ನಿತ್ಯ ಹೊಟ್ಟೆ ಹೊರೆಯಲು ಊರೂರು ತಿರುಗಿ ಗೊಂದಳಿ ಪದಗಳನ್ನ ಹಾಡುತ್ತಾ ಬದುಕು ಸಾಗಿಸುತ್ತಿರೋ ಜಾನಪದ ಹಿರಿಯ ಕಲಾವಿದ 73 ವರ್ಷದ ಪಾಂಡುರಂಗ ಸುಗತೇಕರ್
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಜೂ.18): ಅವರೊಬ್ಬ ಹಿರಿಯ ಕಲಾವಿದ, ಅವರಿಗೆ ಈಗ ಬರೋಬ್ಬರಿ 73 ವರ್ಷ, ನಿತ್ಯ ಜಾನಪದ ಕಲೆಯೊಂದಿಗೆ ಬದುಕು ಸವೆಸುವ ಈ ಹಿರಿಯ ಕಲಾವಿದರು ಮಾಶಾಸನಕ್ಕಾಗಿ ಒಂದಲ್ಲ, ಎರಡಲ್ಲ ಬರೋಬ್ಬರಿ 15 ವರ್ಷಗಳಿಂದ ಅಲೆಯುತ್ತಿದ್ದಾರೆ. ಆದ್ರೆ ಇವರಿಗೆ ಮಾಶಾಸನ ಮಾತ್ರ ಸಿಕ್ಕಿಲ್ಲ, ನಿತ್ಯ ಹೊಟ್ಟೆ ಹೊರೆಯಲು ಊರೂರು ತಿರುಗುವ ಪರಿಸ್ಥಿತಿಯನ್ನ ಈ ಹಿರಿಯ ಕಲಾವಿದರು ಅನುಭವಿಸುತ್ತಿದ್ದಾರೆ.
undefined
ಸಾಮಾನ್ಯವಾಗಿ ಬಾಗಲಕೋಟೆ ಸುತ್ತಮುತ್ತಲಿನ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಗೊಂದಳಿ ಪದಗಳನ್ನ (Gondhali Folk songs) ಹಾಡುತ್ತಾ ಎಲ್ಲರ ಗಮನ ಸೆಳೆಯುವ ಹಿರಿಯ ಕಲಾವಿದರು ಅಂದರೆ ಅವರೇ ಪಾಂಡುರಂಗ ಸುಗತೇಕರ. ಇವರಿಗೆ ಈಗ ಬರೋಬ್ಬರಿ 73 ವರ್ಷ ವಯಸ್ಸು. ಇವರು ಬಾಗಲಕೋಟೆಯ ನವನಗರದ ನಿವಾಸಿ. ತಮ್ಮ 14ನೇ ವಯಸ್ಸಿಗೆ ಗೊಂದಳಿ ಪದಗಳನ್ನ ಹಾಡಲು ಕಲಿತ ಪಾಂಡುರಂಗ ಅವರು ಜಾನಪದ ಲೋಕದಲ್ಲಿ ತಮ್ಮದೇಯಾದ ಸೇವೆ ಸಲ್ಲಿಸುತ್ತಾ ಮುನ್ನಡೆದವರು.
ಮಹದಾಯಿ ವಿಚಾರವಾಗಿ ಕರ್ನಾಟಕದ ವಿರುದ್ಧ ಹೋರಾಡಲು ಟೊಂಕ ಕಟ್ಟಿ ನಿಂತ ಗೋವಾ-ಮಹಾರಾಷ್ಟ್ರ
ರಾಜ್ಯದ ವಿವಿಧ ಭಾಗಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಈ ಹಿರಿಯ ಕಲಾವಿದರಿಗೆ ಇನ್ನೂ ಸಹ ಮಾಶಾಸನ ಮಾತ್ರ ಸಿಗುತ್ತಿಲ್ಲ. ಮಾಶಾಸನ ಸಂಭಂದ ಕಳೆದ 15 ವರ್ಷಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರ್ಜಿ ಹಾಕುತ್ತಲೇ ಇದ್ದು, ಇವುಗಳ ಮಧ್ಯೆ ಅರ್ಜಿ ಹಾಕಿ ಕಲಾವಿದರ ಸಂದರ್ಶನದಲ್ಲೂ ಸಹ ಭಾಗಿಯಾಗಿರೋ ಪಾಂಡುರಂಗ ಅವರಿಗೆ ಸರ್ಕಾರ ಮಾತ್ರ ಇನ್ನೂ ಸಹ ಮಾಶಾಸನ ನೀಡಿಲ್ಲ. ಇದ್ರಿಂದ ನೊಂದು ಹೋಗಿರೋ ಹಿರಿಯ ಜೀವ ನಿತ್ಯ ಕಣ್ಣೀರಿಟ್ಟು ತಮ್ಮ ಗೋಳನ್ನು ಹೇಳಿಕೊಳ್ಳುತ್ತಿದ್ದು, ಇಷ್ಟು ವರ್ಷಗಳ ಕಾಲ ಗೊಂದಳಿ ಪದಗಳನ್ನ ಹಾಡುವ ಮೂಲಕ ಸೇವೆ ಮಾಡುತ್ತಾ ಬಂದಿದ್ದೇನೆ, ನನಗೆ ಸರ್ಕಾರದಿಂದ ಮಾಶಾಸನ ಕೊಡಿಸಿ ಕೊಡಿ ಅಂತ ಏಷಿಯಾನೆಟ್ ಸುವರ್ಣನ್ಯೂಸ್ ಎದುರು ಕಣ್ಣೀರಿಟ್ಟಿದ್ದಾರೆ ಈ ಹಿರಿಯ ಕಲಾವಿದ ಜೀವ ಪಾಂಡುರಂಗ ಸುಗತೇಕರ್.
