2019 ರಲ್ಲಾದರೂ ರೈತರ ಬದುಕು ಹಸನಾಗಲಿ | 2018 ಕ್ಕೆ ವಿದಾಯ, ಹೊಸ ನಿರೀಕ್ಷೆಯೊಂದಿಗೆ 2019 ಕ್ಕೆ ಸ್ವಾಗತ, ನನೆಗುದಿಗೆ ಬಿದ್ದ ಕಾಮಗಾರಿಗೆ ಸಿಗಲಿ ಚಾಲನೆ
ಬೆಂಗಳೂರು (ಜ. 01): ನಿರಂತರ ಬರಗಾಲಗಳಿಂದ ಬೆಂದು ಬಸವಳಿದಿರುವ ಜಿಲ್ಲೆಯ ಬಹುಸಂಖ್ಯಾತ ರೈತರು ಕಹಿ ನೆನಪುಗಳೊಂದಿಗೆ 2018 ಕ್ಕೆ ಬೀಳ್ಕೊಟ್ಟು, ಹೊಸ ನಿರೀಕ್ಷೆ, ಹುರುಪಿನೊಂದಿಗೆ ಮುಂಬರುವ ದಿನಗಳಾದರೂ ಎಲ್ಲರ ಬಾಳಲ್ಲಿ ಸಿಹಿ ಬರಲಿ ಎಂಬ ಆಶಯದೊಂದಿಗೆ ಜಿಲ್ಲೆಯ ಜನತೆ 2019 ನೇ ಇಸ್ವಿಯನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.
ವರ್ಷವಿಡಿ ಬರಗಾಲ, ರೈತರ ಆತ್ಮಹತ್ಯೆಗಳಂತಹ ಅನೇಕ ಘಟನಾವಳಿಗಳು ರೈತರನ್ನು ಸಂಕಷ್ಟಕ್ಕೆ ನೂಕಿದೆ. ವರ್ಷ ಯಾವುದಾದರೇನು, ನಮ್ಮ ಸಮಸ್ಯೆ ಬಗೆಹರಿಯುವುದಿಲ್ಲ ಎಂಬ ಹತಾಶ ಮನೋಭಾವನೆ ರೈತ ವರ್ಗದಲ್ಲಿ ಬೇರೂರಿದೆ. ವರ್ಷ, ಇಸ್ವಿಗಳು, ಕ್ಯಾಲೆಂಡರ್ ಬದಲಾದ ತಕ್ಷಣ ನಮ್ಮ ಸಂಕಷ್ಟ ಸುಲಭವಾಗಿ ಬಗೆಹರಿದೀತು ಎಂಬ ನಿರೀಕ್ಷೆ ಬಹುತೇಕರಿಗಿಲ್ಲ. ಇದಕ್ಕೆ ಕಳೆದ ಅನೇಕ ವರ್ಷಗಳಲ್ಲಿ ಉಂಡ ಕಹಿ ಅನುಭವವೇ ಕಾರಣ ಎನ್ನಬಹುದು. ಆದರೂ ರೈತರ ಆಶಾವಾದ, ನಾಳಿನ ಬಗೆಗಿನ ಭರವಸೆಗಳು ಕಡಿಮೆಯಾಗಿಲ್ಲ.
ಇದೇ ಕಾರಣಕ್ಕೆ 2019 ನೇ ಇಸ್ವಿಯಲ್ಲಾದರೂ ರೈತರಿಗೆ ಸುಖಮಯ ವರ್ಷವಾಗಲಿ ಎಂಬ ನಿರೀಕ್ಷೆ ಎಲ್ಲರದ್ದಾಗಿದೆ. 2018 ರಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಕಾರ್ಯಗಳು 2019 ರಲ್ಲಾದರೂ ನೆರವೇರಲಿ ಎಂಬ ಆಶಾಭಾವನೆಯೊಂದಿಗೆ ನೂತನ ವರ್ಷಕ್ಕೆ ಕಾಲಿಡಬೇಕಿದೆ.
ಹೊಸ ವರ್ಷದ ನಿರೀಕ್ಷೆಗಳು:
ಬಹುವರ್ಷಗಳ ಜಿಲ್ಲೆಯ ಜನರ ಬೇಡಿಕೆಯಾದ ಮೆಡಿಕಲ್ ಕಾಲೇಜು ಕೇವಲ ಘೋಷಣೆಗೆ ಸೀಮಿತವಾಗಿದೆ. ಈ ವರ್ಷವಾದರೂ ಸರ್ಕಾರ ಅಗತ್ಯ ಅನುದಾನ ನೀಡಿ ಮೆಡಿಕಲ್ ಕಾಲೇಜು ಆರಂಭಕ್ಕೆ ನಾಂದಿ ಹಾಡಬೇಕಿದೆ. ಪ್ರತ್ಯೇಕ ಡಿಸಿಸಿ ಬ್ಯಾಂಕ್, ಪ್ರತ್ಯೇಕ ಹಾಲು ಒಕ್ಕೂಟ, ಮೆಕ್ಕೆಜೋಳ ಪಾರ್ಕ್, ನನೆಗುದಿಗೆ ಬಿದ್ದಿರುವ ತುಂಗಾ ಮೇಲ್ದಂಡೆ ಸೇರಿದಂತೆ ವಿವಿಧ ಏತ ನೀರಾವರಿ ಯೋಜನೆ ಕಾಮಗಾರಿಗಳನ್ನು ಇನ್ನಷ್ಟು ತ್ವರಿತಗೊಳಿಸಬೇಕಿದೆ.
