ಕಲಬುರಗಿ: ಪುಟ್ಟ ಕಂದಮ್ಮನಿಗೆ ಹೃದಯ ಕಾಯಿಲೆ, ಪೋಷಕರಿಗೆ ಅಲೆಯುವಂತೆ ಮಾಡಿದ್ರಾ ಜಿಮ್ಸ್‌ ವೈದ್ಯರು!?

Published : Oct 02, 2022, 09:30 PM IST
ಕಲಬುರಗಿ: ಪುಟ್ಟ ಕಂದಮ್ಮನಿಗೆ ಹೃದಯ ಕಾಯಿಲೆ, ಪೋಷಕರಿಗೆ ಅಲೆಯುವಂತೆ ಮಾಡಿದ್ರಾ ಜಿಮ್ಸ್‌ ವೈದ್ಯರು!?

ಸಾರಾಂಶ

ಮಗುವಿನ ಎಡ ಹೃದಯ ಬೆಳೆದೇ ಇಲ್ಲ, ವಾಸಿ ಮಾಡಲಾಗದ ಕಾಯಿಲೆ ಎಂದು ಜಯದೇವ ಸಂಸ್ಥೆಯ ತಜ್ಞ ವೈದ್ಯರ ಅಭಿಪ್ರಾಯ

ಶೇಷಮೂರ್ತಿ ಅವಧಾನಿ

ಕಲಬುರಗಿ(ಅ.02):  ಹೃದಯ ಕಾಯಿಲೆಯಿಂದಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ 3 ದಿನದ ಮಗುವನ್ನು ಬೆಂಗಳೂರಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆಗೆ ಕರೆದೊಯ್ದ ಪೋಷಕರಿಗೆ ’ಇದು ವಾಸಿಯಾಗದ ಕಾಯಿಲೆ, ಇಷ್ಟೊಂದು ದೂರ ಕಷ್ಟಪಟ್ಟು ಬರೋಕ್ಕು ಮುಂಚೆಯೇ ಕರೆ ಮಾಡಿ ಚರ್ಚಿಸಿದ್ದರೆ ಅಲೆದಾಟವಾದರೂ ತಪ್ಪುತ್ತಿತ್ತು ಎಂದು ಸಮಾಧಾನ ಮಾಡಿ ಮರಳಿ ಕಲಬುರಗಿಗೆ ಕಳುಹಿಸಿದ ಪ್ರಸಂಗ ನಡೆದಿದೆ. ಈ ಪ್ರಕರಣದೊಂದಿಗೆ ತಮ್ಮ ಮುಂದಿರೋ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಅದರ ಸಾರಾಸಾರ ಅರಿತು ಮುಂದಡಿ ಇಡದ, ಯೋಚಿಸಿ ಸಲಹೆ ಸೂಚನೆ ನೀಡದೇ ಅನ್ಯರತ್ತ ಸಾಗಹಾಕಿ ಕೈತೊಳೆದುಕೊಂಡರಾಯ್ತೆಂಬ ಇಲ್ಲಿನ ಜಿಮ್ಸ್‌ ಆಸ್ಪತ್ರೆಯ ವೈದ್ಯರ ವಿಲಕ್ಷಣ ಧೋರಣೆ ಬಟಾಬಯಲಾಗಿದೆ!

ಚಿತ್ತಾಪುರದ ರಾಂಪೂರಹಳ್ಳಿಯ ಮಲ್ಲಿಕಾರ್ಜುನ್‌ ಮತ್ತು ಗಂಗಮ್ಮ ದಂಪತಿಯೇ ಈ ಪ್ರಕರಣದಲ್ಲಿ ಕಲಬುರಗಿ ಜಿಮ್ಸ್‌ ವೈದ್ಯರ ಸಲಹೆ ಮೇರೆಗೆ ಮಗು ಬದುಕಿದರೆ ಸಾಕೆಂದು ಅಲ್ಲಿ ಇಲ್ಲಿ ಸಾಲಸೋಲ ಮಾಡಿ ಹಣ ಹೊಂದಿಸಿ ಬೆಂಗಳೂರಿಗೆ ದೌಡಾಯಿಸಿದ್ದರು. ಹೀಗೆ ಓಡೋಡಿ ಹೋಗಿದ್ದ ದಂಪತಿಗೆ ಜಯದೇವದಲ್ಲಿರುವ ಹೃದ್ರೋಗ ತಜ್ಞರು ಮಗುವಿಗೆ ವಾಸಿಯಾಗದ ಕಾಯಿಲೆ, ಹೃದಯದ ಎದೆಯ ಕವಾಟವೇ ಬೆಳೆದಿಲ್ಲವೆಂದು ಹೇಳಿದ್ದಲ್ಲದೆ ಇದಕ್ಕೆ ಚಿಕಿತ್ಸೆಯೇ ಇಲ್ಲ, ಮಗು ಅದೆಷ್ಟುದಿನ ಬದುಕಿರುತ್ತೋ ಅಷ್ಟುದಿನ ಚೆನ್ನಾಗಿ ನೋಡಿಕೊಳ್ಳಿರೆಂದು ಹೇಳಿ ಕಳುಹಿಸಿದ್ದಾರೆ.

