Chikkamagaluru: ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಿ: ಸಿ.ಟಿ.ರವಿ

By Govindaraj S  |  First Published Sep 19, 2022, 11:57 PM IST

ಯುವಕರು ನಮ್ಮ ಸಂಸ್ಕೃತಿ, ಸಂಸ್ಕಾರಕ್ಕೆ ಹೆಚ್ಚಿನ ಗೌರವ ನೀಡುವುದರ ಜೊತೆಗೆ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಶಾಸಕ ಸಿ.ಟಿ.ರವಿ ಹೇಳಿದರು. 


ಚಿಕ್ಕಮಗಳೂರು (ಸೆ.19): ಯುವಕರು ನಮ್ಮ ಸಂಸ್ಕೃತಿ, ಸಂಸ್ಕಾರಕ್ಕೆ ಹೆಚ್ಚಿನ ಗೌರವ ನೀಡುವುದರ ಜೊತೆಗೆ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಶಾಸಕ ಸಿ.ಟಿ.ರವಿ ಹೇಳಿದರು. ನಗರದ ಹೊರವಲಯದ ಹಿರೇಮಗಳೂರಿನ ಜಮೀನಿನಲ್ಲಿ ನವಚೇತನ ಯುವಕ ಸಂಘ, ಶ್ರೀಮುತ್ತಿನಮ್ಮ ಗಣಪತಿ ಮಹೋತ್ಸವ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಕೆಸರುಗದ್ದೆ, ಹಗ್ಗ ಜಗ್ಗಾಟ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೆಸರುಗದ್ದೆ ಓಟ ಮಣ್ಣಿನ ಮೇಲೆ ಪ್ರೀತಿ ತೋರಿಸುವ ಗ್ರಾಮೀಣ ಕ್ರೀಡಾಕೂಟ. ಈ ಹಿಂದೆ ಚಿಕ್ಕಮಗಳೂರು ಹಬ್ಬದ ಸಂದರ್ಭ ನೆಲ್ಲೂರಿನಲ್ಲಿ ಕೆಸರುಗದ್ದೆ ಓಟದ ಸ್ಪರ್ಧೆ ಏರ್ಪಡಿಸಿ ಆನಂದಿಸಿದ್ದೆವು. 

ನೀರಿಗೆ ಇಳಿಯುವವರೆಗೂ ಒಂದು ರೀತಿ ಸಂಕೋಚವಾಗುತ್ತೆ. ಇಳಿದ ಮೇಲೆ ಮೇಲೇಳಲು ಮನಸ್ಸೇ ಬರುವುದಿಲ್ಲ. ಮಣ್ಣಿನ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದ ಅವರು, ಇತರೆ ಜಿಲ್ಲೆಯಿಂದ ಸ್ಪರ್ಧೆಗೆ ಆಗಮಿಸಿರುವ ಕ್ರೀಡಾಳುಗಳು ಸೋಲಲಿ ಗೆಲ್ಲಲಿ ಸ್ಪರ್ಧಾ ಮನೋಭಾವದಿಂದ ಭಾಗವಹಿಸಬೇಕು ಎಂದರು. ನಗರಸಭೆ ಮಾಜಿ ಅಧ್ಯಕ್ಷ ಎಚ್‌.ಡಿ. ತಮ್ಮಯ್ಯ ಮಾತನಾಡಿ, ಹಿರೇಮಗಳೂರಲ್ಲಿ ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲ ಕ್ರೀಡೆಗಳನ್ನು ಆಡಿಸಿದ್ದೇವೆ ಎಂದರು. ನವ ಚೇತನ ಯುವಕ ಸಂಘದ ಯುವಕರು ಹಿರೇಮಗಳೂರು ಗ್ರಾಮದಲ್ಲಿ ರಾಜ್ಯಮಟ್ಟದ ಅನೇಕ ಕ್ರೀಡೆಗಳನ್ನು ಆಯೋಜನೆ ಮಾಡುತ್ತಾರೆ. 

Tap to resize

Latest Videos

'ಕೊತ್ವಾಲ್ ರಾಮಚಂದ್ರ ಶಿಷ್ಯರಿಂದ ತೊಂದರೆಯಾಗದಿರಲಿ ಅಂತ ಸಿದ್ದರಾಮಯ್ಯಗೆ ಭದ್ರತೆ ಹೆಚ್ಚಿಸಿದ್ದೇವೆ'

ಹೆಚ್ಚಾಗಿ ಗ್ರಾಮೀಣ ಕ್ರೀಡೆಗಳನ್ನೇ ಆಯೋಜನೆ ಮಾಡಿ ಇತರೇ ಯುವಕ ಸಂಘಗಳಿಗೆ ಮಾದರಿ ಆಗಿದ್ದಾರೆ ಎಂದರು. ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ. ವೆಂಕಟೇಶ್‌ ಮಾತನಾಡಿ, ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಹೀಗಾಗಿ ಗ್ರಾಮೀಣ ಕ್ರೀಡೆಗಳನ್ನು ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ನವಚೇತನ ಯುವಕ ಸಂಘದ ಅಧ್ಯಕ್ಷ ಬಿ.ರೇವನಾಥ್‌ ಮಾತನಾಡಿ, ರಾಜ್ಯ ಮಟ್ಟದ ಕೆಸರು ಗದ್ದೆ, ಹಗ್ಗಜಗ್ಗಾಟದ ಕಾರ್ಯಕ್ರಮದಲ್ಲಿ 16 ತಂಡಗಳು ಭಾಗವಹಿಸಿವೆ. 

