ದಸರಾ, ದೀಪಾವಳಿಗೆ ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್; ಬೆಂಗಳೂರು-ತಾಳಗುಪ್ಪ ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ..!

Published : Oct 17, 2026, 05:01 PM IST
Talaguppa BY Raghavendra

ಸಾರಾಂಶ

ದಸರಾ ಮತ್ತು ದೀಪಾವಳಿ ಹಬ್ಬಗಳ ಸಾಲು ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಭಾರತೀಯ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಯಶವಂತಪುರ-ಶಿವಮೊಗ್ಗ ನಡುವೆ ಸಂಚರಿಸುವ ರೈಲನ್ನು ತಾತ್ಕಾಲಿಕವಾಗಿ ತಾಳಗುಪ್ಪದವರೆಗೆ ವಿಸ್ತರಿಸಲಾಗಿದೆ. ಇದರಿಂದ ಮಲೆನಾಡು ಭಾಗದ ಪ್ರಯಾಣಿಕರಿಗೆ ಹಬ್ಬದ ಸಂದರ್ಭದಲ್ಲಿ ಸುಲಭ ಸಂಚಾರಕ್ಕೆ ಅನುಕೂಲವಾಗಲಿದೆ.

Yeshwanthpur-Shivamogga Train Extended to Talaguppa | ನಾಡಿನಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ನವರಾತ್ರಿ ಆಚರಿಸಲಾಗುತ್ತಿದೆ. ದಸರಾ ಹಾಗೂ ದೀಪಾವಳಿಗೆ ಸಾಲು ಸಾಲು ರಜೆಗಳಿರುವುದರಿಂದ ಬೆಂಗಳೂರಿನಿಂದ ಶಿವಮೊಗ್ಗ, ತಾಳಗುಪ್ಪ, ಸಿದ್ದಾಪುರ, ಸಿರಸಿ ಕಡೆ ಪ್ರಯಾಣ ಮಾಡುವವರಿಗೆ ಇದೀಗ ಭಾರತೀಯ ರೈಲ್ವೆ ಇಲಾಖೆ ಗುಡ್‌ ನ್ಯೂಸ್ ಕೊಟ್ಟಿದೆ. ಈ ಸಂತಸದ ಸುದ್ದಿಯನ್ನು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಹಂಚಿಕೊಂಡಿದ್ದಾರೆ. ವಾರದಲ್ಲಿ ಮೂರು ದಿನ ಸಂಚರಿಸುತ್ತಿದ್ದ ಶಿವಮೊಗ್ಗ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16581/16582) ಸೇವೆಗಳನ್ನು ತಾಳಗುಪ್ಪದವರೆಗೆ ತಾತ್ಕಾಲಿಕವಾಗಿ ವಿಸ್ತರಿಸಲಾಗಿದೆ. ಇದು ರೈಲ್ವೆ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ.

ಹೌದು, ಪ್ರತಿನಿತ್ಯ ಮೈಸೂರು-ತಾಳಗುಪ್ಪ ರೈಲು ಓಡಾಡುತ್ತಿದೆಯಾದರೂ, ಹಬ್ಬದ ಕಾರಣಗಳಿಂದ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಹೀಗಿರುವಾಗ ಶಿವಮೊಗ್ಗ- ಯಶವಂತಪುರ ಹಾಗೆಯೇ ಯಶವಂತಪುರ-ಶಿವಮೊಗ್ಗ ನಡುವೆ ವಾರದಲ್ಲಿ ಮೂರು ದಿನ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್ ಟ್ರೈನ್ ಅನ್ನು ಇದೀಗ ತಾತ್ಕಾಲಿಕವಾಗಿ ತಾಳಗುಪ್ಪದವರೆಗೂ ವಿಸ್ತರಿಸಲಾಗಿದೆ. ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಮಲೆನಾಡಿನ ಭಾಗದ ಪ್ರಯಾಣಿಕರಿಗೆ ಸುಲಭ ಸಂಚಾರ ಕಲ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ದಸರಾ-ದೀಪಾವಳಿ ನಡುವೆ 11 ಸಂಚಾರ:

