
ದಾಂಡೇಲಿ: ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಕಚ್ಚಾ ವಸ್ತುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲೊಂದು ಸುಮಾರು ಎರಡೂವರೆ ಗಂಟೆಗಳ ಕಾಲ ರೈಲ್ವೆ ಗೇಟ್ ಬಳಿ ನಿಂತಿದ್ದ ಪರಿಣಾಮ, ಮಂಗಳವಾರ ದಾಂಡೇಲಿ–ಹಸನ್ಮಾಳ ಮಾರ್ಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಎದುರಿಸಿದರು.
ಗೂಡ್ಸ್ ರೈಲು ದೀರ್ಘ ಸಮಯ ಗೇಟ್ ಬಳಿ ನಿಂತಿದ್ದರಿಂದ ರೈಲ್ವೆ ಗೇಟ್ ಮುಚ್ಚಿದ ಸ್ಥಿತಿಯಲ್ಲೇ ಉಳಿಯಿತು. ಇದರಿಂದ ಹಸನ್ಮಾಳಕ್ಕೆ ತೆರಳುವ ಹಾಗೂ ಅಲ್ಲಿಂದ ದಾಂಡೇಲಿಗೆ ಆಗಮಿಸುವ ಎಲ್ಲಾ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಪರಿಣಾಮವಾಗಿ ರಸ್ತೆಯ ಎರಡೂ ಬದಿಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತು ಸಂಚಾರ ಅಸ್ತವ್ಯಸ್ತಗೊಂಡಿತು.
ಈ ಟ್ರಾಫಿಕ್ ಜಾಮ್‌ನಿಂದ ನರ್ಸರಿ, ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಸುಮಾರು ಎರಡೂವರೆ ಗಂಟೆಗಳ ಕಾಲ ನಡು ರಸ್ತೆಯಲ್ಲೇ ನಿಂತುಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು. ಪುಟ್ಟ ಮಕ್ಕಳು ಬಿಸಿಲಿನಲ್ಲೇ ವಾಹನದೊಳಗೆ ಕಾದು ಕೂರುವಂತಾಗಿ, ಪೋಷಕರಲ್ಲೂ ಆತಂಕ ಹೆಚ್ಚಾಯಿತು. ಅಲ್ಲದೆ ಪ್ರವಾಸಿಗರನ್ನು ಸಾಗಿಸುತ್ತಿದ್ದ ಬಸ್‌ಗಳಿಗೂ ದೀರ್ಘ ಕಾಲ ಕಾಯುವ ಅನಿವಾರ್ಯತೆ ಎದುರಾಯಿತು.
ಹಸನ್ಮಾಳ–ದಾಂಡೇಲಿ ನಡುವಿನ ಈ ಮಾರ್ಗದಲ್ಲಿ ದಿನನಿತ್ಯ ಪ್ರಯಾಣಿಸುವ ಸ್ಥಳೀಯರು, ಉದ್ಯೋಗಿಗಳು ಹಾಗೂ ವ್ಯಾಪಾರಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಮಯಕ್ಕೆ ಸರಿಯಾಗಿ ಗಮ್ಯಸ್ಥಾನ ತಲುಪಲು ಸಾಧ್ಯವಾಗದೆ ಜನರು ಪರದಾಡುವಂತಾಯಿತು.
ಈ ರೀತಿ ಗೂಡ್ಸ್ ರೈಲು ದೀರ್ಘ ಕಾಲ ಗೇಟ್ ಬಳಿ ನಿಂತು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುವ ಘಟನೆಗಳು ಮರುಕಳಿಸಬಾರದು ಎಂದು ಸ್ಥಳೀಯರಾದ ಜ್ಯೋತಿಬಾ ಪಾಟೀಲ್ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ರೈಲ್ವೆ ಇಲಾಖೆ ಹಾಗೂ ಸ್ಥಳೀಯ ಆಡಳಿತವು ಸಮನ್ವಯದಿಂದ ಕಾರ್ಯನಿರ್ವಹಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಚಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಈ ಘಟನೆ ದಾಂಡೇಲಿಯಲ್ಲಿ ರೈಲ್ವೆ ಗೇಟ್ ನಿರ್ವಹಣೆಯ ಕುರಿತಾಗಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದು, ಭವಿಷ್ಯದಲ್ಲಿ ಶಾಶ್ವತ ಪರಿಹಾರಕ್ಕೆ ಸಾರ್ವಜನಿಕರಿಂದ ಒತ್ತಡ ಹೆಚ್ಚುತ್ತಿದೆ.
ಬೆಂಗಳೂರು: ರೈಲು ಹಳಿ ಮೇಲೆ ಬಿಎಂಟಿಸಿ ಬಸ್ಸನ್ನು ಹಿಂದೆ ತೆಗೆದುಕೊಳ್ಳುವ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ ಬಸ್ ಜಖಂ ಆಗಿರುವ ಘಟನೆ ಸೋಮವಾರ ಕಾಡುಗೋಡಿ ಸಮೀಪದ ಸಾದರಮಂಗಲ ಬಳಿ ಸೋಮವಾರ ಬೆಳಗ್ಗೆ ನಡೆದಿದೆ. ಸಾದರಮಂಗಲ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಬಸ್ಸನ್ನು ಹಿಂದೆ ತೆಗೆದುಕೊಳ್ಳುವಾಗ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಬಸ್ನಲ್ಲಿ ಪ್ರಯಾಣಿಕರು ಇರಲಿಲ್ಲ. ಹೀಗಾಗಿ ನಡೆಯಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಸೋಮವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಸಾದರಮಂಗಲ ಡಿಪೋ 51ರ ಕೆಎ57 ಎಫ್6000 ನಂಬರ್ನ ಬಸ್ ಕಾಡುಗೋಡಿ ಬಸ್ ನಿಲ್ದಾಣಕ್ಕೆ ಹೋಗಬೇಕೆಂದು ಚಾಲಕ ರಿವರ್ಸ್ ತೆಗೆದುಕೊಳ್ಳಲು ರೈಲ್ವೆ ಪ್ಯಾರಲಲ್ ರಸ್ತೆಯ ರೈಲು ಹಳಿ ಮೇಲೆ ನುಗ್ಗಿಸಿದ್ದಾನೆ. ಈ ವೇಳೆ ಏಕಾಏಕಿ ಬಂದ ರೈಲು ಡಿಕ್ಕಿ ಹೊಡೆದಿದ್ದು ಬಸ್ ಹಿಂಭಾಗ ಸಂಪೂರ್ಣ ಜಖಂ ಆಗಿದೆ.
ಈ ಘಟನೆಯಲ್ಲಿ ಬಸ್ ನಿರ್ವಾಹಕ ಶ್ರೀನಿವಾಸ್ ಎಂಬುವರು ಗಾಯಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಮತ್ತು ಬಿಎಂಟಿಸಿ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಹೂಡಿ ಮತ್ತು ವೈಟ್‌ಫೀಲ್ಡ್ ರೈಲ್ವೆ ನಿಲ್ದಾಣದ ಮಧ್ಯೆ ಈ ಘಟನೆ ಜರುಗಿದ್ದು, ಈ ಸಂಬಂಧ ರೈಲ್ವೆ ಇಲಾಖೆಯ ಸೀನಿಯರ್ ಸೆಕ್ಷನ್ ಎಂಜಿನಿಯರ್ ಮುತ್ತು ಎಂಬುವರು ನೀಡಿದ ದೂರಿನನ್ವಯ ಬಸ್ ಚಾಲಕ ಷಣ್ಮುಗ ಎಂಬಾತ ವಿರುದ್ಧ ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.