ಅಕ್ರಮ ಗಾಂಜಾ ದಂಧೆಕೋರರ ದಾಳಿ: ಹಲ್ಲೆಗೀಡಾದ ಸಿಪಿಐ ಇಲ್ಲಾಳ್‌ಗೆ ಶ್ವಾಸನಾಳ ಶಸ್ತ್ರ ಚಿಕಿತ್ಸೆ

ಮಗು- ಪೋಷಕರನ್ನು ಅಲೆದಾಡಿಸಿದ ಜಿಮ್ಸ್‌ ವೈದ್ಯರು!

ಉಪಕ್ರಮಗಳಿಗೆ ಪೋಷಕರಿಗೆ ಸೂಚಿಸುವ ಮೊದಲು ಸಂಬಂಧಪಟ್ಟಂತಹ ವೈದ್ಯರು ಪೂರ್ವಾಪರ ಆಲೋಚನೆ ಮಾಡಿ, ತಜ್ಞರನ್ನು ಸಂಪರ್ಕಿಸಿದ್ದರೆ ಇಂತಹ ಓಡಾಟ ತಪಿಸಬಹುದಿತ್ತು ಎಂದು ಕಲಬುರಗಿ ಜಿಮ್ಸ್‌ ವೈದ್ಯರ ನಡೆಯ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಪ್ರಕರಣದಲ್ಲಿ ಖುದ್ದು ಜಯದೇವ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ ಮಾತನಾಡಿ, ಮಾತನಾಡಿದ್ದು ಹೈಪೋಕ್ರೇಟಿಕ್‌ ಲೆಫ್ಟ್‌ ಹಾರ್ಟ್‌ ಸಿಂಡ್ರೋಮ್‌ನಿಂದಾಗಿ ಮಗುವಿನ ಹೃದಯದ ಎಡಭಾಗವೇ ಬೆಳೆದಿಲ್ಲ. ಹೃದಯ ಕವಾಟಗಳೂ ಬೆಳೆದಿಲ್ಲ. ಇಂತಹ ಪ್ರಕರಣಗಳಲ್ಲಿ ವಾಸಿ ಮಾಡುವ ವಿಧಾನಗಳೇ ಇಲ್ಲ. ಹೀಗಿರುವಾಗ ಪೋಷಕರು ತುಂಬ ತೊಂದರೆಯಲ್ಲಿ, ಒತ್ತಡದಲ್ಲಿ ಓಡೋಡಿ ಬರೋದು, ಹಣ ಖರ್ಚು ಅಷ್ಟೆಎಂದು ಪೋಷಕರೊಂದಿಗೆ ಮಾತನಾಡುತ್ತ ತಮ್ಮ ಬೇಸರ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

ಮಗುವಿನ ಹೃದಯದಲ್ಲಿ ರಂಧ್ರವಿದೆ ಎಂಬ ವೈದ್ಯರ ಮಾತಿಗೆ ಹೌಹಾರಿದ್ವಿ. ಬೆಂಗಳೂರಿಗೆ ಕರೆದೊಯ್ಯಿರೆಂದಾಗ ಜೀಂವಾ ಹೋದ್ಹಂಗೇ ಆಯ್ತು. ಆಂಬುಲೆನ್ಸ್‌ಗೂ ಹಣವಿರಲಿಲ್ಲ. ಜಿಮ್ಸ್‌ನಿಂದ ಆಂಬುಲೆನ್ಸ್‌ ಸೇವೆ ಮೊದಲು ನಿರಾಕರಿಸಲಾಗಿತ್ತು. ಮಾಧ್ಯಮಗಳಿಗೆ ಈ ವಿಚಾರ ತಲುಪುತ್ತಿದ್ದಂತೆಯೇ ಆಂಬ್ಯೂಲೆನ್ಸ್‌ನಲ್ಲಿ ನಮ್ನನ್ನು ಕಳುಹಿಸಿದರು. ಒಂದೊಂದು ರುಪಾಯಿಗೆ ಪರದಾಡಿದ ನಾವು ಬೆಂಗಳೂರು ಜಯದೇವಕ್ಕೆ ಹೋದರೆ ಅಲ್ಲಿ ನಮ್ಮ ಮಗನಿಗೆ ಬಂದಿರೋದು ವಾಸಿಯಾಗದ ಕಾಯಿಲೆ ಎಂದು ಹೇಳಿದ್ದಾರೆ ಅಂತ ಚಿತ್ತಾಪುರದ ಮಗುವಿನ ಪೋಷಕ ಮಲ್ಲಿಕಾರ್ಜುನ್‌ ರಾಂಪೂರ ತಿಳಿಸಿದ್ದಾರೆ.  
 

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