ಕೋಟೆನಾಡು ಚಿತ್ರದುರ್ಗದಲ್ಲಿ ಬರದ ಛಾಯೆ ಆವರಿಸಿದೆ. ಹೀಗಾಗಿ ರೈತರ ಜಾನುವಾರುಗಳಿಗೆ ಮೇವು, ನೀರಿನ ಆಹಾಕಾರ ಶುರುವಾಗಿದೆ. ದೇವರ ಎತ್ತುಗಳು ಮೇವಿಲ್ಲದೇ ನಿತ್ರಾಣಗೊಂಡು ಸಾವನ್ನಪ್ತಿವೆ. ಆದ್ರೆ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಜೂ.28): ಕೋಟೆನಾಡು ಚಿತ್ರದುರ್ಗದಲ್ಲಿ ಬರದ ಛಾಯೆ ಆವರಿಸಿದೆ. ಹೀಗಾಗಿ ರೈತರ ಜಾನುವಾರುಗಳಿಗೆ ಮೇವು, ನೀರಿನ ಆಹಾಕಾರ ಶುರುವಾಗಿದೆ. ದೇವರ ಎತ್ತುಗಳು ಮೇವಿಲ್ಲದೇ ನಿತ್ರಾಣಗೊಂಡು ಸಾವನ್ನಪ್ತಿವೆ. ಆದ್ರೆ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ. ಈ ಕುರಿತು ಒಂದು ವರದಿ ಇಲ್ಲಿದೆ. ನೋಡಿ ಹೀಗೆ ನಿತ್ರಾಣಗೊಂಡ ದೇವರ ಎತ್ತುಗಳ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೊಮ್ಮ ದೇವರಹಟ್ಟಿಯಲ್ಲಿ ಗ್ರಾಮದ ಬಳಿ. ಹೌದು ಇಲ್ಲಿ500 ಕ್ಕು ಅಧಿಕ ದೇವರ ಎತ್ತುಗಳಿವೆ. ಭಕ್ತರು ಅವರ ಇಷ್ಟಾರ್ಥ ಸಿದ್ದಿಗಾಗಿ ಬುಡಕಟ್ಟು ಸಂಪ್ರದಾಯದಂತೆ ಮನೆಯಲ್ಲಿ ಹುಟ್ಟಿದ ಮೊದಲ ಕರುವನ್ನು ದೇವರಿಗೆ ಬಿಡೋದು ಇಲ್ಲಿನ ವಾಡಿಕೆ.
ಹೀಗಾಗಿ ಅವುಗಳ ಪಾಲನೆಯ ಹೊಣೆಯನ್ನು ಹೊತ್ತಿರುವ ಕಿಲಾರಿಗಳು ಈ ಎತ್ತುಗಳಿಗೆ ಅಡವಿಯಲ್ಲಿ ಮೇವನ್ನು ಒದಗಿಸ್ತಿದ್ದರು. ಅಲ್ಲದೇ ಭಕ್ತರು ಹಾಗೂ ಮಠ ಮಾನ್ಯಗಳು ಅವರ ಜಮೀನುಗಳಲ್ಲಿ ಬೆಳೆದ ಮೆಕ್ಕೆಜೋಳದ ಸೆಪ್ಪೆಯನ್ನು ಉಚಿತವಾಗಿ ಈ ಎತ್ತುಗಳಿಗೆ ನೀಡ್ತಿದ್ದರು. ಆದ್ರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಮೇವು,ನೀರು ಸಿಗಲಾರದೇ ಪರದಾಡುವಂತಾಗಿದೆ. ಸಮಯಕ್ಕೆ ಸರಿಯಾಗಿ ಮೇವಿಲ್ಲದೇ ಎತ್ತುಗಳು ನಿಶ್ಯಕ್ತಿಯಾಗಿ ನಿತ್ರಾಣಗೊಂಡಿವೆ. ಎತ್ತುಗಳ ದೇಹದಲ್ಲಿನ ಮೂಳೆಗಳು ಎದ್ದು ಕಣ್ತಿವೆ.ಹೀಗಾಗಿ ಆ ಎತ್ತುಗಳನ್ನು ಹಲವು ವರ್ಷಗಳಿಂದ ಮಕ್ಕಳಂತೆ ಸಲಹುತ್ತಿರುವ ಕಿಲಾರಿಗಳು ಕಂಗಾಲಾಗಿದ್ದಾರೆ.
ಮಕ್ಕಳ ಭವಿಷ್ಯ ನುಂಗುತ್ತಿದೆ ಕಲ್ಲಿನ ಕ್ವಾರಿ: ಕುಸಿದು ಬೀಳುವ ಭೀತಿಯಲ್ಲಿ ಶಿರಸಿಯ ಶಾಲೆ!
ಕರುವಾಗಿದ್ದಾಗಿಂದಲೂ ಸಾಕಿ ಸಲುಹಿದ ಎತ್ತುಗಳು ಕಣ್ಮುಂದೆಯೇ ಪ್ರಾಣ ಬಿಡೋದನ್ನ ಕಂಡು ಕಣ್ಣೀರಿಡುವಂತಾಗಿದೆ. ಹೀಗಾಗಿ ಅಗತ್ಯ ಮೇವಿನ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇನ್ನು ಈ ಜಾನುವಾರುಗಳ ಗೋಳು ಕೇವಲ ಬೊಮ್ಮದೇವರಟ್ಟಿಯ ಎತ್ತುಗಳಿಗೆ ಮಾತ್ರ ಸೀಮಿತವಲ್ಲ. ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿ ಹಾಗು ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯಲ್ಲೂ ಬರ ತಾಂಡವವಾಡ್ತಿದೆ. ಮಳೆ ಕೊರತೆಯಿಂದಾಗಿ ಹಸಿರು ಮೇವು ಸಹ ಸಿಗದ ಪರಿಣಾಮ ವಿವಿದೆಡೆಗಳಲ್ಲಿ ಜಾನುವಾರುಗಳು ಸಾವನ್ನಪ್ಪಿವೆ. ಹೀಗಾಗಿ ಇದು ಮುಂದುವರೆದರೆ ಗತಿಯೇನು ಎಂಬ ಆತಂಕ ಅನ್ನದಾತರಲ್ಲಿ ಮೂಡಿದೆ.
ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ: ಆರ್.ನರೇಂದ್ರ
ಆದ್ದರಿಂದ ತುರ್ತಾಗಿ ಮೇವು ನೀರಿನ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ರೈತರು ಮನವಿ ಸಲ್ಲಿಸಿದ್ದಾರೆ. ಅಗತ್ಯವಿರುವ ಕಡೆ ಹೋಬಳಿಗೊಂದು ಗೋಶಾಲೆ ತೆರೆಯುವಂತೆ ಆಗ್ರಹಿಸಿದ್ದಾರೆ.ಇದಕ್ಕೆ ಸ್ಪಂದಿಸಿರುವ ಚಳ್ಳಕೆರೆ ಶಾಸಕ ರಘುಮೂರ್ತಿ ಇದನ್ನು ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಒಟ್ಟಾರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಬರ ತಾಂಡವವಾಡ್ತಿದೆ.ಹೀಗಾಗಿ ಚಳ್ಳಕೆರೆ ತಾಲೂಕಿನ ದೇವರ ಎತ್ತುಗಳು ಮೇವಿಲ್ಲದೇ ನಿತ್ರಾಣಗೊಂಡಿವೆ. ಚಿತ್ರದುರ್ಗ ತಾಲ್ಲೂಕಿನ ರೈತರ ಜನುವಾರುಗಳು ಸಾವನ್ನಪ್ತಿವೆ. ಆದ್ದರಿಂದ ತುರ್ತಾಗಿ ಗೋಶಾಲೆ ತೆರೆದು ಮೂಕ ಜೀವಿಗಳ ಜೀವ ಉಳಿಸಲು ಸರ್ಕಾರ ಮುಂದಾಗಬೇಕಿದೆ.