ಗೋಕರ್ಣ ಸಮುದ್ರದಲ್ಲಿ ಮುಳುಗಿ ಬೆಳ್ಳಂದೂರಿನ ಅಲೋರಿಯಾ ಇಕೋಸ್ಪೇಸ್‌ನ ಮೂವರು ಟೆಕ್ಕಿಗಳು ಸಾವು

Published : Nov 02, 2026, 08:28 PM IST
Gokarna Death

ಸಾರಾಂಶ

ವಾರಾಂತ್ಯದ ರಜೆ ಕಳೆಯಲು ಗೋಕರ್ಣಕ್ಕೆ ತೆರಳಿದ್ದ ಬೆಂಗಳೂರಿನ ಐಟಿ ಕಂಪನಿಯ ಸಿಬ್ಬಂದಿ ಸಮುದ್ರದ ಬೃಹತ್ ಅಲೆಗಳಿಗೆ ಸಿಲುಕಿದ್ದಾರೆ. ಈ ದುರಂತದಲ್ಲಿ ಮೂವರು ಉದ್ಯೋಗಿಗಳು ಮೃತಪಟ್ಟಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗೋಕರ್ಣ (ನ.2): ಸಹೋದ್ಯೋಗಿಗಳೊಂದಿಗೆ ವಾರಾಂತ್ಯದ ರಜೆ ಕಳೆಯಲು ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣಕ್ಕೆ ತೆರಳಿದ್ದ ಬೆಂಗಳೂರಿನ ಐಟಿ ಸಂಸ್ಥೆಯೊಂದರ ಸಿಬ್ಬಂದಿಗೆ ಸಮುದ್ರದ ರೌದ್ರನರ್ತನ ಭಾರಿ ಆಘಾತ ನೀಡಿದೆ: ಕಡಲತೀರದಲ್ಲಿ ಆಟವಾಡುತ್ತಿದ್ದ ವೇಳೆ ಏಕಾಏಕಿ ಅಪ್ಪಳಿಸಿದ ಬೃಹತ್ ಅಲೆಗಳಿಗೆ ಸಿಲುಕಿ ಬೆಂಗಳೂರಿನ ಮೂವರು ಐಟಿ ಉದ್ಯೋಗಿಗಳು ದಾರುಣವಾಗಿ ಮೃತಪಟ್ಟಿದ್ದು, ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ 'ಅಲೋರಿಯಾ ಇಕೋಸ್ಪೇಸ್' (Aloria Ecospace) ಕಂಪನಿಯ 16 ಜನರಿದ್ದ ಉದ್ಯೋಗಿಗಳ ತಂಡವು ವಾರಾಂತ್ಯದ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಆಗಮಿಸಿತ್ತು. ಗೋಕರ್ಣದ ಪ್ರಸಿದ್ಧ 'ದುಬ್ಬಣಶಶಿ ಬೀಚ್'ನಲ್ಲಿರುವ 'ಕೋಜೆ ರೆಸಾರ್ಟ್'ನಲ್ಲಿ (Koje Resort) ವಾಸ್ತವ್ಯ ಹೂಡಿದ್ದ ಈ ಟೆಕ್ಕಿಗಳ ತಂಡ, ತೀರದಲ್ಲಿ ಕಡಲಸೌಂದರ್ಯ ಸವಿಯುತ್ತಾ ಕಾಲ ಕಳೆಯುತ್ತಿತ್ತು.