ಪ್ರಥಮ ಬಹುಮಾನವಾಗಿ 10 ಸಾವಿರ ರು., ದ್ವಿತೀಯ ಬಹುಮಾನ 6 ಸಾವಿರ ರು. ಹಾಗೂ ತೃತೀಯ ಬಹುಮಾನ 3 ಸಾವಿರ ರು., ನಾಲ್ಕನೇ ಬಹುಮಾನ ಒಂದು ಸಾವಿರ ರು. ಮತ್ತು ಟ್ರೋಫಿ ನೀಡಲಾಗುವುದು, ಸ್ಪರ್ಧೆಗೆ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಯವರು ಆಗಮಿಸಿದ್ದಾರೆ ಎಂದರು. ಕೇಶವಮೂರ್ತಿ, ಕಾರ್ಯದರ್ಶಿ ನಂದಕುಮಾರ್‌, ಖಜಾಂಚಿ ಚಂದು, ಮಧು, ಅರುಣಕುಮಾರ್‌, ವಿಜೇತ್‌, ಯಶವಂತ್‌, ಕಾಂತರಾಜು, ಪ್ರಸಾದ್‌, ರವಿಕುಮಾರ್‌ ಉಪಸ್ಥಿತರಿದ್ದರು.

ಸಿದ್ದ- ಪೆದ್ದ ಎನ್ನಬಹುದೇ?: ನನ್ನನ್ನು ಲೂಟಿ ರವಿ ಎಂದರೆ ನಾನು ‘ಸಿದ್ದ ಪೆದ್ದ’ ಎನ್ನಬಹುದಲ್ಲವೆ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಪ್ರಾಸಬದ್ಧವಾಗಿ ಸಿ.ಟಿ. ಅನ್ನು ಲೂಟಿ ಎನ್ನುವುದಾದರೆ ಸಿದ್ದು ಪೆದ್ದ ಅನ್ನಬಹುದು. ನಾನು ಏನು ಹೇಳಬೇಕೋ ಅದನ್ನು ಸೂಕ್ಷ್ಮವಾಗಿ ಹೇಳಿದ್ದೇನೆ. ನನಗೆ ಕೇಳಿದಂತೆ ಇತರರಿಗೂ ಅಷ್ಟೇ ಗಟ್ಟಿಯಾಗಿ ಪ್ರಶ್ನೆ ಕೇಳಲಿ. ಸಮಾಜವಾದಿಗಳ ಮಜಾವಾದಿತನ ನೋಡಿದ್ದೇನೆ. ಸೆಂಟ್‌ ಹೊಡೆದುಕೊಂಡು ವಾಸನೆ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ಸಿ.ಟಿ.ರವಿ ತಿರುಗೇಟು ನೀಡಿದರು.

Chikkamagaluru: ಸಿದ್ದರಾಮಯ್ಯ ಕಚ್ಚೆ ಹರುಕ ಎಂಬ ಸಿ.ಟಿ.ರವಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್‌ ಕುರಿತು ಕೆಂಪಣ್ಣ ಆಯೋಗವನ್ನು ಸತ್ಯಾಸತ್ಯತೆ ಹೊರಗೆ ತರಲು ರಚನೆ ಮಾಡಲಾಗಿದೆ. ಟಿಎ, ಡಿಎ ತೆಗೆದುಕೊಳ್ಳಲು ಅಲ್ಲ. ಸಿಟಿನ ಲೂಟಿ ಎನ್ನಬೇಕಾದರೆ, ಇವರನ್ನು ಏನೆಂದು ಕರೆಯಬೇಕು? ಇವರೇನು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳಾ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಟೇಬಲ್‌ ಗುದ್ದಿ ಕೇಳುತ್ತಿದ್ದರು, ನಾನು ಏನು ಹೇಳಬೇಕೋ ಅದನ್ನು ಸೂಕ್ಷ್ಮವಾಗಿ ಹೇಳಿದ್ದೇನೆ. ನನಗೆ ಕೇಳಿದಂತೆ ಇತರರಿಗೂ ಅಷ್ಟೇ ಗಟ್ಟಿಯಾಗಿ ಪ್ರಶ್ನೆ ಕೇಳಲಿ. ಸಮಾಜವಾದಿಗಳ ಮಜಾವಾದಿತನ ನೋಡಿದ್ದೇನೆ. ಸೆಂಟ್‌ ಹೊಡೆದುಕೊಂಡು ವಾಸನೆ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ಟೀಕಾಪ್ರಹಾರ ನಡೆಸಿದ ಅವರು, ಕಲ್ಲಿದ್ದಲು ಹಗರಣ ಸಂಬಂಧ ನೀಡಿರುವ ಹೇಳಿಕೆಗೆ ಈಗಲೂ ಬದ್ಧ. ಜನಸ್ಪಂದನ ಸಮಾವೇಶದ ವೇದಿಕೆ ಹಿಂದೆ ಮಾಧ್ಯಮಕ್ಕೆ ಸೂಕ್ಷ್ಮವಾಗಿ ಹೇಳಿದ್ದೇನೆ. ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಾನು ಆ ಹೇಳಿಕೆ ನೀಡಿದ್ದೇನೆ ಎಂದರೆ, ಆ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದೇ ಅರ್ಥ ಎಂದರು.

click me!