ದೂರು ನೀಡಲು ಬಂದ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ಹಾವೇರಿ ಜಿಲ್ಲೆಯ ಬ್ಯಾಡಗಿ ಪೊಲೀಸ್ ಠಾಣೆಯ ಸಿಪಿಐಗೆ ಬಿಸಿ-ಬಿಸಿ ಕಜ್ಜಾಯ ಕೊಟ್ಟಿದ್ದಾರೆ.
ಹಾವೇರಿ, [ಡಿ.16]: ದೂರು ನೀಡಲು ಬಂದಿದ್ದ ಮಹಿಳೆಯೊಂದಿಗೆ ಸಿಪಿಐ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು,ಹಾವೇರಿ ಜಿಲ್ಲೆಯ ಬ್ಯಾಡಗಿ ಪೊಲೀಸ್ ಠಾಣೆ ಮುಂದೆಯೇ ಸಿಪಿಐಯನ್ನು ಹಿಡಿದು ಥಳಿಸಿರುವ ಘಟನೆ ನಡೆದಿದೆ.
ಗುತ್ತಲ ತಾಂಡಾದ ಶೇಖವ್ವ ಲಮಾಣಿ ಎಂಬುವಳು ತನ್ನೊಂದಿಗೆ ಸಿಪಿಐ ಚಿದಾನಂದ ಅವರು ಅಸಭ್ಯವಾಗಿ ವರ್ತಿಸಿದ್ದಾಗಿ ಆರೋಪಿಸಿದ್ದು, ಕುಟುಂಬಸ್ಥರು ಆಕ್ರೋಶಗೊಂಡು ಪೊಲೀಸ್ ಠಾಣೆ ಮುಂದೆಯೇ ಸಿಪಿಐ ಶರ್ಟ್ ಹಿಡಿದು ಎಳೆದಾಡಿದ್ದಾರೆ.
ನಡೆದಿದ್ದೇನು?
ತಂದೆ ತಾಯಿಗೆ ಕಿರುಕುಳ ನೀಡುತ್ತಿದ್ದ ಸಹೋದರ ನಾಗರಾಜನಿಗೆ ಬುದ್ಧಿವಾದ ಹೇಳುವಂತೆ ದೂರು ನೀಡಲು ಶೇಖವ್ವ ಠಾಣೆಗೆ ಬಂದಿದ್ದಳು. ಈ ವೇಳೆ ಸಿಪಿಐ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಯನ್ನು ಮಂಚಕ್ಕೆ ಕರೆದಿದ್ದಾನೆ ಎನ್ನಲಾಗಿದೆ.
ಇದ್ರಿಂದ ಆಕ್ರೋಶಗೊಂಡ ಶೇಖವ್ವ ಹಾಗೂ ಆಕೆಯ ಕಡೆಯವರು ಠಾಣೆಗೆ ನುಗ್ಗಿ ಸಿಪಿಐಯನ್ನು ಹಿಡಿದು ಥಳಿಸಿದ್ದಾರೆ. ಆದರೆ ಅನುಚಿತ ವರ್ತನೆಯ ಆರೋಪವನ್ನು ಅಲ್ಲಗಳೆದಿರುವ ಸಿಪಿಐ ಚಿದಾನಂದ ಅವರು, ಘಟನೆ ಸಂಬಂಧ ಶೇಖವ್ವ ಸೇರಿ ಐವರ ಮೇಲೆ ಹಲ್ಲೆ ಆರೋಪದಡಿ ದೂರು ದಾಖಲಿಸಿದ್ದಾರೆ.