ವ್ಯಕ್ತಿನಿಷ್ಠೆ ಬಂದರೆ ಸಿದ್ದರಾಮಯ್ಯ ನನ್ನ ನಾಯಕ| ಕೆಟ್ಟ ಸರ್ಕಾರ ಬೀಳಿಸಬೇಕೆಂಬ ಉದ್ದೇಶದಿಂದಲೇ ಕೆಡವಿದ್ದೇವೆ: ಶಾಸಕ ರಮೇಶ್ ಜಾರಕಿಹೊಳಿ| ಮುಂದಿನ ದಿನಗಳಲ್ಲಿ ಗೋಕಾಕ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇನೆ|
ಗೋಕಾಕ(ಜ.01): ಮಾಜಿ ಸಿಎಂ ಸಿದ್ದರಾಮಯ್ಯ ಒಳ್ಳೆಯ ಮನುಷ್ಯ, ಇಂದಿಗೂ ಅವರು ನಮ್ಮ ನಾಯಕರು. ಮುಂದೇನಾಗುತ್ತದೆಯೋ ನೋಡೋಣ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೋಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಗೋಕಾಕ ತಾಲೂಕಿನ ಬೆನಚಿಮರಡಿಯಲ್ಲಿ ಗ್ರಾಮಸ್ಥರು ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಿಂದಿನ ಸಮ್ಮಿಶ್ರ ಸರ್ಕಾರ ಕೆಡವಿದ್ದು ನಾನು ಮಂತ್ರಿಯಾಗಬೇಕೆಂಬ ಆಸೆಯಿಂದಲ್ಲ. ಕೆಟ್ಟ ಸರ್ಕಾರವನ್ನು ಕೆಡವಬೇಕು ಎಂಬ ಉದ್ದೇಶದಿಂದ ಸರ್ಕಾರವನ್ನು ಕೆಡವಿದ್ದೇವೆ. ಹಿಂದಿನ ಸರ್ಕಾರದಲ್ಲಿ ನಾನು ಮಂತ್ರಿಯಾಗಿದ್ದೆ. ಒಳ್ಳೆಯ ಇಲಾಖೆ ಇತ್ತು. ನಾನು ಬಂಡಾಯ ಎದ್ದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದು ಬುದ್ಧಿವಾದ ಹೇಳಿದ್ದರು. ನಾನು ಮತ್ತೆ ಕಾಂಗ್ರೆಸ್‌ಗೆ ವಾಪಸ್ ಬಂದ್ರೆ ಆ ಪಕ್ಷದಲ್ಲಿನ ಕುತಂತ್ರಿಗಳು ನಮ್ಮನ್ನು ತುಳಿಯುವುದಲ್ಲದೆ, ನಿಮ್ಮನ್ನೂ ತುಳಿಯುತ್ತಾರೆ ಎಂದು ಹೇಳಿದ್ದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಿದ್ದರಾಮಯ್ಯ ಒಳ್ಳೆಯ ಮನುಷ್ಯ. ನಾವು ಅವರು ಬೇರೆ ಬೇರೆ ಪಕ್ಷಗಳಿಗೆ ಹೋಗಿದ್ದು ದುರ್ದೈವ. ನಾನು ಇತ್ತೀಚೆಗೆ ಸಿದ್ದರಾಮಯ್ಯ ಅನಾರೋಗ್ಯದ ನಿಮಿತ್ತ ಅವರನ್ನು ಭೇಟಿ ಮಾಡಲು ಹೋದಾಗ ಬಹಳಷ್ಟು ವಿಚಾರಗಳ ಬಗ್ಗೆ ಮಾತನಾಡಿದರು. ಕೆಲವು ವಿಚಾರಗಳನ್ನು ನೆನಪು ಮಾಡಿಕೊಂಡು ಭಾವುಕರಾದರು. ರಾಜಕೀಯದಲ್ಲಿ ಮುಂದೇನಾಗುತ್ತೋ ಕಾದು ನೋಡೋಣ ಅಂತಾ ಹೇಳಿದ್ದರು ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ನಾವು ಬಂಡಾಯ ಎದ್ದು ಮತ್ತೆ ಕಾಂಗ್ರೆಸ್‌ಗೆ ಹೋಗಿದ್ದರೆ, ಬಂಡಾಯದ ವಿಚಾರವನ್ನು ಸಿದ್ದರಾಮಯ್ಯ ಅವರ ಹಣೆಗೆ ಕಟ್ಟಿ ಅವರನ್ನು ರಾಜಕೀಯವಾಗಿ ಮುಗಿಸುತ್ತಿದ್ದರು. ನಾವು ಬಂಡಾಯ ಎದ್ದು ಹೊರ ಬಂದು ಬಿಜೆಪಿ ಸೇರಿದ್ದಕ್ಕೆ ಅವರಿಗೂ ಒಳ್ಳೆಯದಾಗಿದೆ ಎಂದರು.
