
ಮೈಸೂರು : ನಂಬರ್ ಪ್ಲೇಟ್ ಗೋಚರಿಸದಂತೆ ಕಬ್ಬಿಣದ ಬಂಪರ್ ಹಾಗೂ ಗ್ರಿಲ್ ಅಳವಡಿಸಿ ಸೆ. 19 ರ ಮಂಗಳವಾರ ಈ ವಾಹನವನ್ನು ನಿಲ್ಲಿಸಿರುವುದು ಎಲ್ಲಿ ಗೊತ್ತೇ? ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಮೈಸೂರಿನ ಆರ್ ಟಿಒ ಕಚೇರಿಯ ಎದುರು!
ಪ್ರತಿನಿತ್ಯ ನಂಬರ್ ಪ್ಲೇಟ್ ಮರೆಮಾಚಿರುವ ಇಂತಹ ನೂರಾರು ವಾಹನಗಳು ಈ ಕಚೇರಿಯ ಎದುರು ಸಾಲಾಗಿ ನಿಂತಿರುತ್ತವೆ. ಈ ವಾಹನಗಳ ನಂಬರ್ ಪ್ಲೇಟ್ ಗೋಚರಿಸದಂತೆ ಬಂಪರ್ ಹಾಗೂ ಗ್ರಿಲ್ ಅಳವಡಿಸಲಾಗಿರುತ್ತದೆ. ಈ ವಾಹನಗಳು ಸಾಲಾಗಿ ನಿಂತಿರುವುದು ಫಿಟ್ನೆಸ್ ಸರ್ಟಿಫಿಕೇಟ್ ಹಾಗೂ ಪರ್ಮಿಟ್ ಪಡೆಯಲು!
ಈ ಬೃಹತ್ ವಾಹನಗಳು ನಂಬರ್ ಪ್ಲೇಟ್ ಗೋಚರಿಸದಂತೆ ವಾಹನದ ಭಾಗವನ್ನು ನಿಯಮ ಬಾಹಿರವಾಗಿ ಮಾರ್ಪಾಡು ಮಾಡಿದ್ದರೂ ಸಹ ಆರ್ ಟಿಒ ಅಧಿಕಾರಿಗಳು ಕಣ್ಣು ಮುಚ್ಚಿ ಎಫ್ ಸಿ ಹಾಗೂ ಪರ್ಮಿಟ್ ಗೆ ಮುದ್ರೆ ಒತ್ತಿ ಸಹಿ ಮಾಡುತ್ತಾರೆ. ಆರ್ ಟಿಒ ಅಧಿಕಾರಿಗಳು ವಾಹನವನ್ನು ತಪಾಸಣೆ ಮಾಡದೇ ಕಣ್ಣುಮುಚ್ಚಿ ಸಹಿ ಮಾಡುತ್ತಾರೆ ಎಂಬುದಕ್ಕೆ ಈ ವಾಹನಗಳೇ ಸಾಕ್ಷಿ!
ಲಾರಿಗಳು ಮಾತ್ರವಲ್ಲ... ನಂಬರ್ ಪ್ಲೇಟ್ ಮರೆಮಾಚಿರುವ ಗೂಡ್ಸ್ ಆಟೋಗಳು, ಟೆಂಪೋಗಳು, ಬಸ್ಸು ಟ್ಯಾಂಕರ್, ಬೈಕ್ ಮತ್ತಿತರ ಬಹುತೇಕ ಶೇ. 75 ವಾಹನಗಳ ನಂಬರ್ ಪ್ಲೇಟುಗಳು ಇದೇ ರೀತಿ ಮರೆಮಾಚಿರುತ್ತವೆ.
ಇದು ಮೋಟಾರು ವಾಹನ ಕಾಯಿದೆಯನ್ವಯ ದಂಡನಾರ್ಹ ಅಪರಾಧ!