ಹಾವೇರಿ ನಗರದಲ್ಲಿ ದಿನದ 24 ಗಂಟೆಗಳ ಕಾಲ ನೀರು ಪೂರೈಸುವ ಯೋಜನೆ ಅನುಷ್ಠಾನಗೊಳ್ಳುವ ನಿರೀಕ್ಷೆಯಿದೆ. ಸವಣೂರು ಏತ ನೀರಾವರಿ ಯೋಜನೆ, ರಾಣಿಬೆನ್ನೂರಿನಲ್ಲಿ ಮೆಗಾ ಮಾರ್ಕೆಟ್, ಸರ್ವಜ್ಞ ಪ್ರಾಧಿಕಾರ ಕಾರ್ಯಾರಂಭ, ಹಾವೇರಿ- ಗದಗ ರೈಲು ಮಾರ್ಗ ಸಮೀಕ್ಷೆ, ರೈಲು ನಿಲ್ದಾಣ ಮೇಲ್ದರ್ಜೆ, ಹಾವೇರಿ- ಕಾರವಾರ- ಕೈಗಾ ಹೆದ್ದಾರಿ ಯೋಜನೆ ಘೋಷಣೆಯಲ್ಲಿಯೇ ಉಳಿದಿದ್ದು ಜಾರಿಗೊಳ್ಳಬೇಕಿದೆ. ಹಾವೇರಿ ಹೆಗ್ಗೇರಿ ಕೆರೆಗೆ ಯುಟಿಪಿ ಕಾಲುವೆ ಮೂಲಕ ನೀರು ಹರಿಸುವಂತಾಗಬೇಕಿದೆ.
ಸ್ಪೈಸ್ ಪಾರ್ಕ್, ತೋಟಗಾರಿಕೆ ಕಾಲೇಜು ಈ ವರ್ಷವಾದರೂ ಕಾರ್ಯಾರಂಭವಾಗಬೇಕಿದೆ. ಇಸ್ರೇಲ್ ಮಾದರಿ ಕೃಷಿ ಪದ್ಧತಿ ರೈತರಿಗೆ ತಲುಪಬೇಕಿದೆ. ವಿಮೆ, ಪರಿಹಾರ ಶೀಘ್ರ ದೊರಕಲಿ: ಕಳೆದ ನಾಲ್ಕೆದು ವರ್ಷಗಳಿಂದ ನಿರಂತರವಾಗಿರುವ ರೈತರ ಹೋರಾಟಗಳು ಮತ್ತೆ ಈ ವರ್ಷವೂ ಮರುಕಳಿಸದಂತೆ ರೈತರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವ ಕೆಲಸ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಆಗಬೇಕಿದೆ. ಅದರ ಜತೆಗೆ ಈ ವರ್ಷವಾದರೂ ಮಳೆ ಬೆಳೆ ಸಕಾಲದಲ್ಲಿ ಆಗಿ ರೈತರ ಮೇಲೆ ಕೃಪೆ ತೋರಿ ಅವರ ಬದುಕು ಹಸನಾಗುವ ಆಶಯ ಹೊಂದಲಾಗಿದೆ.
ಬೆಳೆ ವಿಮೆ, ಬೆಳೆ ನಷ್ಟ ಪರಿಹಾರಗಳಿಗಾಗಿ ರೈತರು ಬೀದಿಗಿಳಿದು ಹೋರಾಟ ನಡೆಸುವ ಪರಿಪಾಠ ನಿಲ್ಲಬೇಕಿದೆ. ಅದಕ್ಕಾಗಿ ಕಾಲಮಿತಿಯಲ್ಲಿ ರೈತರಿಗೆ ಸಿಗಬೇಕಾದ ಸೌಲಭ್ಯ ದೊರೆಯಬೇಕು. ಪ್ರತಿವರ್ಷ ಅಪಾರ ನಿರೀಕ್ಷೆಗಳೊಂದಿಗೆ ಹೊಸ
ವರ್ಷಕ್ಕೆ ಕಾಲಿಡುವುದು ಸಹಜ. ಆದರೆ ಆ ನಿರೀಕ್ಷೆಗಳು ಹಾಗೆಯೇ ಉಳಿದರೆ ನಿರಾಸೆಯಾಗುತ್ತದೆ.
- ನಾರಾಯಣ ಹೆಗಡೆ