ದಸರಾ, ದೀಪಾವಳಿಯಲ್ಲಿ ರೈಲ್ವೆ ಪ್ರಯಾಣಿಕರ ಸಂಚಾರ ದಟ್ಟನೆಯನ್ನು ನಿರ್ವಹಿಸಲು ಇದೀಗ ಯಶವಂತಪುರದಿಂದ ಶಿವಮೊಗ್ಗದವರೆಗೆ ಇದ್ದ ರೈಲ್ವೆ ಪ್ರಯಾಣವನ್ನು ಇದೀಗ ತಾಳಗುಪ್ಪವರೆಗೂ ವಿಸ್ತರಿಸಲಾಗಿದೆ. ಅಕ್ಟೋಬರ್ 18, 20, 22, 25, 27, 29 ಹಾಗೂ ನವೆಂಬರ್ 03, 05, 08, 10, 12ರ ವರೆಗೆ ತಾತ್ಕಾಲಿಕವಾಗಿ ವಾರಕ್ಕೆ ಮೂರು ದಿನ ಈ ರೈಲು ಸಂಚಾರವನ್ನು ವಿಸ್ತರಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಖಚಿತಪಡಿಸಿದ್ದಾರೆ.

ಪ್ರಮುಖ ಸಮಯ:

ರಾತ್ರಿ 12.15ಕ್ಕೆ ಯಶವಂತಪುರದಿಂದ ಹೊರಡುವ ಈ ಟ್ರೈನ್ ಬೆಳಗ್ಗೆ 6.05ಕ್ಕೆ ಶಿವಮೊಗ್ಗ ತಲುಪಲಿದೆ. ಇದಾದ ಬಳಿಕ ಅರಸಾಳು, ಆನಂದಪುರಂನಲ್ಲೂ ಸ್ಟಾಪ್ ನೀಡಲಿದ್ದು, ಸಾಗರ ಮಾರ್ಗವಾಗಿ ಬೆಳಗ್ಗೆ 9 ಗಂಟೆಗೆ ತಾಳಗುಪ್ಪ ತಲುಪಲಿದೆ. ಇನ್ನು ತಾಳಗುಪ್ಪದಿಂದ ರಾತ್ರಿ 10 ಗಂಟೆಗೆ ಹೊರಡಲಿರುವ ಈ ಟ್ರೈನ್ 11.50ಕ್ಕೆ ಶಿವಮೊಗ್ಗಕ್ಕೆ ತಲುಪಲಿದೆ. ಇದಾದ ಬಳಿಕ ಮುಂಜಾನೆ ಯಶವಂತಪುರಕ್ಕೆ ಬರಲಿದೆ.

ಶಿವಮೊಗ್ಗ ಹಾಗೂ ಮಲೆನಾಡಿನ ಜನತೆಯ ಸುಲಭ ಪ್ರಯಾಣಕ್ಕಾಗಿ ಸ್ಪಂದಿಸಿ ಈ ತಾತ್ಕಾಲಿಕ ವಿಸ್ತರಣೆ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ, ಕೇಂದ್ರ ರೈಲ್ವೇ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಜಿ, ಕೇಂದ್ರ ರೈಲ್ವೇ ರಾಜ್ಯ ಸಚಿವ ಶ್ರೀ ವಿ. ಸೋಮಣ್ಣ ಅವರಿಗೆ ಹಾಗೂ ನೈಋತ್ಯ ರೈಲ್ವೇ ಅಧಿಕಾರಿಗಳಿಗೆ ಸಂಸದ ಬಿ.ವೈ. ರಾಘವೇಂದ್ರ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

PREV
Read more Articles on
click me!

Recommended Stories

ಕುಮಾರಸ್ವಾಮಿ ಹೋರಾಟದಿಂದ ಸಂಕಷ್ಟಕ್ಕೆ ಸಿಲುಕಿದ ಸರ್ಕಾರ, ಡಿಜಿ ಕಚೇರಿ ಮುಂದೆ ಭಾರಿ ಪ್ರತಿಭಟನೆ
Farmers Protest: ಸಮಿತಿ ರಚನೆ ಎಂದರೆ ಹೋರಾಟದ ಅವಸಾನ! ರಾಮಕೃಷ್ಣ ಹೆಗಡೆ ಮಾತು ನೆನೆಪಿಸಿ ದಿಂಗಾಲೇಶ್ವರ ಶ್ರೀ ಮಾರ್ಮಿಕ ಮಾತು!