ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ. ಪರಮೇಶ್ವರ್ ಪ್ರಗತಿ ಪರಿಶೀಲನೆ ಸಭೆಗೆ ತಿಪಟೂರಿಗೆ ಆಗಮಿಸಿದ್ದ ವೇಳೆ ಇಲ್ಲಿನ ಕಾಂಗ್ರೆಸ್ ಮುಖಂಡ ಲೋಕೇಶ್ವರ ಮನೆಗೆ ಭೇಟಿ ನೀಡಿ ಲಘು ಉಪಹಾರ ಸೇವಿಸಿದರು.
ತಿಪಟೂರು : ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ. ಪರಮೇಶ್ವರ್ ಪ್ರಗತಿ ಪರಿಶೀಲನೆ ಸಭೆಗೆ ತಿಪಟೂರಿಗೆ ಆಗಮಿಸಿದ್ದ ವೇಳೆ ಇಲ್ಲಿನ ಕಾಂಗ್ರೆಸ್ ಮುಖಂಡ ಲೋಕೇಶ್ವರ ಮನೆಗೆ ಭೇಟಿ ನೀಡಿ ಲಘು ಉಪಹಾರ ಸೇವಿಸಿದರು.
ಈ ವೇಳೆ ಲೋಕೇಶ್ವರ ಅವರಿಗೆ ತಾಲೂಕಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಕೊಬ್ಬರಿ ಬೆಲೆ ತುಂಬಾ ಕಡಿಮೆಯಾಗಿರುವುದರಿಂದ ಇಲ್ಲಿನ ತೆಂಗು ಬೆಳೆಗಾರರು ನಷ್ಟದಲ್ಲಿದ್ದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಕೊಬ್ಬರಿಗೆ ನ್ಯಾಯಯುತ ಕೊಡಿಸಬೇಕು. ನಗರದಲ್ಲಿ ನೂತನವಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಿ ಐದಾರೂ ತಿಂಗಳು ಕಳೆದರೂ ಸದರಿ ಗುತ್ತಿಗೆದಾರನಿಗೆ ಹಣ ಪಾವತಿಸದ ಕಾರಣ ಪೊಲೀಸ್ ಇಲಾಖೆಗೆ ವಹಿಸಿಲ್ಲವಾದ್ದರಿಂದ ಕೂಡಲೇ ಗುತ್ತಿಗೆದಾರರಿಗೆ ಪಾವತಿಸಬೇಕಾದ ಹಣವನ್ನು ನೀಡಿ ನಗರ ಪೊಲೀಸ್ ಠಾಣೆಗೆ ವಹಿಸಿಕೊಟ್ಟು ಅಪಘಾತಗಳನ್ನು ತಪ್ಪಿಸಬೇಕು. ಇಲ್ಲಿನ ಶಾಸಕರು ಸರಿಯಾಗಿ ಕೆಲಸ ನಿರ್ವಹಿಸುತ್ತಿರುವ ತಾಲೂಕಿನ ಕೆಲ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲು ತಮಗೆ ಮನವಿ ಮಾಡಿದ್ದು, ಯಾರನ್ನೂ ವರ್ಗಾವಣೆ ಮಾಡದೆ ಸದರಿ ಸ್ಥಳದಲ್ಲಿಯೇ ಮುಂದುವರೆಸುವಂತೆ ಮನವಿ ಮಾಡಿದರು.
ತಾಲೂಕು ಕಾಂಗ್ರೆಸ್ ಘಟಕವನ್ನು ಪುನರ್ ರಚಿಸುವ ಕೆಲಸ ತುಂಬಾ ದಿನಗಳಿಂದ ನೆನಗುದಿಗೆ ಬಿದ್ದಿದ್ದು, ಕೂಡಲೇ ನೂತನ ಸಮಿತಿಯನ್ನು ರಚಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ದುಡಿದಿರುವ ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆಯಲು ಸಜ್ಜುಗೊಳಿಸಬೇಕಿದೆ. ತಾಲೂಕಿನ ಇಬ್ಬರು ಬಡ ವಿದ್ಯಾರ್ಥಿನಿಯರು ಎಂಜಿನಿಯರಿಂಗ್ ಓದಲು ಇಷ್ಟಪಟ್ಟಿದ್ದು ನಿಮ್ಮ ಸ್ವಂತ ಖಾಸಗಿ ಕಾಲೇಜಾದ ಎಸ್‌ಎಸ್‌ಐಟಿ ಕಾಲೇಜಿನಲ್ಲಿ ತಲಾ 75 ಸಾವಿರ ಶುಲ್ಕವನ್ನು ಕಡಿಮೆ ಮಾಡಿ ದಾಖಲಾತಿ ಮಾಡಿಕೊಳ್ಳಲು ಮನವಿ ಮಾಡಿದ್ದನ್ನು ಗೃಹ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು. ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿ ತಿಪಟೂರನ್ನು ಜಿಲ್ಲಾ ಕೇಂದ್ರವಾಗಿಸುವ ನಿಟ್ಟಿನಲ್ಲಿ ತಾಲೂಕಿಗೆ ಹೆಚ್ಚು ಅಭಿವೃದ್ಧಿ ಕೆಲಸವನ್ನು ಮಾಡಿಸುವ ಮೂಲಕ ಆದಷ್ಟುಬೇಗ ತಿಪಟೂರು ಉಪವಿಭಾಗವನ್ನು ಜಿಲ್ಲೆಯನ್ನಾಗಿ ಮಾಡಿಕೊಡಬೇಕೆಂದೂ ಸಹ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮುಖಂಡ ಕೆಪಿಸಿಸಿ ಮುಖಂಡರಾದ ಮುರಳೀಧರ್ ಹಾಲಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪುರವಾಡ್ ಸೇರಿದಂತೆ ಲೋಕೇಶ್ವರ ಅಭಿಮಾನಿ ಬಳಗದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.