ಭಾನುವಾರ ಇಡೀ ದಿನ ಶಿವಮೊಗ್ಗ ಜಿಲ್ಲೆಯ ಜನರು ಮನೆಯಿಂದ ಹೊರಬರದೆ ತಮಗೆ ತಾವೇ ದಿಗ್ಬಂಧನ ವಿಧಿಸಿಕೊಳ್ಳುವ ಮೂಲಕ ಕೊರೋನಾ ವಿರುದ್ದದ ಹೋರಾಟಕ್ಕೆ ಕೈಜೋಡಿಸಿದರು. ಜೂನ್ 5ರ ಭಾನುವಾರ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಕಂಡು ಬಂದಿದ್ದು ಹೇಗೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜು.06): ಕೊರೋನಾ ನಿಯಂತ್ರಣ ಸಲುವಾಗಿ ಸರ್ಕಾರದ ಸೂಚನೆಯಂತೆ ಭಾನುವಾರದ ಲಾಕ್‌ಡೌನ್‌ಗೆ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಅವಶ್ಯಕ ವಸ್ತುಗಳ ಮಾರಾಟ ಹೊರತುಪಡಿಸಿ ಎಲ್ಲವೂ ಬಂದ್ ಆಗಿದ್ದವು. ಜನರು ಅವಶ್ಯಕ ವಸ್ತುಗಳ ಖರೀದಿಗೆ ಓಡಾಡುವುದನ್ನು ಹೊರತುಪಡಿಸಿ ಅನಾವಶ್ಯಕವಾಗಿ ಸಂಚರಿಸುತಿದ್ದದು ಕಡಿಮೆ ಇತ್ತು. ಆದರೆ ಕೆಲವು ಬಡಾವಣೆಗಳಲ್ಲಿ ಕೆಲವು ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಅಗತ್ಯ ವಸ್ತುಗಳಾದ ಔಷಧ, ಹಾಲು, ಪತ್ರಿಕೆ, ಪೆಟ್ರೋಲ್ ಬಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಹೂವು, ಹಣ್ಣು, ತರಕಾರಿ ಮಾರುಕಟ್ಟೆ, ಮದ್ಯದಂಗಡಿ, ಸಲೂನ್, ಚಿನ್ನಾಭರಣ ಮಳಿಗೆ ಸೇರಿದಂತೆ ಎಲ್ಲ ಬಗೆಯ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ ಸಂಪೂರ್ಣ ಸ್ಥಗಿತವಾಗಿತ್ತು.
ಶಿವಮೊಗ್ಗದಲ್ಲಿ 8 ಹೊಸ ಕೋವಿಡ್ 19 ಪ್ರಕರಣ ಪತ್ತೆ
ನಗರದಲ್ಲಿ ಮಟನ್, ಮೀನು ಹಾಗೂ ಚಿಕನ್ ಸ್ಟಾಲ್‌ಗಳಿಗೆ ಜನರ ಭೇಟಿ ಎಂದಿನಂತೆ ಇತ್ತು. ನಗರದ ಹಲವೆಡೆ ಮಟನ್ ಸ್ಟಾಲ್‌ಗಳಲ್ಲಿ ಸಾರ್ವಜನಿಕರೂ ಅಂತರ ಕಾಯ್ದುಕೊಂಡು ಮಟನ್, ಮೀನು ಹಾಗೂ ಚಿಕನ್ ಖರೀದಿಸಿದರು.ದಿನಸಿ ಅಂಗಡಿ, ಹಾಲಿನ ಮಳಿಗೆಗಳು, ತರಕಾರಿ ಅಂಗಡಿಗಳು ಬೆಳಗ್ಗೆ ತೆರೆದಿದ್ದವು.
ಭಾನುವಾರ ಬೆಳಗ್ಗೆ ಕೆಲ ಹೊತ್ತು ಬೆರಳೆಣಿಕೆಯಷ್ಟು ವಾಹನ ಸಂಚಾರ ಕಂಡುಬಂದಿತು. ಉಳಿದಂತೆ ಪೊಲೀಸರ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಯಾರೂ ಹೊರಬರುವ ಪ್ರಯತ್ನ ಮಾಡಲಿಲ್ಲ. ಒಂದೆರಡು ಏರಿಯಾಗಳಲ್ಲಿ ಅಂಗಡಿ ತೆರೆಯಲು ಮುಂದಾದರೂ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.