ಅತಿ ವೇಗದ ವಾಹನ ಚಾಲನೆ, ಅಪಘಾತ, ನಿಷೇಧಿತ ಪ್ರದೇಶದಲ್ಲಿ ವಾಹನ ನಿಲ್ಲಿಸುವುದು, ಅಪಾಯಕಾರಿ ವಾಹನ ಚಾಲನೆ, ಹಿಟ್ ಅಂಡ್ ರನ್, ಅಕ್ರಮ ವಸ್ತುಗಳ ಸಾಗಾಟ, ಮಾನವ ಅಪಹರಣ ಮುಂತಾದ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಳ್ಳುವುದರಿಂದ ಬಚಾವ್ ಆಗಲೆಂದು ಈ ವಾಹನಗಳು ತಮ್ಮ ವಾಹನಗಳ ನಂಬರ್ ಪ್ಲೇಟ್ ಗೋಚರಿಸದಂತೆ ಮರೆಮಾಚಿ ವಾಹನವನ್ನು ವಿರೂಪಗೊಳಿಸಿರುತ್ತವೆ.
ವಾಹನಗಳ ನಂಬರ್ ಪ್ಲೇಟ್ ಮರೆಮಾಚಿರುವುದರಿಂದ ರಸ್ತೆಯ ಬದಿಯಲ್ಲಿ ಇರುವ ರಹಸ್ಯ ಕ್ಯಾಮರಾಗಳ ಕಣ್ಣಿಗೆ ಈ ವಾಹನಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹಿಟ್ ಅಂಡ್ ರನ್, ಮಾನವ ಅಪಹರಣ ಹಾಗೂ ಅಕ್ರಮ ವಸ್ತುಗಳ ಸಾಗಾಟದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.
ಕರ್ನಾಟಕದಾದ್ಯಂತ ರಸ್ತೆ ಬದಿಯಲ್ಲಿ ಸಹಸ್ರಾರು ಕ್ಯಾಮರಾಗಳಿವೆ. ಈ ಕ್ಯಾಮರಾಗಳ ಕಣ್ಣಿಗೆ ನಂಬರ್ ಪ್ಲೇಟ್ ಮರೆಮಾಚಿರುವ ಇಂತಹ ಬೃಹತ್ ವಾಹನಗಳು ಗೋಚರಿಸುವುದಿಲ್ಲವೇ?. ಹಾಗಾದರೆ ಈ ರಹಸ್ಯ ಕ್ಯಾಮರಾಗಳಿರುವುದು ಯಾವ ಪುರುಷಾರ್ಥಕ್ಕೆ?
ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಸವಾರಿ ಮಾಡುವವರನ್ನು ಬೆನ್ನಟ್ಟಿ ಬೇಟೆಯಾಡುವ ಸಂಚಾರಿ ಪೊಲೀಸರ ಕಣ್ಣಿಗೆ ಈ ಬೃಹತ್ ವಾಹನಗಳು ಗೋಚರಿಸುವುದಿಲ್ಲವೇ?
ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಿ
ಪೊಲೀಸ್ ಇಲಾಖೆಯು ಈ ಕೂಡಲೇ ಎಚ್ಚೆತ್ತು ನಂಬರ್ ಪ್ಲೇಟ್ ಮರೆಮಾಚಿರುವ ಇಂತಹ ಎಲ್ಲ ವಾಹನಗಳನ್ನು ಜಪ್ತಿ ಮಾಡಿ ಅದರ ಮಾಲೀಕರಿಗೆ ದಂಡ ವಿಧಿಸುವ ಜೊತೆಗೆ ಇಂತಹ ವಾಹನಗಳ ಮರೆಮಾಚಿದ ನಂಬರ್ ಪ್ಲೇಟುಗಳನ್ನು ಗಮನಿಸದೆ ಎಫ್ ಸಿ ಹಾಗೂ ಪರ್ಮಿಟ್ ನೀಡಿದ ಆರ್ ಟಿಒ ಅಧಿಕಾರಿಗಳ ವಿರುದ್ಧವೂ ಎಫ್ ಐ ಆರ್ ದಾಖಲಿಸಬೇಕಾಗಿದೆ.
-ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು