಗ್ರೀನ್ ಹಾಗೂ ಆರೆಂಜ್ ಝೋನ್‌ನಲ್ಲಿ ಮದ್ಯ ಮಾರಾಟಕ್ಕೆ (ಷರತ್ತುಗಳ ಅನ್ವಯ) ಅನುಮತಿಯ ಘೋಷಣೆ ಅನೇಕರ ಹುಬ್ಬೇರಿಸಿತ್ತು. ರೆಡ್ ಝೋನ್‌ನಲ್ಲಿರುವ ಕೆಲವು ಪ್ರದೇಶಗಳಲ್ಲಿ ಸಡಿಲಿಕೆ ಅಚ್ಚರಿ ಮೂಡಿಸಿತ್ತು.

ಕೊರೋನಾ ಭೀತಿ: ಹೂತಿದ್ದ ಬಾಲಕಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

ಲೆಕ್ಕಾಚಾರಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 10,470 ಎಲ್ಲ ತರಹದ ಮದ್ಯದಂಗಡಿಗಳಿವೆ. 3907 ವೈನ್ ಶಾಪ್‌ಗಳು (ಸಿಎಲ್-2), 232 ಕ್ಲಬ್‌ಗಳು (ಸಿಎಲ್-4), 1037 ಹೋಟೆಲ್ ಆಂಡ್ ಲಾಡ್ಜಿಂಗ್ (ಸಿಎಲ್-7), 3552 ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್-9) ಹಾಗೂ 705 ಎಂಎಸ್‌ಐಎಲ್ (11 ಸಿ) ಗಳ ಆದಾಯ ಸರ್ಕಾರದ ಬೊಕ್ಕಸಕ್ಕೆ ಸಹಕಾರಿಯಾಗಲಿದೆ. ಪ್ರತಿದಿನ ರಾಜ್ಯದಲ್ಲಿ 70 ಸಾವಿರ ಬೀಯರ್ ಬಾಕ್ಸ್‌ಗಳ ಮಾರಾಟವಾಗುತ್ತಿದ್ದು, 10 ಕೋಟಿ ರುಪಾಯಿಗಳ ದಿನದ ಆದಾಯವಿದೆ. ಇನ್ನು ಲಿಕ್ಕರ್ ಆದಾಯವೂ ಸಹ ಇದನ್ನು ಮೀರಿಸಿದೆ. ಲಾಕ್ ಡೌನ್ ಸಡಿಲಿಕೆ ನಂತರ ಇದು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.

ಅಲ್ಲದೆ, ಜೂನ್ ಮಾಸಾಂತ್ಯದಲ್ಲಿ ಲೈಸೆನ್ಸ್ ನವೀಕರಣ ಸಹ ಇರುವುದರಿಂದ ಒಟ್ಟು ಆದಾಯ ನಿರೀಕ್ಷೆಯೂ ಹೆಚ್ಚಿದೆ ಎನ್ನಲಾಗಿದೆ. ಸಿಎಲ್-2 ಅಂಗಡಿಗಳಿಗೆ ವಾರ್ಷಿಕ 4.65 ಲಕ್ಷ ರು.ಗಳು, ಸಿಎಲ್-7 ಅಂಗಡಿಗಳಿಗೆ 6.65 ಲಕ್ಷ ರು.ಗಳು, ಸಿಎಲ್-9ಗೆ 5 ಲಕ್ಷ ರು.ಗಳು, ಸಿಎಲ್-4ಗೆ ಅಂದಾಜು 5 ಲಕ್ಷ ರು.ಗಳು ಹಾಗೂ ಎಂಎಸ್‌ಐಎಲ್‌ಗೆ 80 ಸಾವಿರ ರುಗಳ ಅಂದಾಜಿದೆ.

ಹೀಗಾಗಿ, 10 ಸಾವಿರ ಅಂಗಡಿಗಳ ಒಮ್ಮೆಯ ನವೀಕರಣದಿಂದ ನೂರಾರು ಕೋಟ್ಯಂತರ ರುಪಾಯಿಗಳ ಆದಾಯ ಬರಲಿದೆ. ಗ್ರೀನ್ ಝೋನ್ ವ್ಯಾಪ್ತಿಯಲ್ಲಿನ ಯಾದಗಿರಿ ಜಿಲ್ಲೆಯಲ್ಲಿ 110 ಎಲ್ಲ ರೀತಿಯ ಮದ್ಯದಂಗಡಿಗಳಲ್ಲಿ ಲಾಭ ತಂದುಕೊಡಲಿದೆ. ರೆಡ್ ಝೋನ್‌ನಿಂದ ಆರೆಂಜ್ ಝೋನಿನ ಹಿಂದೆ ಅಬಕಾರಿ ಲಾಬಿಯೂ ಅಡಗಿತ್ತು ಅನ್ನೋ ಮಾತುಗಳಿಗೆ ಬರವಿಲ್ಲ.
 

click me!