ದಿನಸಿ ಅಂಗಡಿಗಳು, ಎಪಿಎಂಸಿ ಮಾರುಕಟ್ಟೆ, ಆಟೋ ಸೇವೆ ಬಂದ್ ಆಗಿದ್ದವು. ಹೀಗಾಗಿ, ನಿತ್ಯ ಸಂಚಾರ ಜನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ನಗರದ್ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿತ್ತು. ಪಾರ್ಕ್ಗಳೂ ಮುಚ್ಚಿದ್ದವು. ತುರ್ತುಸೇವೆ ಹಾಗೂ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಾಪಾರ, ವ್ಯವಹಾರಕ್ಕೆ ಅವಕಾಶ ಇರಲಿಲ್ಲ. ಹೀಗಾಗಿ ಮಾರುಕಟ್ಟೆಸಂಪೂರ್ಣ ಬಂದ್ ಆಗಿತ್ತು.
ಇಡೀ ದಿನ ಮನೆಯಿಂದ ಹೊರಬರದೆ ತಮಗೆ ತಾವೇ ದಿಗ್ಬಂಧನ ವಿಧಿಸಿಕೊಳ್ಳುವ ಮೂಲಕ ಕೊರೋನಾ ವಿರುದ್ದದ ಹೋರಾಟಕ್ಕೆ ಜನರು ಕೈಜೋಡಿಸಿದರು. ನಗರದ ಪ್ರಮುಖ ವ್ಯಾಪಾರ-ವಹಿವಾಟು ಕೇಂದ್ರಗಳಾದ ಗಾಂಧಿಬಜಾರ್, ದುರ್ಗಿಗುಡಿ, ಸವಳಂಗ ರಸ್ತೆ, ನೆಹರು ರಸ್ತೆ ಬಿ.ಹೆಚ್. ರಸ್ತೆ, ಲಕ್ಷ್ಮೀ ಟಾಕೀಸ್ ವೃತ್ತ, ಪೊಲೀಸ್ ಚೌಕಿ ಸೇರಿದಂತೆ ಎಲ್ಲೆಡೆ ವಾಹನ ಸಂಚಾರ ವಿರಳವಾಗಿತ್ತು. ಭಾನುವಾರ ಒಂದು ದಿನದ ಕೊರೋನ ಲಾಕ್ ಡೌನ್ ಗೆ ಜನತೆ ಬೆಂಬಲ ನೀಡಿದರು.
ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ವಾಹನ ಸಂಚಾರ ತಡೆಗೆ ಬ್ಯಾರಿಕೇಡ್ ಹಾಕಲಾಗಿತ್ತು. ಬಸ್ ಸ್ಟಾಂಡ್ ವೃತ್ತ, ಎಎ ವೃತ್ತ, ಗೋಪಿ ವೃತ್ತ, ಮಹಾವೀರ ವೃತ್ತ, ಜೈಲ್ ಸರ್ಕಲ್, ಶಿವಮೂರ್ತಿ ಸರ್ಕಲ್ ಸೇರಿದಂತೆ ನಗರದ ವಿವಿಧೆಡೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು.
ರಸ್ತೆಗೆ ಇಳಿಯದ ಕೆಎಸ್‌ಆರ್ಟಿಸಿ :
ಭಾನುವಾರ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಬಸ್ ನಿಲ್ದಾಣ ಪ್ರಯಾಣಿಕರಿಗೆ ಬಿಕೋ ಎನ್ನುತ್ತಿತ್ತು. ಕೆಎಸ್‌ಆರ್ಟಿಸಿ ಬಸ್ ಸಂಚಾರ ಇರುವುದಿಲ್ಲ ಎನ್ನುವುದನ್ನು ಅರಿತಿದ್ದ ಪ್ರಯಾಣಿಕರು ಬಸ್ ನಿಲ್ದಾಣದತ್ತ ಸುಳಿಯಲಿಲ್ಲ. ಖಾಸಗಿ ಬಸ್ ಸಂಚಾರ ಕೂಡ ಸ್ಥಗಿತಗೊಂಡಿತ್ತು.
ತರಕಾರಿ ಮಾರುಕಟ್ಟೆಗೆ ಬೆಳಗ್ಗೆ ನುಗ್ಗಿದ ಜನ:
ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಜನ ಮುಂಜಾನೆ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಕೊನೆಗೆ ಪೊಲೀಸರು ಬಂದು ಎಲ್ಲರನ್ನೂ ವಾಪಸ್ಸು ಕಳುಹಿಸಿದರು.