
ದಾವಣಗೆರೆ: ಕೊನೆಗೂ ರಾಜ್ಯ ಸರ್ಕಾರ ದಾವಣಗೆರೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹೋರಾಟಕ್ಕೆ ಮಣಿದಿದೆ. ಇಂದು ರಾತ್ರಿಯಿಂದಲೇ ಭದ್ರಾ ಡ್ಯಾಂನಿಂದ ಅಚ್ಚುಕಟ್ಟಿನ ಕಾಲುವೆಗಳಿಗೆ 15 ದಿನ ನೀರು ಹರಿಸಲು ಕರ್ನಾಟಕ ನೀರಾವರಿ ನಿಗಮ ನಿಯಮಿತ ಆದೇಶ ನೀಡಿದೆ.
ಭದ್ರಾ ಬಲದಂಡೆ, ಎಡದಂಡೆ, ಗೊಂದಿ ನಾಲೆಯ ವಿತರಣಾ ನಾಲೆ, ಸಿದ್ಧನಾಲೆಗಳ ಮೂಲಕ ನೀರು ಹರಿಸಲು ಸೂಚಿಸಲಾಗಿದೆ. ಆದೇಶದ ಜೊತೆಗೆ ಕುಡಿಯುವ ನೀರು, ಅಂತರ್ಜಲ ವೃದ್ಧಿ, ಕೆರೆ ಕಟ್ಟೆ ತುಂಬಿಸಲು ಆ ನೀರು ಸದ್ಭಳಕೆ ಆಗಬೇಕು ಎಂದು ಷರತ್ತು ಕೂಡ ವಿಧಿಸಲಾಗಿದೆ. ಸರ್ಕಾರದ ಆದೇಶದಂತೆ ಇಂದು ಮಧ್ಯರಾತ್ರಿ 12ರಿಂದ ಅಕ್ಟೋಬರ್ 2ರವರೆಗೆ ಕಾಲುವೆಗಳಿಗೆ ನೀರು ಬಿಡುಗಡೆ ಆಗಲಿದೆ.
ಹಾಗೆಯೇ ಅನಧಿಕೃತವಾಗಿ ನೀರೆತ್ತದಂತೆ, ಬೆಳೆಗಳಿಗೆ ಉಪಯೋಗಿಸದಂತೆ ಖಡಕ್ ಆದೇಶ ನೀಡಲಾಗಿದೆ. ಹಲವು ದಿನಗಳಿಂದ ಭದ್ರಾ ಬಲದಂಡೆ ನಾಲೆಗೆ ನೀರು ಹರಿಸಲು ರೈತರು ಆಗ್ರಹಿಸಿದ್ದರು. ನಿನ್ನೆಯಷ್ಟೇ ತೇಜಸ್ವಿ ಪಟೇಲ್ ನೇತೃತ್ವದಲ್ಲಿ ಬೃಹತ್ ಟ್ರ್ಯಾಕ್ಟರ್ ಮೂಲಕ ಪ್ರತಿಭಟನೆ ನಡೆಸಿದ್ದರು. ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲೂ ಪ್ರತಿಭಟನೆ ಆಗಿತ್ತು. ಕೊನೆಗೂ ರೈತರ ಪ್ರತಿಭಟನೆಗೆ ಮಣಿದು ಕಾಲುವೆಗಳಿಗೆ ನೀರು ಬಿಡುಗಡೆಗೆ ಸರ್ಕಾರ ಆದೇಶ ನೀಡಿದೆ.
ವಿಷಯ: ಭದ್ರಾ ಬಲದಂಡೆ, ಎಡದಂಡೆ ಮತ್ತು ಗೊಂಡಿ ನಾಲೆಯ ವಿತರಣಾ ನಾಲೆಗಳು ಹಾಗೂ ಸಿದ್ದನಾಲೆಗಳ ಮೂಲಕ ನೀರನ್ನು ಕೆರೆ ಮತ್ತು ಹಳ್ಳಕ್ಕೆ ಹರಿಸುವ ಕುರಿತು.
ಭದ್ರಾ ಜಲಾಶಯದ ಅಚ್ಚುಕಟ್ಟುದಾರರಿಗೆ ಹಾಗೂ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಪ್ರಸ್ತುತ 2024ರ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ನಿಗದಿತ ಮಳೆಯಾಗದೇ ಇರುವುದರಿಂದ ವಿತರಣಾ ನಾಲೆಗಳಿಗೆ ನೀರನ್ನು ಹರಿಸುವ ಮೂಲಕ ಈ ಭಾಗಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಗತ್ಯತೆ ಇರುವುದಾಗಿ ಅಚ್ಚುಕಟ್ಟು ಭಾಗದ ಮಾನ್ಯ ಶಾಸಕರುಗಳು ಹಾಗೂ ರೈತರು ಮತ್ತು ರೈತ ಮುಖಂಡರುಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದರಿಂದ ಮತ್ತು ಎಲ್ಲಾ ವಲಯ ಮತ್ತು ವಿತರಣಾ ನಾಲೆಗಳ ಮೂಲಕ ನೀರನ್ನು ಕೆರೆ ಮತ್ತು ಹಳ್ಳಕ್ಕೆ ನೀರನ್ನು ಹರಿಸಿದರೆ ತುಂಬಾ ಅನುಕೂಲಕರವಾಗಿದೆ ಎಂಬ ಅಭಿಪ್ರಾಯದ ವಿವರವಾದ ವರದಿಯನ್ನು ಮಾನ್ಯ ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ದಾವಣಗೆರೆ ಜಿಲ್ಲೆ ದಾವಣಗೆರೆ ರವರು ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ ವಿಕಾಸ ಸೌಧ, ಬೆಂಗಳೂರು ರವರಿಗೆ ಸಲ್ಲಿಸಿರುತ್ತಾರೆ.
ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸುವಂತೆ ಶಿವಮೊಗ್ಗ, ಭದ್ರಾವತಿ, ದಾವಣಗೆರೆ, ಶಾಂತಿಸಾಗರ, ಮಲೆಬೆನ್ನೂರು ಮತ್ತು ಇತರೆಡೆ ರೈತರು ಪ್ರತಿಭಟನೆ ನಡೆಸುತ್ತಿರುತ್ತಾರೆ.
ಅದರನ್ವಯ, ನೀರು ಹರಿಸುವ ಕುರಿತು ಸನ್ಮಾನ್ಯ ಜಲಸಂಪನ್ಮೂಲ ಸಚಿವರು, ಸನ್ಮಾನ್ಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮವಾಗಿ ಸನ್ಮಾನ್ಯ ಜಲಸಂಪನ್ಮೂಲ ಸಚಿವರು, ಭದ್ರಾ ಅಚ್ಚುಕಟ್ಟಿನ ಕಾಲುವೆಗಳಿಗೆ 15 ದಿವಸ ನೀರು ಹರಿಸುವಂತೆ ದಿನಾಂಕ 16.09.2024 ರಂದು ಮಾನ್ಯ ಮುಖ್ಯ ಇಂಜಿನಿಯರ್, ತುಂ.ಮೇ.ಯೋ ವಲಯ ಶಿವಮೊಗ್ಗ ಇವರಿಗೆ ದೂರವಾಣಿ ಮೂಲಕ ತಿಳಿಸಿರುತ್ತಾರೆ. ಮತ್ತು ದಿನಾಂಕ 17.09.2024 ರಂದು ವ್ಯವಸ್ಥಾಪಕ ನಿರ್ದೇಶಕರು, ಕನೀನಿನಿ, ಮುಖ್ಯ ಇಂಜಿನಿಯರ್ ಮತ್ತು ಅಧೀಕ್ಷಕ ಇಂಜಿನಿಯರ್ ರವರೊಂದಿಗೆ ಶ್ರೀ ಮಧು ಬಂಗಾರಪ್ಪ ಸನ್ಮಾನ್ಯ ಸಚಿವರು ಮತ್ತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು, ಚರ್ಚಿಸಿ ಸಹಮತಿಸಿರುವಂತೆ, ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ದಿನಾಂಕ:17.09.2024ರ ಮಧ್ಯರಾತ್ರಿ 12.00 ಗಂಟೆಯಿಂದ ದಿನಾಂಕ:02.10.2024 ರವರೆಗೆ ಕೆಳಕಂಡ ನಿಬಂಧನೆಗೊಳಪಟ್ಟು ನೀರನ್ನು ಹರಿಸಲಾಗುವುದು.
ಭದ್ರಾ ಅಚ್ಚುಕಟ್ಟು ಪ್ರದೇಶದ ಜನ ಜಾನುವಾರುಗಳ ಕುಡಿಯುವ ನೀರು, ಅಂತರ್ಜಲ ವೃದ್ಧಿ, ಕೆರೆ ಕಟ್ಟೆಗಳನ್ನು ತುಂಬಿಸಲು ನೀರು ಹರಿಸಲಾಗುತ್ತದೆ. ಹರಿಸುತ್ತಿರುವ ನೀರನ್ನು ಡಿಸೆಂಬರ್ 2024 ರವರೆಗೆ ಜನ ಜಾನುವಾರುಗಳ ಕುಡಿಯುವ ನೀರಿಗೆ ಕೊರತೆಯಾಗದಂತೆ ಸದ್ಬಳಕೆ ಮಾಡಿಕೊಳ್ಳುವುದು. ನೀರನ್ನು ಬೆಳೆಗಳಿಗೆ ಉಪಯೋಗಿಸುವಂತಿಲ್ಲ ಮತ್ತು ಅನಧಿಕೃತವಾಗಿ ನೀರೆತ್ತುವಂತಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಕಾಲುವೆ ಪಾತ್ರಗಳಲ್ಲಿ ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನಕರುಗಳನ್ನು ತೊಳೆಯುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಅಚ್ಚುಕಟ್ಟು ಭಾಗದ ಎಲ್ಲಾ ರೈತ ಬಾಂಧವರು ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.