ಹೋರಾಟಗಾರರ ತ್ಯಾಗ ಮುಂದಿನ ಪೀಳಿಗೆಗೆ ತಿಳಿಯಬೇಕು: 'ಕನ್ನಡಪ್ರಭ' ಪುರವಣಿ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ

Published : Sep 17, 2026, 05:45 PM IST
Janardhana Reddy

ಸಾರಾಂಶ

ಗಂಗಾವತಿಯಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ‘ಸುವರ್ಣ ನ್ಯೂಸ್’ ಮತ್ತು ‘ಕನ್ನಡಪ್ರಭ’ ಹೊರತಂದ ‘ಹೋರಾಟಗಾರರ ಇತಿಹಾಸದ ಕಲ್ಯಾಣ ಉತ್ಸವ’ ಪುರವಣಿಯನ್ನು ಶಾಸಕ ಜನಾರ್ದನ ರೆಡ್ಡಿ ಬಿಡುಗಡೆ ಮಾಡಿದರು.

ಗಂಗಾವತಿ (ಸೆ.17): 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ‘ಸುವರ್ಣ ನ್ಯೂಸ್’ ಮತ್ತು ‘ಕನ್ನಡಪ್ರಭ’ ಹೊರತಂದಿರುವ ‘ಹೋರಾಟಗಾರರ ಇತಿಹಾಸದ ಕಲ್ಯಾಣ ಉತ್ಸವ’ ಪುರವಣಿಯನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ಬಿಡುಗಡೆ ಮಾಡಿ, ಈ ಪ್ರಯತ್ನವನ್ನು ಶ್ಲಾಘಿಸಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ನಗರಸಭೆ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಆಯೋಜಿಸಿದ್ದ 79ನೇ ಕಲ್ಯಾಣ ಉತ್ಸವ ಸಮಾರಂಭದಲ್ಲಿ ಪುರವಣಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ ಸ್ಥಳೀಯ ಹೋರಾಟಗಾರರ ಇತಿಹಾಸವನ್ನು ದಾಖಲಿಸುವ ಕೆಲಸ ಶ್ಲಾಘನೀಯ ಎಂದರು.

ಹಿಂದೆ ಈ ದಿನವನ್ನು ‘ಹೈದರಾಬಾದ್ ವಿಮೋಚನಾ ದಿನಾಚರಣೆ’ ಎಂದು ಕರೆಯಲಾಗುತ್ತಿತ್ತು. ಇದೀಗ ಸರ್ಕಾರ ಇದನ್ನು ‘ಕಲ್ಯಾಣ ಉತ್ಸವ’ ಎಂದು ಬದಲಾಯಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹೋರಾಟಗಾರರ ಹೋರಾಟದ ಇತಿಹಾಸವನ್ನು ಸಮಗ್ರವಾಗಿ ದಾಖಲಿಸಿರುವ ‘ಕನ್ನಡಪ್ರಭ’ದ ಪುರವಣಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಜನಾರ್ದನ ರೆಡ್ಡಿ ಹೇಳಿದರು.

ನಿಜಾಮರ ವಿರುದ್ಧ ಹೋರಾಡಿದ ಗಂಗಾವತಿಯ ಮಹನೀಯರು

ಅಖಂಡ ಗಂಗಾವತಿ ತಾಲೂಕಿನಲ್ಲಿ, ಗಂಗಾವತಿ ಹಾಗೂ ನವಲಿ ಸೇರಿದಂತೆ ಹಲವು ಭಾಗಗಳ ಅನೇಕ ಹೋರಾಟಗಾರರು ನಿಜಾಮರ ಆಡಳಿತದ ವಿರುದ್ಧ ದಂಗೆ ಎದ್ದು ಹೋರಾಟ ನಡೆಸಿದ್ದರು. ಈ ಹೋರಾಟದಲ್ಲಿ ಹಲವರು ಸೆರೆಮನೆವಾಸವನ್ನೂ ಅನುಭವಿಸಿದ್ದರು ಎಂದು ಅವರು ಸ್ಮರಿಸಿದರು.

ಗಂಗಾವತಿಯ ದಿವಂಗತ ರಾಮಭಟ್ ಜೋಷಿ, ಡಾ. ಎಚ್.ಕೆ. ರಾಮರಾವ್, ಗೌಳಿ ಮಹಾದೇವಪ್ಪ, ವೆಂಕೋಬಾಚಾರ ಬೋವಿನಾಳ, ಅಯೋಧ್ಯ ರಾಮಾಚಾರ, ಗುರುರಾಜರಾವ್ ಬೆಳ್ಳುಬ್ಬಿ, ನರಸಿಂಹಾಚಾರ ನವಲಿ, ರಾಘವೇಂದ್ರರಾವ್ ಚೆಳ್ಳೂರು ಸೇರಿದಂತೆ ಅನೇಕ ಮಹನೀಯರು ಹೋರಾಟದ ಮುಂಚೂಣಿಯಲ್ಲಿದ್ದರು. ರಜಾಕಾರರ ವಿರುದ್ಧ ಚಳುವಳಿ ನಡೆಸಿದ ಇಂತಹ ಹೋರಾಟಗಾರರ ತ್ಯಾಗ ಮತ್ತು ಹೋರಾಟದ ಇತಿಹಾಸವನ್ನು ದಾಖಲಿಸಿರುವುದು ಮುಂದಿನ ಪೀಳಿಗೆಗೆ ಮಹತ್ವದ ದಾಖಲೆ ಆಗಲಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವಸಂತಕುಮಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಇಸ್ಮಾಯಿಲ್ ಖಾದ್ರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ್, ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಗೊಂಡಬಾಳ, ‘ಕನ್ನಡಪ್ರಭ’ ವರದಿಗಾರ ರಾಮಮೂರ್ತಿ ನವಲಿ ಹಾಗೂ ಜಯಶ್ರೀ ಹಕ್ಕಂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

Bengaluru: GST ಕಚೇರಿಯಲ್ಲಿ ಲೋಕಾಯುಕ್ತರ ಮಹತ್ವದ ಬೇಟೆ, ಲಕ್ಷ ಲಕ್ಷ ಲಂಚ ಸ್ವೀಕರಿಸುತ್ತಿದ್ದ ಸೂಪರಿಂಟೆಂಡೆಂಟ್ ಅರೆಸ್ಟ್
ನೆಲಮಂಗಲದ ಮಂಡಿಗೆರೆಯಲ್ಲಿ ಕ್ರಿ.ಶ.1050ರ ಚೋಳ ಸಾಮ್ರಾಜ್ಯದ ರಾಜಾಧಿರಾಜನ ಶಾಸನ ಪತ್ತೆ!