ಮೂವರ ದಾರುಣ ಸಾವು

ಸಮಯ ಕಳೆಯುತ್ತಿದ್ದ ವೇಳೆ ತಂಡದಲ್ಲಿದ್ದ ಕೆಲ ಉದ್ಯೋಗಿಗಳು ಖುಷಿಯಿಂದ ಸಮುದ್ರದ ನೀರಿಗೆ ಇಳಿದಿದ್ದಾರೆ. ಆದರೆ, ಅದೇ ಕ್ಷಣದಲ್ಲಿ ಏಕಾಏಕಿ ಎದ್ದುಬಂದ ಭಾರಿ ಪ್ರಮಾಣದ ರಾಕ್ಷಸ ಅಲೆಯಿಂದಾಗಿ ಐವರು ಉದ್ಯೋಗಿಗಳು ನಿಯಂತ್ರಣ ತಪ್ಪಿ ಸಮುದ್ರದ ಆಳಕ್ಕೆ ಕೊಚ್ಚಿಹೋಗಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ರೆಸಾರ್ಟ್‌ನ ಜೀವರಕ್ಷಕ ಸಿಬ್ಬಂದಿ (Lifeguards) ಹಾಗೂ ಸ್ಥಳೀಯ ಮೀನುಗಾರರು ಸಮಯಪ್ರಜ್ಞೆ ಮೆರೆದು ತಕ್ಷಣವೇ ಸಮುದ್ರಕ್ಕಿಳಿದು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ತೀವ್ರ ಹೆಣಗಾಟದ ಬಳಿಕ ನಾಲ್ವರನ್ನು ನೀರೊಳಗಿಂದ ದಡಕ್ಕೆ ಕರೆತರುವಲ್ಲಿ ಸಿಬ್ಬಂದಿ ಯಶಸ್ವಿಯಾದರಾದರೂ, ಅವರಲ್ಲಿ ಮೂವರ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಜಾರ್ಖಂಡ್ ಮೂಲದ ಯುವತಿ 22 ವರ್ಷದ ಶೋಭಾ ದಾಸ್ ನೀರು ಕುಡಿದು ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಸ್ಪಂದಿಸದೇ ಅವರು ಕೊನೆಯುಸಿರೆಳೆದರು. ಭಾರಿ ಅಲೆಗೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದ ಟೀಮ್‌ ಕ್ಯಾಪ್ಟನ್‌ ಮಹಮ್ಮದ್ ಅಕ್ರಮ್ ಅವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ. ದುರಂತ ಸಂಭವಿಸಿದ ವೇಳೆ ನೀರಿನಲ್ಲಿ ನಾಪತ್ತೆಯಾಗಿದ್ದ ಬೆಂಗಳೂರಿನ ಕಲ್ಯಾಣನಗರದ ನಿವಾಸಿ 24 ವರ್ಷದ ವಿಶ್ವ ಅವರಿಗಾಗಿ ಪೊಲೀಸರು ಹಾಗೂ ಜೀವರಕ್ಷಕರು ತೀವ್ರ ಶೋಧ ನಡೆಸಿದ್ದರು. ಇದೀಗ ಅವರ ಮೃತದೇಹವೂ ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಸದ್ಯ, ಅದೃಷ್ಟವಶಾತ್ ರಕ್ಷಿಸಲ್ಪಟ್ಟಿರುವ ನಿಶಾಂತ್ (Nishanth) ಮತ್ತು ಮಹಮ್ಮದ್ ಖಾಸಿಂ (Mohammed Qasim) ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಕಾರವಾರ ಶವಾಗಾರಕ್ಕೆ ಮೃತದೇಹಗಳ ರವಾನೆ – ತನಿಖೆ ಆರಂಭ

ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಗೋಕರ್ಣ ಠಾಣೆಯ ಪೊಲೀಸರು ಘಟನಾ ಸ್ಥಳ ಹಾಗೂ ರೆಸಾರ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾರವಾರ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ರವಾನಿಸಿದ್ದಾರೆ. ಕಡಲತೀರಗಳಿಗೆ ಆಗಮಿಸುವ ಪ್ರವಾಸಿಗರು ಸಮುದ್ರದ ಆಳ ಹಾಗೂ ಅಲೆಗಳ ರಭಸ ತಿಳಿಯದೆ ತೋರುವ ಸಣ್ಣ ನಿರ್ಲಕ್ಷ್ಯವೂ ಎಷ್ಟು ಭೀಕರ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ.

ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಗೋಕರ್ಣ ಪೊಲೀಸರು, ಕಡಲತೀರದ ಸುತ್ತಮುತ್ತಲಿರುವ ಎಲ್ಲಾ ರೆಸಾರ್ಟ್‌ಗಳು, ಹೋಟೆಲ್‌ಗಳು ಹಾಗೂ ಹೋಮ್‌ಸ್ಟೇಗಳ ಮಾಲೀಕರಿಗೆ ಕಟ್ಟುನಿಟ್ಟಿನ ಭದ್ರತಾ ಎಚ್ಚರಿಕೆ ನೀಡಿದ್ದಾರೆ. ಸಮುದ್ರದಲ್ಲಿ ಅಲೆಗಳ ತೀವ್ರತೆ ಹಾಗೂ ರಭಸ ಹೆಚ್ಚಿರುವ ಸಂದರ್ಭಗಳಲ್ಲಿ ಪ್ರವಾಸಿಗರು ಯಾವುದೇ ಕಾರಣಕ್ಕೂ ನೀರಿಗೆ ಇಳಿಯದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಕಡಲತೀರಗಳಲ್ಲಿ ಸುರಕ್ಷತಾ ಸೂಚನೆಗಳನ್ನು ಪ್ರಕಟಿಸಬೇಕು ಎಂದು ಆಡಳಿತ ಮಂಡಳಿಗಳಿಗೆ ಸೂಚಿಸಿದ್ದಾರೆ.

PREV
Read more Articles on
click me!

Recommended Stories

ರಾಜ್ಯೋತ್ಸವದ ಸಂಭ್ರಮದಲ್ಲಿ ಕರ್ನಾಟಕಕ್ಕೆ ಹೊಸ ಗರಿ: ಮಲೆನಾಡಿನ ಮರಗಂತಿ ಕಪ್ಪೆಗೆ ರಾಜ್ಯ ಉಭಯಜೀವಿ ಮನ್ನಣೆ
'ಕಳೆದ 11 ವರ್ಷಗಳಿಂದ ಬಸ್‌ ಟಿಕೆಟ್‌ ದರ ಏರಿಸಿಲ್ಲ' ರಾಜಾರೋಷವಾಗಿ ಸುಳ್ಳು ಹೇಳಿದ ಸಚಿವ ಬೈರತಿ ಸುರೇಶ್‌, 2025ರ ಶೇ.15ರಷ್ಟು ಏರಿಕೆ ಮರೆತುಹೋಯ್ತಾ?