ನಾವು ಎಲ್ಲಿಯೇ ಇದ್ದರೂ ಸಿದ್ದರಾಮಯ್ಯ ಹಾಗೂ ಖರ್ಗೆ ನಮ್ಮ ನಾಯಕರು. ಇದನ್ನು ಬಹಿರಂಗವಾಗಿ ಹೇಳುತ್ತೇನೆ. ಇದನ್ನು ಹೇಳಲು ನನಗೆ ಯಾರ ಭಯವೂ ಇಲ್ಲ. ನಾನು ಸದ್ಯಕ್ಕೆ ಬಿಜೆಪಿಯಲ್ಲಿರುವುದರಿಂದ ಪಕ್ಷ ನಿಷ್ಠೆ ಬಂದರೆ, ನನ್ನ ನಿಷ್ಠೆ ಬಿಜೆಪಿಗೆ. ವೈಯಕ್ತಿಕವಾಗಿ ವ್ಯಕ್ತಿ ನಿಷ್ಠೆ ಬಂದರೆ, ನನ್ನ ನಾಯಕರು ಸಿದ್ದರಾಮಯ್ಯ ಎಂದು ಹೇಳಿದರು.
ಕುತಂತ್ರಿಗಳ ಆಟ ನಡೆಯಲಿಲ್ಲ:
ಕಳೆದ ಗೋಕಾಕ ಉಪ ಚುನಾವಣೆಯಲ್ಲಿ ನನ್ನ ಸೋಲಿಸಲು ವಿರೋಧಿಗಳು ವಾಮಮಾರ್ಗದ ಮೂಲಕ ಏನೆಲ್ಲ ಪ್ರಯತ್ನಪಟ್ಟರೂ ಅವರಿಗೆ ಯಶಸ್ಸು ಸಿಗಲಿಲ್ಲ ಎಂದ ಅವರು, ಚುನಾವಣೆ ಸಂದರ್ಭದಲ್ಲಿ ಜನರಿಗೆ ಹಲವಾರು ರೀತಿ ಆಸೆ, ಆಮಿಷ ಒಡ್ಡಿದ್ದರು. ಬೆದರಿಕೆ ಹಾಕಿದ್ದರು. ಇಷ್ಟೆಲ್ಲವಾದರೂ ಕ್ಷೇತ್ರದ ಜನರು ನನ್ನ ಕೈಬಿಡಲಿಲ್ಲ. ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಇದೇ ಸಮಯದಲ್ಲಿ ಮಾಲದಿನ್ನಿ, ಉಪ್ಪಾರಟ್ಟಿ, ಮಮದಾಪೂರ, ಅಜ್ಜನಕಟ್ಟಿ, ಮರಡಿ ಶಿವಾಪೂರ, ಪಂಚನಾಯ್ಕನಹಟ್ಟಿಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಮತದಾರರಿಗೆ ಕ್ರತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ್, ಎಂ ಎಲ್ ತೋಳಿನವರ, ಮುಖಂಡರಾದ ಲಕ್ಕಪ್ಪ ಮಾಳಗಿ, ವಿಠ್ಠಲ ಗುಂಡಿ, ಯಲ್ಲಪ್ಪ ಬಂಗೆನ್ನವರ, ಮಹಾದೇವ ಮನ್ನಿಕೇರಿ, ಹನಮಂತ ದುರ್ಗನ್ನವರ, ಲಕ್ಕಪ್ಪ ಭಂಡಿ, ಲಕ್ಷ್ಮಣ ಭಂಡಿ, ಹನಮಂತ ಕಿಚಡಿ, ಮಹಾದೇವ ಭಂಡಿ, ಲಕ್ಕಪ್ಪ ಕಡಕೋಳ, ಹನಮಂತ ಕಡಕೋಳ, ಗಿರೆಪ್ಪ ಭಂಡಿ, ಆರ್ ಎನ್ ಮೂಡಲಗಿ, ಪ್ರಕಾಶ ಪಾಟೀಲ, ಅಡಿವೆಪ್ಪ ಚಿಗದನ್ನವರ, ಸಿದ್ದಪ್ಪ ಭಂಡಿ, ಮುತ್ತೆಪ್ಪ ಖಾನಪ್ಪನವರ, ಸುರೇಶ ಸನದಿ, ಶಂಕರಗೌಡ ಪಾಟೀಲ, ಯಲ್ಲಪ್ಪ ನಾಯಕ, ಹನಮಂತ ಯಡ್ರಾವಿ, ಕೆಂಪಣ್ಣ ಮೈಲನ್ನವರ, ಸಿದ್ದಪ್ಪ ಕಮತ, ನಾಗವ್ವ ಸಿಂಗಾಡಿ, ಶಿವಲಿಂಗಪ್ಪ ಕಮತ, ಮಹಾಂತೇಶ ಜನ್ಮಟ್ಟಿ, ವೀರಭದ್ರ ಮೈಲನ್ನವರ, ವಿಠ್ಠಲ ಪಟಾತ ಸೇರಿದಂತೆ ವಿವಿಧ ಗ್ರಾಮಸ್ಥರು ಇದ್ದರು.
ಜನವರಿ 1 ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