ಬಾಗಲಕೋಟೆಯಿಂದ ಬೆಂಗಳೂರಿಗೆ ಅಲೆದ್ರೂ ಸಿಗದ ಕಲಾವಿದರ ಮಾಶಾಸನ:
ಇನ್ನು ಮಾಶಾಸನ ಸಂಭಂದ ಬಾಗಲಕೋಟೆಯಿಂದ ಬೆಂಗಳೂರವರೆಗೆ ಅಲೆದಿರೋ ಕಲಾವಿದ ಪಾಂಡುರಂಗ ನಿತ್ಯದ ಬದುಕಿಗೂ ಹೆಣಗಾಡಬೇಕಿದೆ. ಯಾಕಂದ್ರೆ ಸ್ವಾಭಿಮಾನಿಯಾಗಿರೋ ಪಾಂಡುರಂಗ ಅವರು ನಿತ್ಯ ಊರೂರು ತಿರುಗಿ ಗೊಂದಳಿ ಪದಗಳನ್ನ ಹಾಡುತ್ತಾ ಯಾರಾದ್ರೂ ಹಣ ನೀಡಿದರೆ ಅದರಿಂದಲೇ ನಿತ್ಯದ ಬದುಕು ಸಾಗಿಸುತ್ತಿದ್ದು, ಮಳೆ ಗಾಳಿ ಬಂದ್ರೆ ನವನಗರದ ಗುಡಿಯೊಂದರಲ್ಲಿ ಆಶ್ರಯ ಪಡೆಯುತ್ತಾರೆ.
Bengaluru: ವಿವಿ ಪುರಂ ಫುಡ್‌ಸ್ಟ್ರೀಟ್‌ಗೆ ಹೈಟೆಕ್ ಸ್ಪರ್ಶ, ಮುಂದಿನ ತಿಂಗಳು ರೀ ಓಪನ್
ರಾಜ್ಯ ವಿವಿಧ ಗ್ರಾಮ ಪಟ್ಟಣಗಳಲ್ಲಿ ಜಾನಪದ ಕಲಾ ಸೇವೆಯನ್ನ ನೀಡಿರೋ ಪಾಂಡುರಂಗ ಅವರ ಸೇವೆಯನ್ನ ಪರಿಗಣಿಸಿ ಅವರ ಹಿರಿತನಕ್ಕೆ ಸರ್ಕಾರ ಮಾಶಾಸನ ನೀಡಬೇಕಿದೆ. ಆದ್ರೆ ಕಳೆದ 20 ವರ್ಷಗಳಿಂದ ಪಾಂಡುರಂಗ ಅವರನ್ನ ನೋಡುತ್ತಾ ಬಂದಿದ್ದೇವೆ, ಕಷ್ಟದ ಬದುಕಿನಲ್ಲಿ ಸಾಗುತ್ತಿದ್ದಾರೆ ಹೀಗಾಗಿ ಸರ್ಕಾರ ಅವರಿಗೆ ಆದಷ್ಟು ಬೇಗ ಕಲಾವಿದರ ಮಾಶಾಸನ ನೀಡುವಂತಾಗಬೇಕು ಅಂತಾರೆ ಶಂಕರ್.
ಒಟ್ಟಿನಲ್ಲಿ ಬಹಳ ಕಷ್ಟದ ದಿನಗಳನ್ನ ಅನುಭವಿಸಿ ತುತ್ತು ಅನ್ನಕ್ಕೂ ಪರದಾಡಿ ಜೀವನ ಸಾಗಿಸುತ್ತಿರೋ ಗೊಂದಳಿ ಪದಗಳ ಹಾಡುಗಾರ, ಹಿರಿಯ ಕಲಾವಿದ ಪಾಂಡುರಂಗ ಸುಗತೇಕರ ಅವರಿಗೆ ಈಗಲಾದ್ರೂ ಸಂಭಂದಪಟ್ಟ ಸಚಿವರು ಮತ್ತು ಅಧಿಕಾರಿಗಳು ಗಮನ ಹರಿಸಿ ಸರ್ಕಾರದಿಂದ ಮಾಶಾಸನ ಕೊಡಿಸುವ ವ್ಯವಸ್ಥೆ ಮಾಡ್ತಾರಾ ಅಂತ ಕಾದು ನೋಡಬೇಕಿದೆ.